ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಆಯೋಗದ ಅಧ್ಯಕ್ಷ ಕಾಡೇನಹಳ್ಳಿ ನಾಗಣ್ಣಗೌಡ ನೇತೃತ್ವದ ತಂಡ ಆರೋಗ್ಯ ಇಲಾಖೆ ವಸತಿ ಗೃಹ, ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಈ ವೇಳೆ ನಾಗಣ್ಣಗೌಡ ಮಾತನಾಡಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಪಕ್ಕದಲ್ಲಿ ಮತ್ತು ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ಇಂತಹ ಕಾನೂನು ಬಾಹಿರ ಕೃತ್ಯ ನಡೆಯುತ್ತಿರುವುದು ಆಘಾತಕಾರಿ ವಿಷಯ. ಇದರಲ್ಲಿ ಯಾವ ಅಧಿಕಾರಿಗಳ ಕೈವಾಡವಿದೆ ಎನ್ನುವುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ ಎಂದರು.ಇದೊಂದು ಗಂಭೀರ ಪ್ರಕರಣ. ಈ ಬಗ್ಗೆ ಜಿಲ್ಲಾಡಳಿತದಿಂದ ವರದಿ ಕೇಳಲಾಗಿದೆ. ಇದರ ದೊಡ್ಡ ಜಾಲವೇ ಇದೆ. ತಾಲೂಕು ಆರೋಗ್ಯಾಧಿಕಾರಿ, ಸಿಡಿಪಿಒ ಸೇರಿದಂತೆ ಎಲ್ಲರೂ ಇದಕ್ಕೆ ಉತ್ತರ ನೀಡಬೇಕಿದೆ. ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು.
ಯಾರ ಗಮನಕ್ಕೂ ಬಾರದೆ ಹಲವು ವರ್ಷಗಳಿಂದ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವುದು ಸಮಾಜ ತಲೆ ತಗ್ಗಿಸುವ ಕೆಲಸವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು ಎಂದರು.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಇದೊಂದು ಗಂಭೀರ ಪ್ರಕರಣ. ಹಾಡ್ಯ ಆಲೆಮನೆ ಘಟನೆಗಳ ನೆನಪು ಮಾಸುವ ಮುನ್ನವೇ ಈ ಪ್ರಕರಣ ನಡೆದಿರುವುದು ಆತಂಕಕಾರಿ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರಾಜಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ತಹಸೀಲ್ದಾರ್ ಶ್ರೇಯಸ್, ಇಒ ಲೋಕೇಶ್ ಮೂರ್ತಿ, ಆರೋಗ್ಯ ಇಲಾಖೆ ನೋಡಲ್ ಅಧಿಕಾರಿ ಸೋಮಶೇಖರ್, ಸಿಪಿಐ ಕುಮಾರ್, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅರವಿಂದ್, ಬಿಇಒ ಚಂದ್ರಶೇಖರ್, ಸಿಡಿಪಿಒ ಪೂರ್ಣಿಮಾ ಮುಂತಾದವರು ಇದ್ದರು.