ಕನ್ನಡಪ್ರಭ ವಾರ್ತೆ ಬೆಂಗಳೂರು
ಪೇಯಿಂಗ್ ಗೆಸ್ಟ್‌ನಲ್ಲಿದ್ದ ವಿದ್ಯಾರ್ಥಿನಿಯನ್ನು ಮಾತನಾಡುವ ನೆಪದಲ್ಲಿ ಎಳೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿ ಪೇಯಿಂಗ್ ಗೆಸ್ಟ್ (ಪಿ.ಜಿ.) ಮಾಲೀಕನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೇರಳ ಮೂಲದ ಅಶ್ರಫ್ (37) ಬಂಧಿತ. ಆ.1ರ ತಡರಾತ್ರಿ ಈ ಘಟನೆ ನಡೆದಿದೆ. ಕೇರಳ ಮೂಲದ 20 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಮಾಡಿಸಿ, ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಮೂಲದ ಆಶ್ರಫ್ ಕಳೆದ 3 ವರ್ಷಗಳಿಂದ ಸೋಲದೇವನಹಳ್ಳಿ ಠಾಣಾವ್ಯಾಪ್ತಿಯಲ್ಲಿ ಪಿ.ಜಿ. ನಡೆಸುತ್ತಿದ್ದಾನೆ. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ತೆ ಕಳೆದ 20 ದಿನಗಳ ಹಿಂದೆ ಆಶ್ರಫ್ ಮಾಲೀಕತ್ವದ ಪಿ.ಜಿ.ಗೆ ಸೇರಿದ್ದಳು. ಆ.1ರ ತಡರಾತ್ರಿ 1.30ಕ್ಕೆ ಪಿ.ಜಿ. ಬಳಿ ಬಂದ ಅಶ್ರಫ್, ಮಾತನಾಡುವ ನೆಪದಲ್ಲಿ ಆಕೆಯನ್ನು ಪಿ.ಜಿ.ಯಿಂದ ಹೊರಗೆ ಕರೆದಿದ್ದಾನೆ. ಬಳಿಕ ಬಲವಂತವಾಗಿ ಸಮೀಪದ ಕಟ್ಟಡವೊಂದಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಠಾಣೆ ಪೊಲೀಸರು ಆರೋಪಿ ಅಶ್ರಫ್‌ನನ್ನು ಬಂಧಿಸಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಶ್ರಫ್ ಮೇಲೆ ಸಂತ್ರಸ್ತೆಸ್ನೇಹಿತರು ಹಲ್ಲೆ: ದೂರು
ಅತ್ಯಾಚಾರದ ಬಳಿಕ ಸಂತ್ರಸ್ತೆ ಪಿ.ಜಿ.ಗೆ ಓಡಿ ಬಂದು ಪಿ.ಜಿ.ಮಾಲೀಕ ಅಶ್ರಫ್‌ನ ದುಷ್ಕೃತ್ಯದ ಬಗ್ಗೆ ತನ್ನ ಸ್ನೇಹಿತರಿಗೆ ಕರೆ ಮಾಡಿ ಹೇಳಿಕೊಂಡಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಆಕೆಯ ಸ್ನೇಹಿತರು ಅಶ್ರಫ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಆರೋಪಿ ಅಶ್ರಫ್ ನೀಡಿದ ದೂರಿನ ಮೇರೆಗೆ ಸಂತ್ರಸ್ತೆಯ ಸ್ನೇಹಿತರ ವಿರುದ್ಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.