ತೆರಿಗೆ ಹೆಚ್ಚಿಸಿ ಪಾಪ ಕಟ್ಟಿಕೊಂಡ ರಾಜ್ಯ ಸರ್ಕಾರ

KannadaprabhaNewsNetwork |  
Published : Sep 23, 2025, 01:03 AM IST
ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಸಿದ್ದರಿಂದ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಜಿಎಸ್‌ಟಿ ವಿಜಯೋತ್ಸವವನ್ನು ಕಾಲ್ನಡಿಗೆ ಜಾಥದ ಮೂಲಕ ಆಚರಿಸಿದರು. ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ದೇವರಾಜ್‌ ಶೆಟ್ಟಿ ಹಾಗೂ ಪಕ್ಷದ ಮುಖಂಡರು ಇದ್ದರು. | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ಜನತೆಯ ತೆರಿಗೆ ಹೊರೆ ಹೆಚ್ಚಿಸಿ ಪಾಪ ಕಟ್ಟಿಕೊಂಡಿದೆ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ನಾಗರಿಕರ ಜಿಎಸ್‌ಟಿಯನ್ನು ಇಳಿಕೆಗೊಳಿಸುವ ಮುಖಾಂತರ ಪುಣ್ಯವನ್ನು ಕಟ್ಟಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಜನತೆಯ ತೆರಿಗೆ ಹೊರೆ ಹೆಚ್ಚಿಸಿ ಪಾಪ ಕಟ್ಟಿಕೊಂಡಿದೆ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ನಾಗರಿಕರ ಜಿಎಸ್‌ಟಿಯನ್ನು ಇಳಿಕೆಗೊಳಿಸುವ ಮುಖಾಂತರ ಪುಣ್ಯವನ್ನು ಕಟ್ಟಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಸಿದ್ದ ಹಿನ್ನೆಲೆ ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಕಾರ್ಯಕರ್ತರು ಸೋಮವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ವಿಜಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹುಟ್ಟಿದ ಮಕ್ಕಳು ಸೇರಿದಂತೆ ಸತ್ತ ಹೆಣದ ಮೇಲೂ ತೆರಿಗೆಯಿದೆ ಹಾಗೂ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದರೆ ಅತಿ ಹೆಚ್ಚು ದರವಿದೆ. ನವರಾತ್ರಿಯಂದು ದಸರಾ ಆನಂದಿಸಲು ತೆರಳಲಾಗುತ್ತಿಲ್ಲ. ಅದು ಕೂಡಾ ಶ್ರೀಮಂತರ ದಸರಾವಾಗಿದೆ. ಪಂಜಿನ ಕವಾಯತ್‌ ವೀಕ್ಷಣೆಗೆ 3 ಸಾವಿರ, ಯುವ ದಸರಾ ವೀಕ್ಷಣೆಗೆ 6 ಸಾವಿರ ಈ ರೀತಿ ಬೆಲೆ ಏರಿಕೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಕನಿಷ್ಠ ಪ್ರಧಾನಿ ಹಾದಿಯಲ್ಲಿ ಎರಡು ಹೆಜ್ಜೆ ಸಾಗಿ, ಆಗ ರಾಜ್ಯ ಜನತೆಗೆ ಹಾಗೂ ವೈಯಕ್ತಿಕವಾಗಿ ಒಳಿತಾಗಲಿದೆ. ಮೋದಿಯವರು ತೆರಿಗೆ ಇಳಿಸಿ ರಾಜ್ಯಕ್ಕೆ ಲಾಭಾಂಶ ನೀಡಿದರೆ, ಸಿದ್ದರಾಮಯ್ಯನವರ ಸರ್ಕಾರ ತೆರಿಗೆ ಹೆಚ್ಚಿಸಿ ಪಾಪವನ್ನು ಕಟ್ಟಿಕೊಳ್ಳುತ್ತಿದ್ದು, ಶೀಘ್ರವೇ ಈ ಪಾಪದಿಂದ ಮುಕ್ತರಾಗಿ ಪುಣ್ಯ ಕಟ್ಟಿಕೊಳ್ಳುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಕ್ಷಣ 20 ರು. ಛಾಪಾ ಕಾಗದ 200 ರೂ., 15 ರೂ. ಪಹಣಿ ಬೆಲೆ 25 ರು., 10 ರು.ನ ಜನನ ಪ್ರಮಾಣಪತ್ರ 50 ರು., ಸಬ್‌ ರಿಜಿಸ್ಟರ್ ಮುದ್ರಾಂಕ ಶುಲ್ಕ ಎರಡು ಪಟ್ಟು ಹೆಚ್ಚಳ, ಮೋಟಾರ್ ವಾಹನ ತೆರಿಗೆ ಹೆಚ್ಚು, ಅಡುಗೆ ಎಣ್ಣೆಯಿಂದ ಕುಡಿಯುವ ಎಣ್ಣೆವರೆಗೂ ಬೆಲೆ ಏರಿಸಿ ಗ್ರಾಹಕರಿಗೆ ಬರೆ ಎಳೆಯಲಾಗುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಹೊರೆ ತಪ್ಪಿಸುವ ದೃಷ್ಟಿಯಿಂದ ಒಂದು ದೇಶ, ಒಂದೇ ತೆರಿಗೆ ಚಿಂತನೆಯಡಿ 13 ಬಗೆಯ ಸೆಸ್ ಹಾಗೂ 17 ವಿವಿಧ ರೀತಿಯ ತೆರಿಗೆಗಳನ್ನು ರದ್ದುಪಡಿಸಿ, ಜನತೆ ಕಷ್ಟದಿಂದ ವಿಮುಕ್ತರಾಗಿ ಹಾಗೂ ಸುಲಭವಾಗಿ ಉದ್ಯೋಗ ನಡೆಸುವಂತೆ ಮಾಡಿದೆ. ಅಲ್ಲದೇ 22 ವಿವಿಧ ಬಗೆಯ ಜೀವರಕ್ಷಕ ಔಷಧಿಗಳ ಮೇಲೆ ಶೂನ್ಯ ತೆರಿಗೆಗೊಳಿಸಿದೆ ಎಂದರು.

