ಸವಣೂರು: ದೇಶದ, ಈ ರಾಜ್ಯದ ಹಿಂದೂಗಳು ಬ್ರಾಹ್ಮಣ, ಲಿಂಗಾಯತ, ಕುರುಬ, ಎಸ್‌ಸಿ-ಎಸ್‌ಟಿ ಎನ್ನದೇ ಜಾತಿ ಮತ ಮರೆತು ಒಂದಾಗಬೇಕಾದ ಕಾಲ ಬಂದಿದೆ. ಇವತ್ತು ವಕ್ಫ್ ಮೂಲಕ ನಿಮ್ಮ ಆಸ್ತಿ, ಹೊಲ, ಮಠಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಮುಂದೊಂದು ದಿನ ಹಿಂದೂಗಳನ್ನೂ ಮುಗಿಸುವ ಕೆಲಸವಾಗುತ್ತದೆ. ಆದ್ದರಿಂದ, ನಾವು ಒಂದಾಗದಿದ್ದರೆ ಮುಂದೆ ಭವಿಷ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದರಾಮಯ್ಯ ಅವರ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಎಸ್ಪಿಯವರು ಸಾಲ ಹೆಚ್ಚಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕಟಣೆ ನೀಡುತ್ತಾರೆ. ಅಧಿಕಾರಿಗಳು ರಾಜಕಾರಣ ಮಾಡಬಾರದು ಎಂದು ಹೇಳಿದರು. ಗ್ಯಾರಂಟಿ..ಗ್ಯಾರಂಟಿ.... ಎಂದು ಬಾಯಿಬಡಿದುಕೊಳ್ಳುವ ಸಿಎಂ, ಡಿಸಿಎಂರಿಂದ ಯಾವುದೇ ಅಭಿವೃದ್ಧಿಗಳು ಆಗುತ್ತಿಲ್ಲ. ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ತಮ್ಮ ಒಂದು ಮತವನ್ನು ಕೂಲಿಯ ರೂಪದಲ್ಲಿ ನೀಡುವ ಮೂಲಕ ಉಪಕಾರ ತೀರಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಹುಬ್ಬಳ್ಳಿ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಂತ್ರೋಡಿ ಗ್ರಾಪಂ ಅಧ್ಯಕ್ಷ ಬಾಪುಗೌಡ ಕೊಪ್ಪದ, ಮುಖಂಡರಾದ ಧರೆಪ್ಪಗೌಡ ಪಾಟೀಲ, ಬಸನಗೌಡ ಕೊಪ್ಪದ, ಬಸವರಾಜ ಕುಂದೂರ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮತದಾರರು ಇದ್ದರು.