ಕನ್ನಡಪ್ರಭ ವಾರ್ತೆ ದಾವಣಗೆರೆ
ಅನ್ನ ನೀಡುವ ರೈತರ ದಿನಾಚರಣೆಯನ್ನು ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ಆಚರಣೆ ಮಾಡಬೇಕಿದ್ದ ರಾಜ್ಯ ಸರ್ಕಾರ ರೈತರ ದಿನಾಚರಣೆಗೆ ಮಹತ್ವವನ್ನೇ ನೀಡದಿರುವುದು ದುರಾದೃಷ್ಟಕರ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಬೇಸರ ಹೊರ ಹಾಕಿದರು.ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಪಕ್ಷದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತ ದೇಶದ ಬೆನ್ನೆಲುಬು, ವಕ್ಕಲಿಗ ವಕ್ಕದಿರೆ ಬಿಕ್ಕುವುದು ಜಗವೆಲ್ಲಾ ಎಂಬ ಮಾತುಗಳೆಲ್ಲಾ ಕೇವಲ ಭಾಷಣೆಗಳಿಗಷ್ಟೇ ಸೀಮಿತವಾಗಿದೆ ಎಂದರು. ರೈತ ಪರ ಹೋರಾಟಗಳಲ್ಲಿ ಬಿ.ಎಂ. ಸತೀಶ ಕೊಳೇನಹಳ್ಳಿ ಶ್ರಮ ಇತರರಿಗೂ ಪ್ರೇರಣೆಯಾಗಿದೆ. ಸರ್ಕಾರ ಯಾವುದೇ ಇದ್ದರೂ ರೈತರ ಪರ ಸತೀಶ ಹೊಂದಿರುವ ಬದ್ಧತೆ, ಕಾಳಜಿಯು ಮೆಚ್ಚುವಂತಹದ್ದಿದೆ. ರಾಷ್ಟ್ರೀಯ ರೈತರ ದಿನಾಚರಣೆಯ ಮಹತ್ವವನ್ನು ಅರಿತು, ರೈತರಿಗೆ ಗೌರವಿಸುವ ಕೆಲಸವನ್ನು ಸರ್ಕಾರ ಇನ್ನಾದರೂ ಮಾಡಲಿ ಎಂದು ಅವರು ಹೇಳಿದರು.ಪಕ್ಷದ ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ ಮಾತನಾಡಿ, ಎಪಿಎಂಸಿ ಮಾಜಿ ಅಧ್ಯಕ್ಷರೂ ಆಗಿದ್ದ ಬಿ.ಎಂ.ಸತೀಶ ಕೊಳೇನಹಳ್ಳಿ ಈಚೆಗೆ ಎಪಿಎಂಸಿಯಲ್ಲಿ ಬತ್ತ ಖರೀದಿ ವಹಿವಾಟು ಇ-ಟೆಂಡರ್ ಮೂಲಕವೇ ಆಗುವಂತೆ ಒತ್ತಾಯಿಸಿ ಹೋರಾಟ ನಡೆಸಿದ್ದರು. ಪರಿಣಾಮ ಇದೀಗ ಅದು ಜಾರಿಗೊಂಡಿದೆ. ಗ್ರಾಮೀಣ ಭಾಗಕ್ಕೂ ಇ-ಟೆಂಡರ್ ವಿಸ್ತರಿಸುವಂತೆ ಹೋರಾಟ ನಡೆಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್ ಮಾತನಾಡಿ, ಕನ್ನಡ ಪರ ಸಂಘಟನೆಗಳೆಲ್ಲಾ ಒಂದಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡಿದಂತೆ ಎಲ್ಲಾ ರೈತಪರ ಸಂಘಟನೆಗಳು, ಮುಖಂಡರು ಒಂದಾಗಿ, ರಾಷ್ಟ್ರೀಯ ರೈತರ ದಿನಾಚರಣೆ ಆಚರಿಸುವಂತಾಗಬೇಕು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಎಲ್ಲಾ ರೈತ ಪರ ಸಂಘಟನೆಗಳು ಒಂದಾಗಿ ಆಚರಿಸುವಂತೆ ಮನವಿ ಮಾಡಿದರು.ಪಕ್ಷದ ಹಿರಿಯ ಮುಖಂಡರಾದ ಕುಕ್ಕುವಾಡ ರುದ್ರೇಗೌಡ್ರು, ಅವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಅಣಬೇರು ಶಿವಪ್ರಕಾಶ, ಬಾತಿ ಬಿ.ಕೆ.ಶಿವಕುಮಾರ, ಕನ್ನಡ ಪರ ಹೋರಾಟಗಾರ ಎನ್.ಎಚ್. ಹಾಲೇಶ, ಬಲ್ಲೂರು ಬಸವರಾಜ, ಕುರ್ಕಿ ರೇವಣಸಿದ್ದಪ್ಪ, ಕೊಳೇನಹಳ್ಳಿ ಕೆ.ಶರಣಪ್ಪ, ಕಬ್ಬೂರು ಶಿವಕುಮಾರ, ಮಳಲಕೆರೆ ಸದಾನಂದ, ಅಣಬೇರು ನಂದಕುಮಾರ ಮುಂತಾದವರು ಇತರರು ಇದ್ದರು.