ಗುವಿವಿ ಬಿ.ಇಡಿ ಫಲಿತಾಂಶ ಎಂಬ ಗಜಪ್ರಸವ!

KannadaprabhaNewsNetwork |  
Published : Dec 20, 2025, 02:15 AM IST
ಫೋಟೋ- ಯೂನಿವರ್ಸಿಟಿ ಕ್ಯಾಂಪಸ್‌ಗುಲ್ಬರ್ಗ ವಿವಿ ಆಡಳಿತ ಭವನ ಕಾರ್ಯಸೌಧದ ನೋಟ | Kannada Prabha

ಸಾರಾಂಶ

ಗುಲ್ಬರ್ಗ ವಿಶ್ವವಿದ್ಯಾಲಯದಡಿ 2023- 24ನೇ ಸಾಲಿಗೆ ಬಿ.ಇಡಿ ಪದವಿಯ 2 ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆ ಬರೆದ ಬೀದರ್‌ ಹಾಗೂ ಕಲಬುರಗಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಫಲಿತಾಂಶ ಗಜಪ್ರಸವದಂತಾಗಿದೆ!

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಡಿ 2023- 24ನೇ ಸಾಲಿಗೆ ಬಿ.ಇಡಿ ಪದವಿಯ 2 ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆ ಬರೆದ ಬೀದರ್‌ ಹಾಗೂ ಕಲಬುರಗಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಫಲಿತಾಂಶ ಗಜಪ್ರಸವದಂತಾಗಿದೆ!ಗುಲ್ಬರ್ಗ ವಿವಿ ಅಡಿಯಲ್ಲಿ ಕಲಬುರಗಿ ಹಾಗೂ ಬೀದರ್‌ ಜಿಲ್ಲೆಗೆ ಸೇರಿರುವ 64 ಬಿ.ಇಡಿ ಕಾಲೇಜುಗಳಿವೆ. 2023- 24 ರ ಡಿಸೆಂಬರ್‌ನಲ್ಲಿ ಉಭಯ ಜಿಲ್ಲೆಗಳಿಗೆ ಸೇರಿಕೊಂಡ ಪರೀಕ್ಷೆ ನಡೆದಿದ್ದರಿಂದ ಬಿ.ಇಡಿ ಪರೀಕ್ಷೆ ಬರೆದ 2, 4ನೇ ಸೆಮಿಸ್ಟರ್‌ನ 4 ಸಾವಿರದಷ್ಟು ವಿದ್ಯಾರ್ಥಿಗಳು 12 ತಿಂಗಳಾದರೂ ಫಲಿತಾಂಶವಿಲ್ಲದೆ ಕಂಗಾಲಾಗಿದ್ದಾರೆ.ಮೌಲ್ಯಮಾಪನ ನಡೆದ ಮೇಲೆ ಅಂಕಗಳನ್ನು ಹೆಚ್ಚಿಸಿರುವುದು, ಅನಿಯಮಿತ ಮೌಲ್ಯಮಾಪನ ಹಾಗೂ ಅಂಕಗಳ ತಿದ್ದುಪಡಿ ಆರೋಪಗಳು ಬಲವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಗುವಿವಿ ಪತ್ರದಂತೆ ವಿವಿ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರ ಆದೇಶದಂತೆ ಸದರಿ ಪ್ರಕರಣದ ನ್ಯಾಯಾಂಗ ತನಿಖೆ ಸಾಗಿದೆ.

ಆದರೆ ಇತ್ತ ಪರೀಕ್ಷೆ ಬರೆದ ವಿದ್ಯಾರ್ಥಿಗಳು 12 ತಿಂಗಳಾದರೂ ತಾವು ಫಾಸೋ, ಫೇಲೋ ಎಂಬುದೇ ಗೊತ್ತಾಗದೆ ಫಲಿತಾಂಶಕ್ಕಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ, ಏತನ್ಮಧ್ಯೆ ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿಗೆ ಆಸಕ್ತಿ ತೋರಿರುವುದರಿಂದ ಈ ಅವಕಾಶಗಳಿಂದ ತಾವು ವಂಚಿತರಾಗುವ ಭೀತಿ ಇವರನ್ನು ಕಾಡಲಾರಂಭಿಸಿದೆ.

ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಕಳವಳ ಫಲಿತಾಂಶಕ್ಕಾಗಿ ಬೀದಿಗಿಳಿದು ಹೋರಾಟಗಳನ್ನೂ ಮಾಡಿರುವ ವಿದ್ಯಾರ್ಥಿಗಳು ಇದೀಗ ಕಳವಳಗೊಂಡಿದ್ದಾರೆ. ಬಿ ಇಡಿ ಮೌಲ್ಯಮಾಪನದಲ್ಲಿ ದೋಷಗಳು ಕಂಡುಬಂದು ಅಕ್ರಮಗಳ ವಾಸನೆ ಬರುತ್ತಿದ್ದಂತೆಯೇ ಸಿಂಡಿಕೇಟ್‌ ಗಮನಕ್ಕೆ ತಂದ ವಿವಿ ಆಡಳಿತ ಪ್ರಾಥಮಿಕ ವರದಿ ಸರ್ಕಾರಕ್ಕೆ ರವಾನಿಸಿದ್ದಲ್ಲದೆ, ಸಿಂಡಿಕೇಟ್‌ ನಿರ್ಣಯದಂತೆ ಸಿಓಡಿ ತನಿಖೆಗೂ ಕೋರಿತ್ತು.ಬಿ.ಇಡಿ ಮೌಲ್ಯಮಾಪನದಲ್ಲಿನ ಹಗರಣದ ಬಗ್ಗೆ ಪ್ರಾಥಮಿಕ ಹಂತದಲ್ಲಿ ರಾಜ್ಯ ಸರ್ಕಾರ ತನಿಖೆ ನಡೆಸಿತ್ತು, ಏತನ್ಮದ್ಯೆ ಹಗರಣದ ಬಗ್ಗೆ ವಿವಿ ಕುಲಾಧಿಪತಿಗಳೂ ಆಗಿರುವ ರಾಜ್ಯ ಪಾಲರಿಗೂ ದೂರುಗಳು ಸಲ್ಲಿಕೆಯಾದಾಗ ರಾಜ್ಯ ವಿವಿಗಳ ಅಧಿನಿಯಮ 8 (1) ರ ಅನ್ವಯ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಿದ್ದು, ಪ್ರಸ್ತಾಪಿತ ಹಗರಣದ ದೂರುಗಳ ತನಿಖೆಯ ಕಾರ್ಯ ಪ್ರಗತಿಯಲ್ಲಿದೆ.ಈಗಾಗಲೇ ನಿವೃತ್ತ ನ್ಯಾಯಮೂರ್ತಿಗಳು ಮೂರು ಬಾರಿ ಗುವಿವಿಗೆ ಭೇಟಿ ನೀಡಿದ್ದು, ಬಿ.ಇಡಿ ಹಗರಣ ಹಾಗೂ ಪರಿಕ್ಷಾಂಗದ ಇತರೆ ಅಕ್ರಮಗಳ ದೂರುಗಳ ವಿಚಾರಣೆ ಆರಂಭಿಸಿದ್ದು, ಅಂತಿಮ ವರದಿ ಕುಲಾಧಿಪತಿಗಳಿಗೆ ಸಲ್ಲಿಕೆಯಾಗಬೇಕಿದೆ.

ನೇಮಕಾತಿಯಿಂದ ವಂಚಿತರಾಗುವ ಆತಂಕಗುವಿವಿ ಬಿ.ಇಡಿ ಪರೀಕ್ಷೆ ಮೌಲ್ಯಮಾಪನ ಹಗರಣದ ತನಿಖೆ ಸಾಗಿದೆ, ಅದು ಬೇಗ ಮುಗಿಸಿ ನಮಗೆ ಫಲಿತಾಂಶ ಕೊಡಬೇಕು. ರಾಜ್ಯದಲ್ಲಿ ಖಾಲಿ ಇರುವ ಹೈಸ್ಕೂಲ್‌ ಶಿಕ್ಷಕರ ಹುದ್ದೆ ಭರ್ತಿ ಬಗ್ಗೆ ಶಿಕ್ಷಣ ಸಚಿವರು ಹೇಳಿದ್ದಾರೆ. ಹೀಗಾಗಿ ನಮ್ಮ ಫಲಿತಾಂಶ ಪ್ರಕಟವಾಗದೆ ಹೋದಲ್ಲಿ ನೇಮಕಾತಿ ಅವಕಾಶದಿಂದಲೂ ನಾವು ವಂಚಿತರಾಗುವ ಆತಂಕ ಕಾಡುತ್ತಿದೆ ಎಂದು ಹೆಸರು ಬಹಿರಂಗಕ್ಕೆ ಇಚ್ಛಿಸದ ಬಿ.ಇಡಿ ಪರೀಕ್ಷೆ ಬರೆದ ಕಲಬುರಗಿ, ಬೀದರ್‌ ಮೂಲದ ನೊಂದ ವಿದ್ಯಾರ್ಥಿಗಳು ಕನ್ನಡಪ್ರಭ ಜೊತೆ ಮಾತನಾಡುತ್ತ ನೋವು, ಆತಂಕ ತೋಡಿಕೊಂಡಿದ್ದಾರೆ.

