ಎಚ್.ಎನ್.ಪ್ರಸಾದ್
ರೈತರು ಬೆಳೆದ ರಾಗಿ, ಭತ್ತ, ಹುರುಳಿ, ಜೋಳ ಮತ್ತು ಇತರೆ ಧಾನ್ಯಗಳ ಒಕ್ಕಣೆಗಾಗಿ ಪ್ರಸ್ತುತ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದೆ. ಆದರೆ, ಗತಕಾಲದಲ್ಲಿ ಬಳಕೆ ಮಾಡುತ್ತಿದ್ದ ಕಲ್ಲು ಬಂಡಿ ಯಂತ್ರ (ರೊಣಗಲ್ಲು)ವೇ ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾಗಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.
ಆಧುನಿಕತೆ ಬೆಳೆದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಕಾಲಿರಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಯಂತ್ರಗಳ ಬಳಕೆ ಸಾಮಾನ್ಯವಾಗಿದೆ. ಇದರ ಜೊತೆಗೆ ರಸ್ತೆಗಳಲ್ಲಿ ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಒಕ್ಕಣೆ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೂ ತೊಂದರೆ ಮಾಡುತ್ತಿದ್ದಾರೆ. ಇದರಿಂದ ಗತಕಾಲದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದ ವಸ್ತುಗಳು ನೇಪಥ್ಯಕ್ಕೆ ಸರಿಸುತ್ತಿವೆ.ಪ್ರಸ್ತುತ ರೈತರು ವ್ಯವಸಾಯ ಪದ್ಧತಿ ಬದಲಿಸಿಕೊಂಡಿದ್ದಾರೆ. ಪ್ರತಿಯೊಂದು ಕಾಯಕಕ್ಕೂ ಯಂತ್ರಗಳ ಸಹಾಯ ಪಡೆದು ಗತಕಾಲದಲ್ಲಿ ಪೂರ್ವಿಕರು ಕೃಷಿಯಲ್ಲಿ ಅಳವಡಿಸಿಕೊಂಡಿದ್ದ ವ್ಯವಸಾಯ ಪದ್ಧತಿ ಮಾಯವಾಗುತ್ತಿದೆ.
ಈ ರೀತಿ ಕಣದಲ್ಲಿ ಒಕ್ಕಣೆ ಮಾಡಿದ ಆಹಾರಧಾನ್ಯಗಳು ಬಹಳ ಕಾಲ ಹಾಳಾಗದೆ ಉಳಿಯುತ್ತಿದ್ದವು. ಇಂತಹ ಕಾಳುಗಳಿಂದ ಅಡುಗೆ ಮಾಡಿದ ರುಚಿಕರವಾದ ಆಹಾರ ತಯಾರಿಸಿ ಮನುಷ್ಯರು ಸೇವಿಸಿ ನೂರಾರು ವರ್ಷಗಳ ಉತ್ತಮ ಆರೋಗ್ಯವನ್ನು ಹೊಂದುತ್ತಿದ್ದರು.
ನಮ್ಮ ತಾತ ಮುತ್ತತಾಂದಿರ ಕಾಲದಿಂದಲೂ ತಾವು ಬೆಳೆದ ಫಸಲುಗಳನ್ನು ತಮ್ಮ ಜಮೀನುಗಳಲ್ಲಿ ಒಕ್ಕಣೆ ಮಾಡುವುದಕ್ಕಾಗಿ ಕಣವನ್ನು ನಿರ್ಮಿಸಿ ಕಲ್ಲು, ಮಣ್ಣು ಬರಬಾರದು ಎಂದು ಸಗಣಿ ಇಂದ ಕಣವನ್ನು ಸಾರಿಸಿ ಅದಕ್ಕೆ ಪೂಜೆ ಸಲ್ಲಿಸಿ ಒಕ್ಕಣೆ ಮಾಡಿದ ನಂತರ ತಮ್ಮ ದವಸ, ಧಾನ್ಯಗಳನ್ನು ರಾಶಿ ಮಾಡುತ್ತಿದ್ದರು.
ಪ್ರಸ್ತುತ ಕೃಷಿ ಚಟುವಟಿಕೆಗಳಿಗೆ ರೈತರು ರಾಸಾಯನಿಕ ಗೊಬ್ಬರ, ಔಷಧಿ ಸಿಂಪಡಣೆ ಬಳಕೆ ಹೆಚ್ಚಾಗಿದೆ. ಇದರಿಂದ ಬೆಳೆದ ಆಹಾರ ತಿನ್ನುವ ನಮಗೆ ಹಲವು ರೋಗಗಳು ಬರುತ್ತಿವೆ. ರಸ್ತೆಗಳಲ್ಲಿ ರಾಗಿ, ಭತ್ತ, ಇತರೆ ಬೆಳೆಗಳನ್ನು ಹಾಕಿ ಒಕ್ಕಣೆ ಮಾಡುವ ದೃಶ್ಯ ಕಂಡು ಬರುತ್ತಿದೆ. ಇದರಿಂದ ವಾಹನಗಳ ಅಪಘಾತ ಸಂಭವಿಸಿ, ಸಂಚಾರಕ್ಕೂ ತೊಂದರೆಯಾಗಿ ಸಾವು, ನೋವುಗಳಿಗೂ ಕಾರಣವಾಗುತ್ತಿದೆ.
ಪೂರ್ವಿಕರು ರಾಸುಗಳ ಸಹಾಯದಿಂದ ಬೆಳೆಗಳನ್ನು ಒಕ್ಕಣೆ ಮಾಡುತ್ತಿದ್ದರು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತಿತ್ತು. ಇಂದು ಒಂದೇ ದಿನದಲ್ಲಿ ಯಂತ್ರಗಳ ಸಹಾಯದಿಂದ ಎಲ್ಲಾ ಕೆಲಸಗಳು ಮುಗಿದು ಹೋಗುತ್ತವೆ. ನಾನು ಕೂಡ ಪೂರ್ವಿಕರು ಮಾಡುತ್ತಿದ್ದ ಒಕ್ಕಣೆ ಪದ್ಧತಿಯನ್ನು ಮಾಡಲು ಪ್ರಯತ್ನಿಸುತ್ತೇನೆ.