ಬ್ಯಾಡಗಿಯಲ್ಲಿ ಗುರುಭವನ ನಿರ್ಮಾಣಕ್ಕೆ ಚಾಲನೆ ನೀಡಿದ ಶಿಕ್ಷಕರ ಸಂಘಟನೆ

KannadaprabhaNewsNetwork | Published : Jul 23, 2024 12:37 AM

ಸಾರಾಂಶ

2.5 ಕೋಟಿ ರು. ವೆಚ್ಚದಲ್ಲಿ ಉದ್ದೇಶಿತ ಗುರುಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಶಿಕ್ಷಕರ ಸಂಘಟನೆ ಹಾಗೂ ಅಧಿಕಾರಿಗಳು ಭಾನುವಾರ ಪಾಳು ಬಿದ್ದಿದ್ದ ಖಾಲಿ ನಿವೇಶನಗೊಳಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

ಬ್ಯಾಡಗಿ: 2.5 ಕೋಟಿ ರು. ವೆಚ್ಚದಲ್ಲಿ ಉದ್ದೇಶಿತ ಗುರುಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಶಿಕ್ಷಕರ ಸಂಘಟನೆ ಹಾಗೂ ಅಧಿಕಾರಿಗಳು ಭಾನುವಾರ ಪಾಳು ಬಿದ್ದಿದ್ದ ಖಾಲಿ ನಿವೇಶನಗೊಳಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

ಶಿಕ್ಷಕರ ಸಂಘಟನೆ ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ಕೊರತೆಯಿಂದ ಕಳೆದ 2014-15ರಲ್ಲಿ ಚಾಲನೆ ಸಿಕ್ಕಿದ್ದ ಶಿಕ್ಷಕರ ಮಹತ್ವಾಕಾಂಕ್ಷಿ ಗುರುಭವನ ನಿರ್ಮಾಣ ಯೋಜನೆಯೊಂದು ಸ್ಥಗಿತಗೊಂಡು ನಿರ್ವಹಣೆ ಇಲ್ಲದೇ ಸುಮಾರು ಅರ್ಧ ಎಕರೆಯಷ್ಟು ನಿವೇಶನ ಅಕ್ಕಪಕ್ಕದ ಸಾರ್ವಜನಿಕರಿಗೆ ಕಂಟಕಪ್ರಾಯವಾಗಿತ್ತು. ಉದ್ದೇಶಿತ ಗುರುಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯದಿರುವುದು ಸಾಕಷ್ಟು ಚರ್ಚೆಗಳಿಗೂ ಕೂಡ ಕಾರಣವಾಗಿತ್ತು, ವಿಷಯದ ಕುರಿತು ಜು.16ರಂದು ಕನ್ನಡಪ್ರಭ ದಿನಪತ್ರಿಕೆ ವಿಸ್ತೃತ ವರದಿಯೊಂದನ್ನು ಪ್ರಕಟಿಸಿತ್ತು.

ಎಚ್ಚೆತ್ತುಕೊಂಡ ಶಿಕ್ಷಕರ ಸಂಘಟನೆ ಮತ್ತು ಅಧಿಕಾರಿಗಳು: ಪತ್ರಿಕೆಯು ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಶಿಕ್ಷಕರ ಸಂಘಟನೆ ಮತ್ತು ಅಧಿಕಾರಿಗಳು ಸಭೆ ಆಯೋಜಿಸಿದ್ದು ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಆರಂಭಿಸಲು ನಿರ್ಧರಿಸಿದ್ದಾರೆ. ಮೊದಲ ಸುತ್ತಿನ ಮಾತುಕತೆ ನಡೆದಿದ್ದು ಸಭೆಯಲ್ಲಿ ನಿರ್ಧರಿಸಿದಂತೆ ಖಾಲಿ ನಿವೇಶನದಲ್ಲಿ ಗಿಡಗಂಟಿಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿದರು.ಗುರುಭವನ ನಿರ್ಮಾಣ ಕಾರ‍್ಯಕ್ಕೆ ಚಾಲನೆ ಸಿಗದಿರುವ ಕುರಿತು ಕನ್ನಡಪ್ರಭ ಪತ್ರಿಕೆ ವರದಿ ಮಾಡಿದ್ದನ್ನು ಧನಾತ್ಮಕವಾಗಿ ಸ್ವೀಕರಿಸಿ ನಿರ್ಮಾಣ ಕಾರ‍್ಯಕ್ಕೆ ಚಾಲನೆ ನೀಡಿದ್ದೇವೆ, ದೇವರ ಅನುಗ್ರಹವಿದ್ದರೇ 1 ವರ್ಷ ದಲ್ಲಿ ಶಿಕ್ಷಕರ ಉಪಯೋಗಕ್ಕೆ ಕಟ್ಟಡ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಜಿ. ಕೋಟಿ ಹೇಳಿದರು.

ದಶಕದ ಹಿಂದೆ ನಿರ್ಮಾಣವಾಗಬೇಕಾಗಿದ್ದ ಗುರುಭವನ ಕಟ್ಟಡಕ್ಕೆ ಚಾಲನೆ ಸಿಗದೇ ಸಾಕಷ್ಟು ತೊಂದ ರೆಯಾಗಿತ್ತು, ಪತ್ರಿಕೆ ವರದಿಯಿಂದ ಶಿಕ್ಷಕರ ಸಂಘವು ಕಾರ‍್ಯಪ್ರವೃತ್ತರಾಗಿದ್ದು ನಮ್ಮನ್ನು ಎಚ್ಚರಿಸಿದ್ದಕ್ಕೆ ಅಭಿನಂದಿಸುತ್ತೇವೆ ಬ್ಯಾಡಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಂದ್ರು ಸಣ್ಣಗೌಡ್ರ ಹೇಳಿದರು.ಶಿಕ್ಷಕರ ದಿನಾಚರಣೆ ವೇಳೆ ಕಾರ್ಯಕ್ರಮಕ್ಕಾಗಿ ಕಲ್ಯಾಣಮಂಟಪಕ್ಕೆ ಬೇರೊಬ್ಬರ ಬಳಿ ಅಲವತ್ತಿಡುವುದು ಶಿಕ್ಷಕರ ಸಂಘಕ್ಕೆ ಅವಮಾನವಲ್ಲವೇ..? ಲಕ್ಷಗಟ್ಟಲೇ ಹಣವ್ಯಯಿಸಿ ವಿವಿಧ ಕಲ್ಯಾಣಮಂಟಪಗಳಲ್ಲಿ ಅದೆಷ್ಟೋ ಶಿಕ್ಷಕರು ತಮ್ಮ ಮಕ್ಕಳ ಮದುವೆ ಸಮಾರಂಭ ನೆರವೇರಿಸಿದ್ದು ಪ್ರಾಯಶ್ಚಿತ ಅಂದುಕೊಳ್ಳೋಣವೇ, ಶಿಕ್ಷಕರ ಸಂಘವು ಕೇವಲ ಒಂದೇ ವಾರದಲ್ಲಿ ಎಚ್ಚೆತ್ತುಕೊಂಡ ಕಾರ್ಯಪ್ರವೃತ್ತರಾಗಿದ್ದು ಸ್ವಾಗತಾರ್ಹ ಎಂದು ನ್ಯಾಯವಾದಿ ಸುರೇಶ ಛಲವಾದಿ ಹೇಳಿದರು.

Share this article