ಬಿರು ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು, ಆಹಾರ ಪೂರೈಕೆ
ಪ್ರಾಣಿ, ಪಕ್ಷಿಗಳಿಗಾಗಿ ಮಿಡಿಯುತ್ತಿರುವ ಮನಸ್ಸುಗಳುವಿ.ಎಂ. ನಾಗಭೂಷಣಕನ್ನಡಪ್ರಭ ವಾರ್ತೆ ಸಂಡೂರು
ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೇಸಿಗೆಯಲ್ಲಿ ನೀರು ಆಹಾರಕ್ಕಾಗಿ ಪರಿತಪಿಸುವ ಪ್ರಾಣಿ, ಪಕ್ಷಿಗಳಿಗೆ ಕೆಲವರು ಅಲ್ಲಲ್ಲಿ ನೀರು, ಆಹಾರವನ್ನು ಒದಗಿಸುವ ಮೂಲಕ ಜನತೆಯಲ್ಲಿ ಮಾನವೀಯತೆಯ ಸೆಲೆ ಬತ್ತಿಲ್ಲ ಎಂದು ನಿರೂಪಿಸುತ್ತಿದ್ದಾರೆ.ಮಾನವರೇನೋ ತಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ ಬದಲಾಗುವ ಋತುಗಳಿಗೆ ಅನುಗುಣವಾಗಿ ಆಹಾರ ಹಾಗೂ ಪರಿಸರವನ್ನು ಹೊಂದಿಸಿಕೊಂಡು ಜೀವನ ನಡೆಸುತ್ತಾರೆ. ಆದರೆ, ಪ್ರಾಣಿಗಳು ಬದಲಾಗುವ ಋತುಗಳಿಗನುಗುಣವಾಗಿ ತಮ್ಮ ಜೀವನವನ್ನು ಹೊಂದಿಸಿಕೊಳ್ಳಲು ಪರಿತಪಿಸುವುದನ್ನು ನಾವು ಕಾಣುತ್ತೇವೆ.
ಇದನ್ನರಿತ ಕೆಲ ಸಂಘಟನೆಗಳ ಸದಸ್ಯರು ಹಾಗೂ ಕೆಲ ಜನತೆ ವೈಯಕ್ತಿಕವಾಗಿ ಬೇಸಿಗೆಯಲ್ಲಿ ತಮ್ಮ ಮನೆಗಳ ಮೇಲೆ, ಮರಗಿಡಗಳು, ಗಿಡ ಗಂಟಿಗಳ ಮೇಲೆ ಪ್ರಾಣಿಗಳಿಗಾಗಿ ನೀರು, ಆಹಾರವನ್ನು ಒದಗಿಸಿ, ಅವುಗಳ ಹಸಿವು ಹಾಗೂ ನೀರಿನ ದಾಹ ನೀಗಿಸುವ ಪ್ರಯತ್ನ ಮಾಡುವ ಮೂಲಕ ಇತರರಿಗೆ ಮಾದರಿಯಾಗುತ್ತಾರೆ.ತಾಲೂಕಿನ ತಾಳೂರಿನ ಅಮ್ಮಾ ಸಂಸ್ಥೆಯ ಅಧ್ಯಕ್ಷೆ ಎಂ. ಕವಿತಾ ರುದ್ರಗೌಡ, ಸದಸ್ಯರಾದ ಎಂ. ಮಣಿಕಂಠ ಹಾಗೂ ಎಸ್. ಅಜಯ್ ತೋರಣಗಲ್ಲಿನ ಹಣ್ಣಿನ ವ್ಯಾಪಾರಿ ಬಸವರಾಜ ಅವರ ಸಹಕಾರದೊಂದಿಗೆ ಪಡೆದ ಹಣ್ಣುಗಳನ್ನು ನಾರಿಹಳ್ಳ ಜಲಾಶಯದ ಬಳಿಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ಕೋತಿಗಳಿಗೆ ಸೇಬು, ಬಾಳೆ, ಪೇರಲ, ಕರಬೂಜ ಹಣ್ಣುಗಳನ್ನು ಒದಗಿಸಿ ಮಾನವೀಯತೆ ಮೆರೆದರು.
