ಧಾರವಾಡ: ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ- ರೈತ ವಿರೋಧಿ, ಜನ ವಿರೋಧಿ ಹಾಗೂ ಬಂಡವಾಳಶಾಹಿಗಳ ಪರವಾದ ನೀತಿಗಳನ್ನು ವಿರೋಧಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಜಂಟಿಯಾಗಿ ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದವು.
ದುಡಿಯುವ ಜನ, ವಿದ್ಯಾರ್ಥಿ, ಮಹಿಳೆ, ನಿರುದ್ಯೋಗಿ ಯುವಕರ ಹಾಗೂ ರೈತರ ಪರಿಸ್ಥಿತಿ, ಕಲ್ಪನೆಗೂ ಮೀರಿ ಬಿಗಡಾಯಿಸುತ್ತಿದೆ. ಚುನಾವಣೆಗೂ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ, ಡಾ. ಸ್ವಾಮಿನಾಥನ್ ರವರ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ಭರವಸೆ ನೀಡಿತ್ತು. ಆದರೆ `ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎಂದು ಜನಸಾಮಾನ್ಯರ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ ಆರೋಗ್ಯ, ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಬಿ.ಎನ್. ಪೂಜಾರಿ, ಬಿ.ಐ. ಈಳಿಗೇರ, ಎ.ಎಂ. ಖಾನ್, ಗಂಗಾಧರ ಬಡಿಗೇರ, ಲಕ್ಷ್ಮಣ ಜಡಗನ್ನವರ, ದೀಪಾ ಧಾರವಾಡ, ನಾಗಪ್ಪ ಉಂಡಿ, ರವಿರಾಜ್ ಕಂಬಳಿ, ಲಕ್ಷ್ಮಣ ಬಕ್ಕಾಯಿ, ಅಶೋಕ ಬಂಡಾರಿ, ಮಹದೇವ ಕಾಂಬಳೆ, ಷರೀಫ್ ಅಮ್ಮಿನಬಾವಿ ಮತ್ತಿತರರು ಇದ್ದರು.