ಕನ್ನಡಪ್ರಭ ವಾರ್ತೆ ಹಿರೇಕೆರೂರು
ಯಾವುದೇ ಕಡುಬಡವ ಹಾಗೂ ಹಿಂದುಳಿದ ಮಕ್ಕಳಿಗೆ ಸಕಲ ಸವಲತ್ತು ನೀಡುವಲ್ಲಿ ಕರ್ನಾಟಕ ರಾಜ್ಯ ಬಹಳ ಮುಂಚೂಣಿಯಲ್ಲಿದೆ. ಕರ್ನಾಟಕ ರಾಜ್ಯ ದೇಶದಲ್ಲಿಯೇ ಒಂದು ಮಾದರಿ ರಾಜ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ₹೬.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ೧೦೦ ವಿದ್ಯಾರ್ಥಿಗಳ ಸಾಮರ್ಥ್ಯದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರಿಗೆ ಪ್ರಾಥಮಿಕ ಹಂತದಿಂದ ಕಾಲೇಜುವರೆಗೆ ಎಲ್ಲ ಹಂತದ ಶಿಕ್ಷಣ ನೀಡಲಾಗುತ್ತಿದೆ.
ರಾಮಕೃಷ್ಣ ಹೆಗಡೆ ಅವರಿಂದ ಈಗಿನ ಮುಖ್ಯಮಂತ್ರಿಗಳವರೆಗೆ ಶಾಲಾ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ, ಸೈಕಲ್, ಬಸ್ ಪಾಸ್, ಶಾಲಾ ಕೊಠಡಿಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಶೇ.೧೦೦ ಮಕ್ಕಳಲ್ಲಿ ಶೇ.೬೦ ಮಕ್ಕಳಿಗೆ ವಸತಿ ನಿಲಯದ ಸೌಲಭ್ಯ ನೀಡಿದ ರಾಜ್ಯ ಕರ್ನಾಟಕ ಎಂದರು.
ಈ ಹಿಂದೆ ಮಠಾಧೀಶರು ಅನ್ನದಾಸೋಹದ ಜೊತೆಗೆ ಅಕ್ಷಯ ದಾಸೋಹ ನೀಡಿದ್ದರು, ಜಾತ್ಯತೀತವಾಗಿ ಊಟ ಒದಗಿಸುತ್ತಿದ್ದರು. ಆ ಪರಂಪರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮುಂದುವರೆಸಿದೆ. ವಸತಿ ನಿಲಯಗಳ ಮೂಲಕ ಉಚಿತ ವಸತಿ, ಊಟ, ಶೈಕ್ಷಣಿಕ ಸವಲತ್ತುಗಳನ್ನು ನೀಡುವುದಲ್ಲದೆ, ಇಂದಿರಾ ಕ್ಯಾಂಟೀನ್ ಮೂಲಕ ಸಹ ಬಡವರಿಗೆ ಊಟ-ಉಪಾಹಾರ ನೀಡಲಾಗುತ್ತಿದೆ. ಇದರಿಂದ ಹಸಿವು ಮುಕ್ತ ರಾಜ್ಯ ಮಾಡುವ ಕೆಲಸ ನಿರಂತರವಾಗಿ ಸಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಬರುವ ಕೆಲವೇ ದಿನಗಳಲ್ಲಿ ವಿಶೇಷವಾಗಿ ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜು ಲೋಕಾರ್ಪಣೆ ಮಾಡಲಾಗುವುದು. ಹಾವೇರಿ ಜಿಲ್ಲೆಯ ಮಕ್ಕಳು ಎಂಬಿಬಿಎಸ್ ಕಲಿಯಲು ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಈಗಾಗಲೇ ಎಂಜಿನಿಯರಿಂಗ್ ಕಾಲೇಜು ಕಾರ್ಯನಿರ್ವಸುತ್ತಿದೆ. ಈ ಜಿಲ್ಲೆ ಶೈಕ್ಷಣಿಕ ಹಿಂದುಳಿದ ಹಣೆಪಟ್ಟಿಯಿಂದ ಮುಂದುವರೆದ ಜಿಲ್ಲೆಯಾಗಬೇಕು ಎಂಬುದು ನನ್ನ ಸದಾಶಯ ಎಂದರು.
ಈ ಭಾಗದ ಶಾಸಕರು ಮೂರು ವಿದ್ಯಾರ್ಥಿ ವಸತಿ ನಿಲಯಗಳನ್ನು ಈ ಕ್ಷೇತ್ರದಕ್ಕೆ ತಂದುಕೊಟ್ಟಿದ್ದಾರೆ. ೧೦೦ ಮಕ್ಕಳ ಸಾಮರ್ಥ್ಯವನ್ನು ಬರುವ ದಿನಗಳಲ್ಲಿ ೨೦೦ ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸುವ ಶಾಸಕರ ಶಾಸಕರ ಆಶಯಕ್ಕೆ ನನ್ನ ಬೆಂಬಲವಿದೆ. ಹಿರೇಕೆರೂರು ಭಾಗದ ಕುಡಿಯುವ ನೀರಿನ ಕಾಮಗಾರಿಗೆ ನದಿಗಳ ಮೂಲಕ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಅನೇಕ ವಿದ್ಯಾರ್ಥಿಗಳು ವಸತಿ ನಿಲಯಗಳ ಸೌಲಭ್ಯ ದೊರೆಯದೇ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಪರಿಕಲ್ಪನೆಯಿಂದ ವಸತಿ ನಿಲಯಗಳ ಪರಂಪರೆ ಆರಂಭಿಸಲಾಗಿದೆ ಎಂದರು.
ಶೈಕ್ಷಣಿಕ ಸಾಲಿನ ಆರಂಭದಲ್ಲಿ ಜನಪ್ರತಿನಿಧಿಗಳಿಗೆ ವಸತಿ ನಿಲಯಗಳ ಪ್ರವೇಶಕ್ಕೆ ಬೇಡಿಕೆ ಬರುತ್ತಿದ್ದವು. ಕಳೆದ ಅಧಿವೇಶನದಲ್ಲಿ ರಟ್ಟಿಹಳ್ಳಿ ಹಾಗೂ ಹಿರೇಕೆರೂರು ತಾಲೂಕಿಗೆ ಹೆಚ್ಚುವರಿ ವಿದ್ಯಾರ್ಥಿಗಳ ಬೇಡಿಕೆ ಸಲ್ಲಿಸಲಾಗಿತ್ತು. ಇಂದು ಜಿ+೧ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಹೆಚ್ಚಿನ ಮಕ್ಕಳಿಗೆ ಅವಕಾಶ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಈಗಾಗಲೇ ಹೆಚ್ಚುವರಿ ಮಕ್ಕಳಿಗೆ ಬಾಡಿಗೆ ಕಟ್ಟಡದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಸಂವಿಧಾನ ರಕ್ಷಣೆ ನಮ್ಮ ಸರ್ಕಾರದ ಗುರಿಯಾಗಿದೆ. ಕುವೆಂಪು ಹೇಳಿದಂತೆ ಈ ನಾಡು ಸರ್ವಜನಾಂಗದ ಶಾಂತಿ ತೋಟ, ಅದನ್ನು ಮುಂದುವರೆಸಿಕೊಂಡು ಹೋಗಲಾಗುವುದು. ಬರುವ ಅಧಿವೇಶದಲ್ಲಿ ಹಿರೇಕೆರೂರು ಕ್ಷೇತ್ರದ ನೀರವಾರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮೀ ಬಡಿಗೇರ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.