ಗದಗ: ಬಸವಾದಿ ಶಿವಶರಣರು ಕಾಯಕಕ್ಕೆ ಕೊಟ್ಟಿರುವ ಸ್ಥಾನಮಾನ ಬಹಳ ದೊಡ್ಡದು. ಗುರು, ಲಿಂಗ, ಜಂಗಮಕ್ಕಿಂತಲೂ ಕಾಯಕ ಬಹಳ ವೈಶಿಷ್ಟ್ಯಪೂರ್ಣವಾದುದು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಕಾಯಕ ಮತ್ತು ದಾಸೋಹ ಕುರಿತು ಕಡೂರು ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಮಾತನಾಡಿ, ವಚನಗಳು ಶರಣರ ಅನುಭವದ ನುಡಿಗಳು. ಶರಣರ ದೃಷ್ಟಿಕೋನದಲ್ಲಿ ಜಂಗಮ ಎಂದರೆ ಅನಂತವಾದುದು, ಚಲನಶೀಲವಾದುದು, ಜೀವ ಜಗತ್ತು. ಸತ್ಯ, ಶುದ್ಧ, ಕಾಯಕ ಕೈಗೊಂಡ ಸಮಯದಲ್ಲಿ ಆ ಕಾಯಕ ಕೈಲಾಸವಾಗುವುದು. ಕಾಯಕದಲ್ಲಿ ನಿರತರಾದಾಗ ಗುರು, ಲಿಂಗ, ಜಂಗಮವನ್ನಾದರೂ ಮರೆಯಬೇಕು ಎಂದು ಶರಣರು ಹೇಳಿದ್ದಾರೆ ಎಂದು ಹೇಳಿದರು.
ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಸುಪ್ರಿಯಾ ಎನ್. ನಾಗನೂರ, ವಚನ ಚಿಂತನೆಯನ್ನು ಅಮೃತ ವಿ. ಅಂಗಡಿ ನೆರವೇರಿಸಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಅಕ್ಕಿ ಕೊಟ್ರಪ್ಪನವರು ಮತ್ತು ಅಂದಾನಪ್ಪ ಶಾಂತಪ್ಪ ಚವಡಿ ಪರಿವಾರದವರನ್ನು ಶ್ರೀಗಳು ಸನ್ಮಾನಿಸಿದರು.ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರೂಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೋಗಲ್, ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.