ಉನ್ನತ ಶಿಕ್ಷಣ ಸಚಿವರು ಹೇಳೋದೇನು?ಬೆಳಗಾವಿ ಸುವರ್ಣ ಸದನದಲ್ಲಿನ ಚಳಿಗಾಲದ ಅಧಿವೇಶನದಲ್ಲಿಯೂ ಗುವಿವಿ ಪರೀಕ್ಷಾಂಗದ ಹಗರಣದ ಬಗ್ಗೆ ಶಾಸಕ ಅಲ್ಲಂಪ್ರಭು ಪಾಟೀಲರು ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು, ಈ ಹಗರಣ ಸರ್ಕಾರದ ಗಮನಕ್ಕೆ ಬಂದಿದ್ದು, ಪ್ರಾಥಮಿಕ ತನಿಖೆಯಾಗಿದೆ, ಕುಲಾಧಿಪತಿಗಳು ನಿವೃತ್ತ ನ್ಯಾಯಮೂರ್ತಿಗಳಿಗೆ ತನಿಖೆ ವಹಿಸಿದ್ದು, ಪ್ರಸ್ತಾಪಿತ ವಿಷಯದ ತನಿಖೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಗುವಿವಿ 2023- 24ನೇ ಸಾಲಿನ ಬಿ.ಇಡಿ ಪರೀಕ್ಷೆಯ ಮೌಲ್ಯಮಾಪನದಲ್ಲಾಗಿರುವ ಹಗರಣ ತನಿಖೆ ರಾಜ್ಯಪಾಲರ ಆದೇಶದಂತೆ ನಿವೃತ್ಯ ನ್ಯಾಯಮೂರ್ತಿಗಳಿಂದ ಸಾಗಿದೆ. ಅದಾಗಲೇ 3 ಬಾರಿ ನಿವೃತ್ತ ನ್ಯಾಯಮೂರ್ತಿಗಳು ಗುವಿವಿ ಭೇಟಿ ನೀಡಿ ಮಾಹಿತಿ, ದಾಖಲೆಗಳು ಎಲ್ಲ ಸಂಗ್ರಹಿಸಿ ತನಿಖೆ ಪ್ರಗತಿಯಲ್ಲಿದೆ. ಇನ್ನೂ ಅವರಿಲ್ಲಿಗೆ ಬಂದು ತನಿಖೆ ಹೆಚ್ಚಿಗೆ ಕೈಗೊಳಲ್ಳುವ ಸಾಧ್ಯತೆಗಳೂ ಇವೆ. ತನಿಖೆ ಮುಗಿದು ಅವರು ವರದಿ ಸಲ್ಲಿಸಿದ ನಂತರವೇ 2023- 24ನೇ ಸಾಲಿನ 2, 4 ನೇ ಸೆಮಿಸ್ಟರ್‌ ಬಿ.ಇಡಿ ಫಲಿತಾಂಶ ಪ್ರಕಟಣೆ ಇತ್ಯಾದಿ ಸಂಗತಿಗಳ ಬಗ್ಗೆ ನಿರ್ಣಯಿಸಲಾಗುತ್ತದೆ.- ಪ್ರೊ.ರಮೇಶ ಲಂಡನಕರ್‌, ಕುಲಸಚಿವರು, ಗುವಿವಿ, ಕಲಬುರಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಬುದ್ಧ ಭಾರತ ನಿರ್ಮಾಣ ಕನಸು ಕಂಡವರು ಅಂಬೇಡ್ಕರ್‌: ಪ್ರೊ. ವಿಶ್ವನಾಥ
ಅಕ್ಷಯ ಪಾತ್ರೆಗೆ ಆಧುನಿಕ ತಂತ್ರಜ್ಞಾನದ ಯಂತ್ರ