ಹಿಳುವಳ್ಳಿಯ ಸಾಧನ ಜ್ಞಾನ ವಿಕಾಸ ಕೇಂದ್ರದಲ್ಲಿ ಅಜ್ಜಿ ಕೈ ತುತ್ತು , ಕಥೆ ಹೇಳುವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಮಕ್ಕಳಿಗೆ ನ್ಯಾಯ, ನೀತಿ, ಧರ್ಮ, ಸಹನೆ, ಕರುಣೆಯುಳ್ಳ ನೀತಿ ಕಥೆಗಳನ್ನು ಹೇಳುವುದರಿಂದ ಅವರಲ್ಲಿ ಸಾತ್ವಿಕ ಗುಣಗಳು ಬೆಳೆಯುತ್ತದೆ ಎಂದು ಸಾಹಿತಿ ಎಂ.ಜಯಮ್ಮ ತಿಳಿಸಿದರು.
ಭಾನುವಾರ ಪಟ್ಟಣ ಸಮೀಪದ ಹಿಳುವಳ್ಳಿಯ ಗಣಪತಿ ಪೆಂಡಾಲ್ ನಲ್ಲಿ ಧ.ಗ್ರಾ.ಯೋಜನೆಯ ಸಾಧನಾ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಅಜ್ಜಿಯ ಕೈ ತುತ್ತು ಕಾರ್ಯಕ್ರಮದಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳಿಗೆ ನೀತಿ ಕಥೆ ಹೇಳುವುದರಿಂದ ಮಕ್ಕಳಲ್ಲಿ ಚಿಂತನೆ, ತುಲನೆ, ಸೃಜನಾತ್ಮಕ ಕೌಶಲ್ಯ ವೃದ್ದಿಯಾಗಲಿದೆ. ಕಥೆಗಳಲ್ಲಿ ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ಹಾಗೂ ಪ್ರಾಕೃತಿಕ ಎಂದು ವಿಂಗಡಿಸಬಹುದು. ಈ ಎಲ್ಲಾ ಪ್ರಾಕಾರದ ಕಥೆಗಳು ಜಾನಪದ ಸಾಹಿತ್ಯದಲ್ಲೂ ಕಾಣಬಹುದು. ಜೊತೆಗೆ ಪತ್ತೆದಾರಿ ಕಥೆಗಳು ಸಹ ಇದೆ. ಗದ್ಯ ಹಾಗೂ ಪದ್ಯರೂಪದಲ್ಲೂ ಕಥೆಗಳಿವೆ. ಬಸವಣ್ಣ, ಸರ್ವಜ್ಞ ಮುಂತಾದ ವಚನಕಾರರ ತ್ರಿಪದಿ ಷಟ್ಟದಿಗಳಲ್ಲೂ ಇತಿಹಾಸ ಸಾರುವ ವೀರ ಗಾಥೆಗಳ ನೀತಿ ಕಥೆಯನ್ನು ಕಾಣಬಹುದು ಎಂದರು.ಹಿಂದಿನ ಕಾಲದಲ್ಲಿ ಪ್ರತಿ ಕುಟುಂಬಗಳಲ್ಲೂ ಅಜ್ಜಿಯರು ಮೊಮ್ಮಕ್ಕಳಿಗೆ ಕೈ ತುತ್ತು ತಿನ್ನಿಸಿ ಸಂಭ್ರಮಿಸುತ್ತಿದ್ದರು. ಇದರಿಂದ ಅಜ್ಜಿ, ಮೊಮ್ಮಗ, ಮೊಮ್ಮಗಳ ಮದ್ಯೆ ಬಾಂಧವ್ಯ, ಆಪ್ತತೆ ವೃದ್ಧಿಯಾಗುತ್ತಿತ್ತು. ಮನೆಗಳಲ್ಲಿ ಊಟ ಮಾಡುವಾಗ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುತ್ತಿದ್ದರು. ಆದರೆ ಈಗ ಇದು ಸಹ ಮರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ನಂತರ ಮಕ್ಕಳಿಗೆ ಕೈ ತುತ್ತು ತಿನ್ನಿಸಿ ನೀತಿ ಕಥೆಗಳನ್ನು ಹೇಳಿದರು.
ಧ.ಗ್ರಾ.ಯೋಜನೆಯ ಸೇವಾ ಪ್ರತಿನಿಧಿ ಶಶಿಕಲಾ ಮಾತನಾಡಿ, ಧರ್ಮಸ್ಥಳದ ಮಾತೃಶ್ರೀ ಅಮ್ಮನವರ ಆಶಯದಂತೆ ಎಲ್ಲಾ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲೂ ಅಜ್ಜಿ ಕೈ ತುತ್ತು ಹಾಗೂ ಅಜ್ಜಿಯ ನೀತಿ ಕಥೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಹಿಂದೆ ಮಕ್ಕಳಿಗೆ ಊಟ ಮಾಡಿಸುವಾಗ ನೀತಿ ಕಥೆ ಹೇಳುತ್ತಾ ಊಟ ಮಾಡಿಸುತ್ತಿದ್ದರು. ಈಗ ಮೊಬೈಲ್ ಕೊಟ್ಟು ಊಟ ಮಾಡಿಸುತ್ತಿದ್ದಾರೆ. ಇದರಿಂದ ನೀತಿ ಕಥೆ ಗಳು ಮರೆತು ಹೋಗುತ್ತಿದೆ. ಅದನ್ನು ಮತ್ತೆ ಪ್ರಾರಂಭಿಸುವ ಉದ್ದೇಶದಿಂದ ಮತ್ತು ಅಜ್ಜಿಯ ಕಥೆ ಹೇಳುವ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ, ಸದಸ್ಯೆ ಶ್ರೀಮತಿ, ಸಾಧನ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಪವಿತ್ರ ಇದ್ದರು. ರೇಶ್ಮಾ ವಂದಿಸಿದರು.