ಎಲ್ಲಾ ಬಗೆಯ ಜೀವರಕ್ಷಕ ಔಷಧಿಗಳಿಗೆ ಶೇ.18 ರಷ್ಟಿದ್ದ ತೆರಿಗೆ ಶೇ.5ಕ್ಕೆ ಇಳಿಸಿ ನೇರ ಲಾಭವನ್ನು ಗ್ರಾಹಕರಿಗೆ ಮಾಡಿಕೊಟ್ಟಿದ್ದಾರೆ. ಕಟ್ಟಡ ಸಾಮಾಗ್ರಿಗಳಾದ ಸಿಮೆಂಟ್, ಕಬ್ಬಿಣ ಇತ್ಯಾದಿ ವಸ್ತು, ಖಾಸಗಿ ವಾಹನಗಳ ಖರೀದಿಯಲ್ಲಿ ಶೇ.28ರಷ್ಟಿದ್ದ ತೆರಿಗೆ ಶೇ.18ರಷ್ಟಾಗಿದೆ. ಎಲೆಕ್ಟ್ರಾನಿಕ್‌ ವಸ್ತುಗಳು, ಹಾಲು, ಮೊಸರು, ಬೆಣ್ಣೆ, ತುಪ್ಪ ಇತ್ಯಾದಿಗಳ ತೆರಿಗೆಯನ್ನು ಶೇ.5ರಷ್ಟು ಇಳಿಸಿ ದಸರಾಗೆ ಬಹುಮಾನ ಘೋಷಿಸಿದ್ದಾರೆ ಎಂದು ಹೇಳಿದರು.

ಇನ್ನುಳಿದಂತೆ ಆರೋಗ್ಯ ಹಾನಿಕಾರಕ ವಸ್ತುಗಳಾದ ಗುಟ್ಕಾ, ತಂಬಾಕು ವಸ್ತುಗಳು ಬೆಲೆ ಏರಿಕೆಗೊಂಡಿವೆ ಹಾಗೂ ಬಹುತೇಕ ಶ್ರೀಮಂತರು ಉಪಯೋಗಿಸುವ ಐಷರಾಮಿ ವಸ್ತುಗಳು ಬೆಲೆ ಏರಿಕೆಗೊಂಡಿದೆ. ಅಲ್ಲದೇ ಬಡವರು, ವರ್ತಕರು, ಉತ್ಪಾದಕರ, ಗ್ರಾಹಕರ ಪರವಾಗಿ ಉತ್ತಮ ನಿರ್ಣಯ ಕೈಗೊಂಡಿರುವ ಪ್ರಧಾನಿಗಳು ಜನಸಾಮಾನ್ಯರು ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ ಶೆಟ್ಟಿ ಮಾತನಾಡಿ, ದೇಶದ ಜನರಿಗೆ ಹಬ್ಬದ ವಾತಾವರಣವನ್ನು ನರೇಂದ್ರ ಮೋದಿ ಸರ್ಕಾರ ಮಾಡಿಕೊಟ್ಟಿದೆ. ದೇಶದ ಜನರಿಗೆ ಶೇ.28ರ ಜಿಎಸ್‌ಟಿ ತೆರಿಗೆಯನ್ನು ಶೇ.18 ಕ್ಕೆ ಇಳಿಕೆ, ಶೇ.18ರ ತೆರಿಗೆ ಶೇ.5 ಇಳಿಕೆ ಹಾಗೂ ಬಹುತೇಕ ಶೇ.99 ಮಂದಿ ಬಳಸುವಂತ ವಸ್ತುಗಳ ಶೇ.5ರ ಜಿಎಸ್‌ಟಿ ತೆರಿಗೆಯನ್ನು ಶೂನ್ಯಗೊಳಿಸುವ ಮೂಲಕ ಸಂತಸದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಕಚೇರಿಯಿಂದ ಕಾರ್ಯಕರ್ತರು ಎಂ.ಜಿ.ರಸ್ತೆಯಲ್ಲಿ ಕಾಲ್ನಡಿಗೆ ಜಾಥಾದಲ್ಲಿ ಸಾಗಿ ಪಟಾಕಿ ಸಿಡಿಸಿದರು. ಬಳಿಕ ಅಂಗಡಿ ಸಿಬ್ಬಂದಿ, ಗ್ರಾಹಕರು ಹಾಗೂ ಪರಸ್ಪರ ಸಿಹಿ ಹಂಚುವ ಮೂಲಕ ಜಿಎಸ್‌ಟಿ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕನಕರಾಜ್, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭೆ ಸದಸ್ಯರಾದ ಕವಿತಾ ಶೇಖರ್, ಮಧುಕುಮಾರ್, ಮುಖಂಡರುಗಳದ ಪುಟ್ಟಸ್ವಾಮಿ, ಎಚ್.ಕೆ.ಕೇಶವಮೂರ್ತಿ, ಕೌಶಿಕ್, ದಿನೇಶ್, ಬೆನಡಿಕ್ಟ್ ಜೇಮ್ಸ್, ಪ್ರದೀಪ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