ರಾಜ್ಯ ಸರ್ಕಾರ ಬಹಳದಿನ ಆಡಳಿತ ನಡೆಸಲ್ಲ : ಡಾ.ವೀರಣ್ಣ ಚರಂತಿಮಠ

KannadaprabhaNewsNetwork |  
Published : Jul 31, 2025, 01:35 AM ISTUpdated : Jul 31, 2025, 12:53 PM IST
ರಸಗೊಬ್ಬರ ಪೂರೈಕೆಯಲ್ಲಿ ವಿಫಲವಾದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳು ಆರಂಭವಾಗಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ರೈತರಿಗೆ ಅಗತ್ಯವಿರುವ ರಸಗೊಬ್ಬರ ವಿತರಿಸದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ.

 ಬಾಗಲಕೋಟೆ :  ರಸಗೊಬ್ಬರ ಪೂರೈಕೆಯಲ್ಲಿ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ಸ್ಥಿರತೆಯನ್ನು ಕಳೆದುಕೊಂಡಿದೆ. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಬಹಳದಿನ ಆಡಳಿತ ನಡೆಯುವ ಲಕ್ಷಣವಿಲ್ಲ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ರಸಗೊಬ್ಬರ ಪೂರೈಕೆಯಲ್ಲಿ ವಿಫಲವಾದ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ರೈತ ಮೋರ್ಚಾ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳು ಆರಂಭವಾಗಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ರೈತರಿಗೆ ಅಗತ್ಯವಿರುವ ರಸಗೊಬ್ಬರ ವಿತರಿಸದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. 8 ಲಕ್ಷ 70 ಸಾವಿರ ಮೆಟ್ರಿಕ್ ಟನ್ ಗೊಬ್ಬರವನ್ನು ಕೇಂದ್ರ ಸರ್ಕಾರ ಕೊಟ್ಟಿದ್ದರೂ ಕೂಡಾ, ರಾಜ್ಯ ಸರ್ಕಾರ ಗೊಬ್ಬರದ ಕೃತಕ ಅಭಾವವನ್ನು ನಿರ್ಮಾಣ ಮಾಡಿ, ರೈತರಲ್ಲಿ ಗೊಂದಲವನ್ನು ಮೂಡಿಸುತ್ತಿದ್ದಾರೆ. 

ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಯಾವುದೇ ತರಹ ರಸಗೊಬ್ಬರ ಕೊರತೆಯಾಗದಂತೆ ರೈತರಿಗೆ ವಿತರಿಸಲಾಗಿತ್ತು. ಪ್ರತಿವರ್ಷ ರೈತರಿಗೆ ಕೇಂದ್ರ ಸರ್ಕಾರ ₹6 ಸಾವಿರ, ರಾಜ್ಯದಿಂದ ₹4 ಸಾವಿರ ಸೇರಿ ₹10 ಸಾವಿರ ಕೊಡತಾ ಇದ್ದೆವು. ಆ ₹4 ಸಾವಿರವನ್ನು ರಾಜ್ಯ ಸರ್ಕಾರ ಬಂದ್‌ ಮಾಡಿ, ರೈತರಿಗೆ ಅನ್ಯಾಯ ಮಾಡಿದೆ. ಬಿಜೆಪಿ ಸರ್ಕಾರ ನೀಡಿದ್ದ ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ನಿಲ್ಲಿಸಿದ್ದಾರೆ. ಈ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ರಾಜ್ಯ ಸರ್ಕಾರ, ಸುಮಾರು ₹16 ಕೋಟಿ ಎಸ್ಟಿಪಿ ಹಣ ದುರುಪಯೋಗ ಮಾಡಿಕೊಂಡ ಆರೋಪವನ್ನು ಎದುರುಸುತ್ತಿದೆ ಎಂದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗಡಿಯನ್ನವರ ಮಾತನಾಡಿ, ನಮ್ಮ ಕೇಂದ್ರ ಸರ್ಕಾರ ಯೂರಿಯಾ ಗೊಬ್ಬರವನ್ನು ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಿಗೂ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದೆ. ಸರ್ಕಾರ ರೈತ ವಿರೋಧಿಯಾಗಿದೆ ಎಂದು ದೂರಿದರು.

ಇದಕ್ಕೂ ಮುಂಚೆ ಪಕ್ಷದ ಕಾರ್ಯಾಲಯ ಶಿವಾನಂದ ಜಿನ್ ದಿಂದ ಪಾದಯಾತ್ರೆ ಮೂಲಕ ಬಸವೇಶ್ವರ ಸರ್ಕಲ್‌ಗೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಯಿತು

ಪ್ರತಿಭಟನೆಯಲ್ಲಿ ರೈತ ಮೋರ್ಚಾದ ಶಶಿಕುಮಾರ ಗುಡನ್ನವರ, ರಮೇಶ ಹಾದಿಮನಿ ದೂಳಪ್ಪ ಕೊಪ್ಪದ, ಮುಖಂಡರಾದ ಡಾ.ಎಂ.ಎಸ್. ದಡ್ಡೆನ್ನವರ, ರಾಜು ನಾಯ್ಕರ, ಬಸವರಾಜ ಯಂಕಂಚಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ್, ಶಶಿಕಲಾ ಮಜ್ಜಗಿ, ಜ್ಯೋತಿ ಭಜಂತ್ರಿ, ಬಸವರಾಜ ಹುನಗುಂದ,ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಶಿವಾನಂದ ಟವಳಿ, ಪ್ರಭು ಹಡಗಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