ಕನ್ನಡಪ್ರಭ ವಾರ್ತೆ ಬಾಗಲಕೋಟೆಉತ್ತರ ಕರ್ನಾಟಕದ ನೆಲದಲ್ಲಿ ಭಕ್ತಿ, ಶ್ರದ್ಧೆ ಮತ್ತು ಜ್ಞಾನದ ಹಸಿವು ಸದಾ ಜೀವಂತವಾಗಿದೆ. ಇದೇ ನೆಲಕ್ಕೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರೊಂದಿಗೆ ಅವಿನಾಭಾವ ನಂಟಿದ್ದು, ಅವರ ಜೀವನಾಧಾರಿತ ಇಂದು ಎನಗೆ ಗೋವಿಂದ ಬಯೋಪಿಕ್ ಚಿತ್ರವು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಸಾಹಿತಿ ವೀಣಾ ಬನ್ನಂಜೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಉತ್ತರ ಕರ್ನಾಟಕದ ನೆಲದಲ್ಲಿ ಭಕ್ತಿ, ಶ್ರದ್ಧೆ ಮತ್ತು ಜ್ಞಾನದ ಹಸಿವು ಸದಾ ಜೀವಂತವಾಗಿದೆ. ಇದೇ ನೆಲಕ್ಕೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರೊಂದಿಗೆ ಅವಿನಾಭಾವ ನಂಟಿದ್ದು, ಅವರ ಜೀವನಾಧಾರಿತ ಇಂದು ಎನಗೆ ಗೋವಿಂದ ಬಯೋಪಿಕ್ ಚಿತ್ರವು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಸಾಹಿತಿ ವೀಣಾ ಬನ್ನಂಜೆ ತಿಳಿಸಿದರು.
ನಗರದ ಶಿವಾನುಭವ ಮಂಟಪದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ಬೆಂಗಳೂರು), ಗೆಳೆಯರ ಬಳಗ ಹಾಗೂ ಚರಂತಿಮಠದ ಶಿವಾನುಭವ ಸಮಿತಿ ಆಶ್ರಯದಲ್ಲಿ ನಡೆದ ಬನ್ನಂಜೆ 90ರ ವಿಶ್ವನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಂಗಳೂರಿನ ವಿದ್ವಾಂಸ ವಿಜಯಸಿಂಹ ಆಚಾರ್ಯ ಮಾತನಾಡಿ, ಎಐ ಮತ್ತು ಗೂಗಲ್ ಮೂಲಕ ಮಾಹಿತಿ ಪಡೆಯಬಹುದಾದರೂ, ಅನುಭವದೊಂದಿಗೆ ಬೆರೆತ ಜ್ಞಾನವೇ ಪರಿಪೂರ್ಣವಾಗುತ್ತದೆ. ವಿನಯ ಮತ್ತು ಪ್ರಜ್ಞೆ ಉತ್ತಮ ಜೀವನದ ದಾರಿದೀಪಗಳಾಗಿವೆ ಎಂದರು.
ವಿದ್ವಾಂಸ ರಮೇಶ ಬಾಸುದೇವ ರಾವ್ ಮಾತನಾಡಿ, ಪ್ರಾಚೀನ ಗ್ರಂಥಗಳು ಇಂದಿಗೂ ಪ್ರಸ್ತುತವಾಗಿದ್ದು, ಜ್ಞಾನಶಕ್ತಿ, ಕ್ರಿಯಾಶಕ್ತಿ ಮತ್ತು ಇಚ್ಛಾಶಕ್ತಿ ಸಮನ್ವಯವೇ ಯಶಸ್ಸಿನ ಮೂಲ ಎಂದರು.
