ಕನ್ನಡಪ್ರಭ ವಾರ್ತೆ ಬೆಳಗಾವಿ
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 10 ತಿಂಗಳು ಕಳೆದರೂ ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾರ್ಯ ನಡೆದಿಲ್ಲ. ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಯನ್ನು ಕೊಂಡಾಡುತ್ತಿದ್ದಾರೆ. ಆದರೆ, ಎಲ್ಲರಿಗೂ ಆ ಗ್ಯಾರಂಟಿ ಯೋಜನೆ ಲಭಿಸಿಲ್ಲ. ಬೆಲೆ ಏರಿಸಿ ಜನರ ಹೊಟ್ಟೆಯ ಮೇಲೆ ಬರೆ ಎಳೆದಿದ್ದಾರೆ. ಬರಗಾಲದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರಾಜ್ಯದ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ಹೆಕ್ಟೇರ್ಗೆ ₹2 ಸಾವಿರ ಬರ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ರಾಜ್ಯದಲ್ಲಿ ಹಿಂಗಾರು, ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಭೀಕರ ಬರಗಾಲವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿಲ್ಲ ಎಂದರು.
ಸಾಕಷ್ಟು ರಸ್ತೆಗಳು ಹದಗೆಟ್ಟಿವೆ. ರಸ್ತೆ ಸುಧಾರಣೆ ಮಾಡುವ ಮನಸ್ಸು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗಿಲ್ಲ. ಅವರು ಒಂದೇ ಒಂದು ಕಾಮಗಾರಿಗೂ ಚಾಲನೆ ನೀಡಿಲ್ಲ ಎಂದು ಆರೋಪಿಸಿದ ಅವರು, ಸತೀಶ ಅವರು ಲೋಕೋಪಯೋಗಿ ಸಚಿವರು ಎಂಬುದೇ ರಾಜ್ಯದ ಜನರಿಗೆ ಗೊತ್ತಿಲ್ಲ. ಕೇವಲ ಸಚಿವ ಸ್ಥಾನ, ಡಿಸಿಎಂ ವಿಚಾರಕ್ಕೆ ಮಾತ್ರ ಅವರು ಸುದ್ದಿಯಲ್ಲಿರುತ್ತಾರೆ ಎಂದು ಟೀಕಿಸಿದರು.ಸಿದ್ದರಾಮಯ್ಯನವರು ಮುಖ್ಯಮಂತ್ರಿ, ಹಣಕಾಸು ಸಚಿವರಾಗಿ ನೀತಿ ಆಯೋಗ, ಜಿಎಸ್ಟಿ ಸಭೆಗೆ ಗೈರಾಗಿದ್ದಾರೆ. ಬೇರೆ ರಾಜ್ಯದ ಕಾಂಗ್ರೆಸ್ ಸಿಎಂಗಳು ಸಭೆಗೆ ಹೋಗುತ್ತಾರೆ. ಆದರೆ ಇವರು ಹೋಗದೇ ಕೃಷ್ಣಭೈರೇಗೌಡರನ್ನು ಸಭೆಗೆ ಕಳುಹಿಸುತ್ತಾರೆ. ವಿನಾಕಾರಣ ಕೇಂದ್ರ ಸರಕಾರ ಅನುದಾನ ಕೊಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಸಾಕಷ್ಟು ಕೊಲೆ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಗೃಹ ಸಚಿವರು ಡಾ.ಜಿ.ಪರಮೇಶ್ವರ ಅವರೋ ಅಥವಾ ಪ್ರಿಯಾಂಕ್ ಖರ್ಗೆ ಅವರೋ?. ಪ್ರತಿಯೊಂದರಲ್ಲೂ ಪ್ರಿಯಾಂಕ್ ಖರ್ಗೆ ಮೂಗು ತೋರಿಸುತ್ತಿದ್ದಾರೆ. ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಕಾಂತರಾಜ ವರದಿಯೋ? ಜಯಪ್ರಕಾಶ ಹೆಗಡೆ ವರದಿಯೋ ಗೊತ್ತಿಲ್ಲ. ಅದರಲ್ಲಿ ಏನಿದೆ ಎಂದು ನೋಡಿಕೊಂಡು, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಸಂಸದೆ ಮಂಗಲ ಅಂಗಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ, ಮುಖಂಡರಾದ ಎಫ್.ಎಸ್.ಸಿದ್ದನಗೌಡರ, ಮಲ್ಲಿಕಾರ್ಜುನ ಮಾದಮ್ಮನವರ, ನಗರ ಸೇವಕ ಹಣಮಂತ ಕೊಂಗಾಲಿ ಇದ್ದರು.
---ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿಬೆಳಗಾವಿ:
ಜಾತಿ, ಮತ, ಪಂಥಗಳನ್ನು ಮೀರಿ ರಾಷ್ಟ್ರೀಯತೆ, ರಾಷ್ಟ್ರದ ಸಮಗ್ರತೆ, ಅಭಿವೃದ್ಧಿ ಪರವಾದ ಕಾರ್ಯಗಳನ್ನು ಮಾಡುತ್ತ ಭಾರತಕ್ಕೆ ಜಗದ್ಗುರು ಸ್ಥಾನ ತಂದುಕೊಡಲು ಹಗಲಿರುಳು ಶ್ರಮಿಸುತ್ತಿರುವ ನೆಚ್ಚಿನ ಪ್ರದಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕಾರ್ಯಕರ್ತರು ಅವಿರತ ಶ್ರಮವಹಿಸಬೇಕೆಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಹೇಳಿದರು.ಸಮೀಪದ ಮುತಗಾ ಗ್ರಾಮದಲ್ಲಿ ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಉಮೇಶ ಪೂರಿ ಅವರ ಮನೆಯಲ್ಲಿ ಆಯೊಜಿಸಿದ್ದ ಉಪಹಾರ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇಶ ಕಳೆದ 10 ವರ್ಷದಲ್ಲಿ ಪ್ರಪಂಚವೇ ಬೆರಗಾಗುವ ಮಟ್ಟಕ್ಕೆ ಅಭಿವೃದ್ಧಿ ಸಾಧಿಸಿದೆ. ಮನೆ ಮನೆಗೆ ಕುಡಿಯುವ ನೀರು, ತ್ರಿ ತಲಾಖ್ ರದ್ದತಿ, ಜಮ್ಮು ಕಾಶ್ಮೀರ ಆರ್ಟಿಕಲ್ 370 ರದ್ದುಗೊಳಿಸಿ ಶತಮಾನಗಳ ಹೋರಾಟ ರಾಮ ಮಂದಿರ ನಿರ್ಮಾಣ, ಉಜ್ವಲಾ ಗ್ಯಾಸ್ ಸಂಪರ್ಕ, ಸ್ಟಾರ್ಟಪ್ ಇಂಡಿಯಾ, ಮೆಕ್ ಇನ್ ಇಂಡಿಯಾ, ವಿಶ್ವಕರ್ಮ ಯೋಜನೆ, ಸ್ವನಿಧಿ ಹೀಗೆ ನೂರಾರು ಯೋಜನೆ ನೀಡಿ ಭಾರತವನ್ನು ಸ್ವಾವಲಂಬನೆ ಮಾಡುವುದರೊಂದಿಗೆ ರಪ್ತು ಮಾಡುವ ದೇಶವಾಗಿ ಹೊರಹೊಮ್ಮಿದೆ. ರಕ್ಷಣಾ ಹಾಗೂ ಅರ್ಥಿಕ ಕ್ಷೇತ್ರಗಳಲ್ಲಿ ಬಲಿಷ್ಠ ರಾಷ್ಟ್ರವನ್ನು ಮೀರಿಸುತ್ತಿದೆ. ಶತ್ರುರಾಷ್ಟಗಳ ಭಯೋತ್ಪಾದನಾ ಕೃತ್ಯಗಳಿಗೆ ಆ ದೇಶದ ಒಳಗೆ ನುಗ್ಗಿ ಶತ್ರುಗಳನ್ನು ಧ್ವಂಸ ಮಾಡಿದ ಕೀರ್ತಿ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ ಎಂದರು.
ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಗುರು ಕೋತಿನ ಮಾತನಾಡಿದರು.ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ರಾಜ್ಯ ಸಾಮಾಜಿಕ ಜಾಲತಾಣದ ನೀತಿನ ಚೌಗಲೆ, ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ದೀಶಾ ಸಮಿತಿ ಸದಸ್ಯ ರಾಜು ದೇಸಾಯಿ, ಸಂತೋಷ ದೇಶನೂರ, ವೀರಭದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.