ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ಸ್ಥಾಪಿಸಬೇಕು ಎಂದು ನಿರ್ಧರಿಸಿರುವ ಮೆಗಾ ಡೈರಿ ವಿಜಯನಗರ ಜಿಲ್ಲೆಗೆ ಸ್ಥಳಾಂತರಗೊಳ್ಳಲಿದೆ ಎಂಬ ಊಹೋಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ.
ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಘವೇಂದ್ರ ಹಿಟ್ನಾಳ್, ಮೆಗಾ ಡೈರಿ ನಿರ್ಮಾಣಕ್ಕೆ ಕೆಎಂಇಆರ್‌ಸಿಯಡಿ ₹80 ಕೋಟಿ ಅನುದಾನ ಮೀಸಲಿರಿಸಿದ್ದು, ಡೈರಿ ನಿರ್ಮಾಣಕ್ಕಾಗಿ ಕೊಳಗಲ್ಲುನಲ್ಲಿನ 15 ಎಕರೆ ಸ್ಥಳವನ್ನು ₹2.92 ಕೋಟಿ ವೆಚ್ಚದಲ್ಲಿ ಖರೀದಿಗೆ ಆಡಳಿತ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಬಳ್ಳಾರಿಯಲ್ಲಿ ಗುಣಮಟ್ಟದ ಹಾಗೂ ಮಾದರಿ ಎನಿಸಿದ ಮೆಗಾ ಡೈರಿ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿದೆ. ದೇಶದಲ್ಲಿಯೇ ಮಾದರಿ ಮೆಗಾ ಡೈರಿ ಬಳ್ಳಾರಿಯಲ್ಲಿ ಸ್ಥಾಪಿಸಲಾಗುವುದು. ಇದರ ಹೊರತಾಗಿ ಬಳ್ಳಾರಿಯಲ್ಲಿರುವ ಹಳೇ ಡೈರಿ ದುರಸ್ತಿಗೆ ₹1 ಕೋಟಿ, ಕೊಪ್ಪಳ ಜಿಲ್ಲೆಯ ಬೂದುಗುಂಪದಲ್ಲಿರುವ ಡೈರಿಗೆ ₹4ರಿಂದ 5 ಕೋಟಿ ಅನುದಾನ ಒದಗಿಸಲು ಸಭೆಯಲ್ಲಿ ಅನುಮೋದನೆ ನೀಡಲಾಗುವುದು. 30 ವರ್ಷಕ್ಕೂ ಹಳೆಯದಾದ ರಾಯಚೂರು ಡೈರಿಗೆ ಕೆಕೆಆರ್‌ಡಿಬಿಯಿಂದ ₹10 ಕೋಟಿ ನೀಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಸ್ಥಳೀಯ ಶಾಸಕರ ಜತೆ ಮಾತನಾಡಿದ್ದೇನೆ ಎಂದರು.ಪ್ರತಿ ತಾಲೂಕಿಗೆ 100 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ಪಶು ವೈದ್ಯಾಧಿಕಾರಿಗಳನ್ನು ಹೆಚ್ಚುವರಿಯಾಗಿ ಕೊಡಲು ನಿರ್ಧರಿಸಲಾಗಿದೆ. 10 ಪಶು ವೈದ್ಯಾಧಿಕಾರಿಗಳನ್ನು ಕೆಎಂಎಫ್ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾವಾರು (ನಾಲ್ಕು ಜಿಲ್ಲೆಗೆ) ಹಂಚಿಕೆ ಮಾಡಲಾಗಿದೆ. ನಾಲ್ಕು ಜಿಲ್ಲೆಗಳಿಗೆ ಹೋಲಿಸಿದರೆ ಹಾಲು ಉತ್ಪಾದನೆ ಹಾಗೂ ಮಾರಾಟ ವ್ಯತ್ಯಾಸ ಸಾಕಷ್ಟು ಕಂಡು ಬಂದಿದೆ. ಹೀಗಾಗಿ ಮಾರುಕಟ್ಟೆಯನ್ನು ವಿಸ್ತರಿಸುವ ಸಂಬಂಧ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಎರಡು ವರ್ಷದಲ್ಲಿ 2.42 ಲಕ್ಷ ಲೀಟರ್ ಉತ್ಪಾದನೆ ಬದಲು 5 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ ಕೇವಲ 9 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹಾಲು ಉತ್ಪಾದನೆಯ ಜತೆಗೆ ಮಾರಾಟ ಹೆಚ್ಚಳ ಮಾಡುವ ಸಂಬಂಧ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಹಲವಾರು ವರ್ಷಗಳ ಬೇಡಿಕೆ ಮೆಗಾ ಡೈರಿ ನಿರ್ಮಾಣವನ್ನು ಬಳ್ಳಾರಿಯಿಂದ ಯಾರು ಸ್ಥಳಾಂತರ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹೇಳಿದರು.
ಮೆಗಾಡೈರಿ ಸ್ಥಾಪನೆ ಕೆಲಸ ನಾನಾ ಕಾರಣಗಳಿಂದ ವಿಳಂಬವಾಗಿತ್ತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್ ಆಯ್ಕೆಯಾಗುತ್ತಿದ್ದಂತೆ ಮೆಗಾ ಡೈರಿ ಸ್ಥಾಪನೆಗೆ ಆದ್ಯತೆ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಿ, ಆರ್ಥಿಕ ಪರಿಸ್ಥಿತಿ ಬಲಪಡಿಸಲು ಹಾಲು ಉತ್ಪಾದನೆ ಹೆಚ್ಚಿಸಲು ₹50 ಕೋಟಿ ಅನುದಾನದಲ್ಲಿ 11 ಸಾವಿರ ಹಸುಗಳನ್ನು ವಿತರಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಒಂದು ದಶಕಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ನಿತ್ಯ 2 ಲಕ್ಷ ಲೀಟರ್ ಹಾಲು ಉತ್ಪಾದನೆಯ ಗುರಿ ಹೊಂದಲಾಗಿದೆ. ಬಳ್ಳಾರಿ ಜಿಲ್ಲೆಗೆ ನಾಲ್ಕು ನಿರ್ದೇಶಕ ಸ್ಥಾನ ಮೀಸಲಿಡಲು ಕ್ರಮ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.