ಲೇಖಕ ರೋಹಿತ್ ಚಕ್ರತೀರ್ಥ ಮಾತನಾಡಿ, ಬಸವಣ್ಣ ಹಾಗೂ ಬನ್ನಂಜೆ ಗೋವಿಂದಾಚಾರ್ಯರಿಬ್ಬರೂ ಸಮಾಜಕ್ಕೆ ನಿರ್ಭೀತಿಯಿಂದ ಸತ್ಯವನ್ನು ಸಾರಿದ ಮಹನೀಯರು. ಇಬ್ಬರಲ್ಲೂ ಕನ್ನಡದ ಮೇಲಿನ ಅಪಾರ ಪ್ರೀತಿ ಸಾಮ್ಯವಾಗಿತ್ತು ಎಂದರು.
ಕಾರ್ಯಕ್ರಮವನ್ನು ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ ಉದ್ಘಾಟಿಸಿದರು.
ಸಾನ್ನಿಧ್ಯ ವಹಿಸಿದ್ದ ಪಂ. ಬಿಂದುಮಾಧವಾಚಾರ ನಾಗಸಂಪಿಗೆ ಮಾತನಾಡಿ, ಬನ್ನಂಜೆ ಗೋವಿಂದಾಚಾರ್ಯರ ಜ್ಞಾನಸಂಪತ್ತನ್ನು ಅನೇಕ ವಿದ್ವಾಂಸರು ಗೌರವದಿಂದ ಅಧ್ಯಯನ ಮಾಡಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಅವರ ಸ್ಮರಣೆ ಚಿರಂತನವಾಗಲಿ ಎಂದು ಆಶೀಸಿದರು.
ವೇದಿಕೆಯಲ್ಲಿ ವಿಶ್ರಾಂತ ಕುಲಪತಿ ಡಾ.ಮೀನಾ ಆರ್.ಚಂದಾವರಕರ, ಡಾ.ಗಿರೀಶ ಮಾಸೂರಕರ, ಎಸ್.ಆರ್.ಮನಹಳ್ಳಿ, ಪಂಡಿತ ಅರಬ್ಬಿ ಹಾಗೂ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.
ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರೀ ಅವರಿಂದ ಬನ್ನಂಜೆ ಹಾಡುಗಬ್ಬ ಭಾವಾಪೂರ್ಣವಾಗಿ ನೆರೆದ ಜನರ ಮನತಣಿಸಿತು.
ಕಾರ್ಯಕ್ರಮದಲ್ಲಿ ಜಿ.ಎನ್.ಪಾಟೀಲ, ಡಾ.ಬಿ.ಎಸ್.ಕೇರೂಡಿ, ಡಾ.ಎಂ.ಎಸ್.ದಡ್ಡೆನ್ನವರ, ಡಾ.ಎಸ್.ಎಫ್.ಯೋಗಪ್ಪನವರ, ವಿಜಯಕುಮಾರ ಕಟಗಿಹಳ್ಳಿಮಠ, ಬಸವರಾಜ ಭಗವತಿ, ವಿನೋಧ ಯಡಹಳ್ಳಿ, ಮಹಾಬಳೇಶ ಗುಡುಗುಂಟಿ ಸೇರಿದಂತೆ ವೈದ್ಯರು, ಶಿಕ್ಷಕರು ಹಾಗೂ ಗಣ್ಯರು ಭಾಗವಹಿಸಿದ್ದರು.
ಇದು ಬಾಗಲಕೋಟೆಯಲ್ಲಿ ಆಯೋಜಿಸಿದ್ದ 30ನೇ ಕಾರ್ಯಕ್ರಮವಾಗಿದ್ದು, ಬನ್ನಂಜೆಯವರ ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸೇತುವೆಯಾಗಿ ಈ ವಿಶ್ವನಮನ ಕಾರ್ಯಕ್ರಮ ರೂಪುಗೊಂಡಿದೆ. ಸಮಾರೋಪ ಸಮಾರಂಭವೂ ಆಗಸ್ಟ್ ನಲ್ಲಿ ನಡೆಯಲಿದ್ದು, ಇಂದು ಎನಗೆ ಗೋವಿಂದ ಬಯೋಪಿಕ್ ಚಿತ್ರವು ಅಂದೇ ಬಿಡುಗಡೆಯಾಗಲಿದೆ. ಬನ್ನಂಜೆ ಕುಟುಂಬವಾಗಿ ಬನ್ನಿರಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.