ಕೊಪ್ಪಳ: ಬಿಎಸ್‌ಪಿಎಲ್ ವಿರುದ್ಧ ಕೊಪ್ಪಳದಲ್ಲಿ ನಡೆಯುತ್ತಿರುವ ಹೋರಾಟ ಹಳಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಹೋರಾಟದ ಸಂಘಟಕರು ಹಾಗೂ ಸಂಬಂಧಪಟ್ಟವರ ಮೇಲಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಅವರಿಂದ ಮಾತ್ರ ವ್ಯವಸ್ಥಿತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ನಿಲುವನ್ನು ಗವಿಶ್ರೀಗಳು ಒಂದು ವರ್ಷದ ಹಿಂದೆಯೇ ಸ್ಪಷ್ಟಪಡಿಸಿದ್ದರು. ಅಂದು ಸಾಮೂಹಿಕವಾಗಿ ಕೈಗೊಂಡ ನಿರ್ಧಾರವನ್ನು ಈಡೇರಿಸಲು ಸ್ಥಳೀಯ ಶಾಸಕ ಮತ್ತು ಸಂಸದರು ಈ ವರೆಗೆ ಏನು ಮಾಡಿದ್ದಾರೆ ಎಂಬುದನ್ನು ಹೋರಾಟಗಾರರು ಪ್ರಶ್ನಿಸಬೇಕಿತ್ತು. ಜವಾಬ್ದಾರಿ ನಿಭಾಯಿಸಬೇಕಾದವರನ್ನು ಬಿಟ್ಟು, ಜವಾಬ್ದಾರಿ ನೆನಪಿಸಿದವರನ್ನೇ ಗುರಿಯಾಗಿಸಿಕೊಂಡಿರುವುದು ಎಷ್ಟು ಸರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವಮಾನಕರ ರೀತಿಯಲ್ಲಿ ಪ್ರತಿಭಟನಾ ವೇದಿಕೆಯಿಂದ ನಿರ್ಗಮಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಎಂಬುದನ್ನು ಸಂಘಟಕರು ಚಿಂತಿಸಬೇಕು. ಕಾರ್ಖಾನೆ ಸಮಸ್ಯೆ ಕುರಿತು ಸ್ಥಳೀಯ ಶಾಸಕರು ಮತ್ತು ಸಂಸದರು ಈ ವರೆಗೆ ಏಕೆ ಮೌನವಾಗಿದ್ದಾರೆ? ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಈ ಸಮಸ್ಯೆಯನ್ನು ಎಷ್ಟು ಬಾರಿ ಪ್ರಸ್ತಾಪಿಸಿದ್ದಾರೆ? ಸಮಸ್ಯೆ ಪರಿಹಾರಕ್ಕೆ ಅವರು ಕೈಗೊಂಡ ಕ್ರಮಗಳೇನು? ಎಂಬ ಪ್ರಶ್ನೆಗಳನ್ನು ಹೋರಾಟಗಾರರು ವೇದಿಕೆಯಲ್ಲಿ ಗಟ್ಟಿಯಾಗಿ ಕೇಳಬೇಕಿತ್ತು. ಆದರೆ ಬೇರೆ ವಿಚಾರಗಳಿಗೆ ಆದ್ಯತೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.ರಾಜಕೀಯ ಪ್ರೇರಿತ ಹೋರಾಟವಾಗದಿರಲಿ: ಹೋರಾಟವು ಯಾವುದೋ ಒಂದು ಪಕ್ಷ ಅಥವಾ ಸಿದ್ಧಾಂತದ ಪರವಾಗಿ ನಡೆಯುತ್ತಿದೆ ಎಂಬ ಅನುಮಾನ ಜನಸಾಮಾನ್ಯರಲ್ಲಿ ಬಲವಾಗುತ್ತಿದೆ. ಕಾರ್ಖಾನೆ ಸಮಸ್ಯೆ ಬಗೆಹರಿಸಲು ವಿಫಲವಾಗಿರುವ ಸ್ಥಳೀಯ ಜನಪ್ರತಿನಿಧಿಗಳ ನಿಷ್ಕ್ರಿಯತೆ ವಿರುದ್ಧ ಸಂಘಟಕರು ಹೋರಾಟ ನಡೆಸಬೇಕು ಎಂದು ಹೇಳಿದ್ದಾರೆ.