ರಾಜ್ಯದಲ್ಲಿರುವುದು ಗುಂಡಿಗಳ ಸರ್ಕಾರ: ಸುನೀಲಕುಮಾರ

KannadaprabhaNewsNetwork |  
Published : Sep 27, 2025, 12:01 AM IST
ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲಕುಮಾರ  | Kannada Prabha

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ. ಆಡಳಿತ ಯಂತ್ರಕ್ಕೆ ಉಪಯೋಗವಾಗುವುದಕ್ಕಿಂತ ರಾಜಕೀಯ ಲಾಭ ಆಗಬೇಕೆಂಬ ಉದ್ದೇಶ ಇದರ ಹಿಂದೆ ಅಡಗಿದೆ ಎಂದು ಮಾಜಿ ಸಚಿವ ವಿ. ಸುನೀಲಕುಮಾರ ಆರೋಪಿಸಿದರು.

ಶಿರಸಿ: ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಗುಂಡಿ ಸರ್ಕಾರ. ಯಾವತ್ತು ತನ್ನ ಕೊನೆ ಉಸಿರು ಎಳೆಯುತ್ತದೆ ಎಂಬುದನ್ನು ಜನರು ನಿರೀಕ್ಷೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜನಾಕ್ರೋಶ ವ್ಯಕ್ತವಾಗಿದೆ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನೀಲಕುಮಾರ ಆರೋಪಿಸಿದರು.

ಅವರು ಶುಕ್ರವಾರ ಕುಟುಂಬದವರ ಜತೆ ನಗರದ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದು ಮಾಧ್ಯಮದವರ ಜತೆ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ ಎಂಬ ಘೋಷಣೆಯಲ್ಲಿ ರಾಜ್ಯದ ಅಭಿವೃದ್ಧಿ ಮರೆತಿದ್ದಾರೆ. ರಾಜ್ಯದ ರಸ್ತೆಗಳಲ್ಲಿ ಇಷ್ಟೊಂದು ಗುಂಡಿಗಳನ್ನು ನನ್ನ ರಾಜಕೀಯ ಇತಿಹಾಸದಲ್ಲಿ ನೋಡಿಲ್ಲ. ಉಡುಪಿಯಿಂದ ಶಿರಸಿಗೆ ಆಗಮಿಸುವ ವೇಳೆ ಸುಮಾರು 5 ಸಾವಿರ ಗುಂಡಿಗಳನ್ನು ನೋಡಿದ್ದೇನೆ. ಅಭಿವೃದ್ಧಿ, ಹಿಂದೂ, ದಲಿತ ವಿರೋಧಿ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ. ಆಡಳಿತ ಯಂತ್ರಕ್ಕೆ ಉಪಯೋಗವಾಗುವುದಕ್ಕಿಂತ ರಾಜಕೀಯ ಲಾಭ ಆಗಬೇಕೆಂಬ ಉದ್ದೇಶ ಇದರ ಹಿಂದೆ ಅಡಗಿದೆ. ಕಾಂತರಾಜು ಆಯೋಗದ ವರದಿಗೆ ₹160 ಕೋಟಿ ಖರ್ಚು ಮಾಡಿ ಸ್ವೀಕಾರ ಮಾಡಿಲ್ಲ. ಈಗ ₹420 ಕೋಟಿ ಬಳಸಿಕೊಂಡು ಸಿದ್ಧತೆ ಇಲ್ಲದೇ ಗಣತಿ ಕಾರ್ಯ ಮಾಡಲಾಗುತ್ತಿದೆ. ಸಮೀಕ್ಷೆ ಆರಂಭವಾಗಿ 4 ದಿನಗಳಾದರೂ ಆ್ಯಪ್‌ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ತಾಲೂಕಿನಲ್ಲಿ ಗಣತಿ ಆರಂಭವೇ ಆಗಿಲ್ಲ. ತಯಾರಿ ಮಾಡಿಕೊಂಡು ಸಮೀಕ್ಷೆ ಮಾಡಬಹುದಿತ್ತು. ಕಾಟಾಚಾರಕ್ಕೆ ಸಮೀಕ್ಷೆ ಮಾಡಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.

ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ತ್ಯಜಿಸುವ ಕಾಲ ಸನ್ನಿಹಿತವಾಗಿರುವುದರಿಂದ ಈ ಜಾತಿ ಗಣತಿ ತರಾತುರಿಯಲ್ಲಿ ಮಾಡಲಾಗುತ್ತಿದೆ. ಜನರಿಗೆ ಒಳ್ಳೆಯದಾಗಬೇಕು ಎಂಬುದಕ್ಕಿಂತ ರಾಜಕೀಯ ಲಾಭದ ದುರುದ್ದೇಶದಿಂದ ಸಮೀಕ್ಷೆ ನಡೆಯುತ್ತಿದೆ ಎಂದು ವಿ. ಸುನೀಲಕುಮಾರ ಹೇಳಿದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್‌, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬಿಜೆಪಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಪ್ರಮುಖರಾದ ರವಿಚಂದ್ರ ಶೆಟ್ಟಿ, ಚಂದ್ರಶೇಖರ ಮಾದನಗೇರಿ, ಶ್ರೀಕಾಂತ ನಾಯ್ಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