ಕಾಲ್ ಆಫ್ ಹ್ಯುಮ್ಯಾನಿಟಿ-ಸೇವ್ ಬರ್ಡ್ಸ್ ಎಂಬ ಅಭಿಯಾನವನ್ನು ಆರಂಭಿಸಿರುವ ಸಂಡೂರಿನ ದಾದಾ ಖಲಂದರ್, ಸುಹೇಲ್, ಬಿಲಾಲ್ ಆದಿಲ್, ಶಬಾಜ್, ಅಫನ್, ಹಸ್ನೆನ್ ಅವರು ಸಂಡೂರು ಹಾಗೂ ಸುತ್ತಮುತ್ತಲಿನ ಕೆಲ ಕಟ್ಟಡ, ಗಿಡಗಂಟಿಗಳು, ಟೋಲ್‌ಗೇಟ್ ಮುಂತಾದೆಡೆ ಬರ್ಡ್ ಫೀಡರ್‌ಗಳನ್ನು ಅಂದರೆ, ಬಾಟಲ್‌ಗಳಲ್ಲಿ ನೀರು, ಕಾಳುಗಳನ್ನು ತುಂಬಿ, ರೆಂಬೆಕೊಂಬೆಗಳಿಗೆ ತೂಗುಬಿಟ್ಟು, ಮಾಳಿಗೆಯ ಮೇಲಿಟ್ಟು ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರವನ್ನು ಒದಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಯುವಕರ ಕಾರ್ಯ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.ಕನ್ನಡಪ್ರಭದೊಂದಿಗೆ ಅಭಿಪ್ರಾಯ ಹಂಚಿಕೊಂಡ ದಾದಾ ಖಲಂದರ್, ನಮ್ಮ ಸ್ನೇಹಿತರ ತಂಡದಿಂದ ವಿವಿದೆಡೆ ನೀರು ಮತ್ತು ಆಹಾರದ ಫೀಡರ್‌ಗಳನ್ನು ಅಳವಡಿಸಿದ್ದೇವೆ. ಅಲ್ಲಿ ಹತ್ತಿರದ ಸ್ನೇಹಿತರಿಗೆ ಆಗಾಗ್ಗೆ ಫೀಡರ್‌ಗಳಲ್ಲಿ ನೀರು ಮತ್ತು ಕಾಳುಗಳನ್ನು ಹಾಕಲು ತಿಳಿಸಿದ್ದೇವೆ. ಈ ಕಾರ್ಯ ಸಹಾಯವೆಂದು ಭಾವಿಸದೆ, ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇವೆ ಎಂದರು.
ಬೇಸಿಗೆಯಲ್ಲಿ ನೀರು ಮತ್ತು ಆಹಾರಕ್ಕಾಗಿ ಪರಿತಪಿಸುವ ಪ್ರಾಣಿ, ಪಕ್ಷಿಗಳಿಗೆ ಹಲವೆಡೆ ನೀರು, ಆಹಾರ ಒದಗಿಸುವ ಮೂಲಕ ಅವುಗಳ ನೀರಿನ ದಾಹ ಮತ್ತು ಹಸಿವನ್ನು ತಣಿಸುತ್ತಿರುವ ಕಾರ್ಯ ಇತರರಿಗೆ ಪ್ರೇರಣೆಯಾಗಿದೆಯಲ್ಲದೆ, ಜನರಲ್ಲಿನ ಮಾನವೀಯ ಗುಣಗಳಿಗೆ ಇಂತಹ ಕಾರ್ಯಗಳು ಕನ್ನಡಿ ಹಿಡಿಯುತ್ತಿವೆ.