ಉಸ್ತುವಾರಿ ಮಂತ್ರಿಗಳೇ ನಿಮ್ಮನ್ನು ಮನೆಗೆ ಕಳಿಸುವ ಕಾಲ ದೂರವಿಲ್ಲ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork | Published : Jul 1, 2025 12:47 AM

ಕುಮಾರಣ್ಣ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ್ದರೂ ಕೂಡ ಒಂದು ದಿನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನಿಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಸ್ವತಂತ್ರವಾಗಿ ನಡೆಯಬೇಕಿದ್ದ ಸಂಸ್ಥೆಗಳನ್ನು ನಿಮ್ಮ ಹತೋಟಿಗೆ ತೆಗೆದುಕೊಂಡು ಆಡಳಿತ ನಡೆಸುತಿದ್ದೀರಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಂಡ್ಯ ಜಿಲ್ಲೆಯ ಉಸ್ತುವಾರಿ ಮಂತ್ರಿಗಳೇ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಮನೆಗೆ ಕಳಿಸುವ ಕಾಲ ದೂರವಿಲ್ಲ. ನೀವೇನು ನಾಗಮಂಗಲ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಿಂದ ಗೆದ್ದಿಲ್ಲ. ಮುಂದಿನ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರ ಬಿಟ್ಟು ಹೋದರೂ ಆಶ್ಚರ್ಯವಿಲ್ಲ. ಬೇರೆ ಕ್ಷೇತ್ರವನ್ನು ಈಗಾಗಲೇ ಹುಡುಕುತ್ತಿದ್ದೀರಿ ಎಂದು ನಿಖಿಲ್ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್, ಸಿಕ್ಕ ಸಿಕ್ಕ ಜೆಡಿಎಸ್ ಕಾರ್ಯಕರ್ತರ ಮೇಲೆ ಎಫ್‌ಐಆರ್ ಹಾಕಿಸಿ, ಎನ್‌ಸಿಆರ್ ಮಾಡಿಸಿ ಹೆದರಿಸಿ, ಬೆದರಿಸೋದು ನಿಮ್ಮ ಪಕ್ಷಕ್ಕೆ ಹೊಸದಲ್ಲ. ಉಪಮುಖ್ಯಮಂತ್ರಿಗಳ ಹಿನ್ನೆಲೆ ನೋಡಿದ್ರೆ ನೀವು ಬಂದಿರುವ ಸಂಸ್ಕೃತಿ ಎಂತದ್ದು ಅಂತ ಗೊತ್ತಾಗುತ್ತೆ ನಿಮ್ಮತ್ರ ಏನು ನಿರೀಕ್ಷೆ ಮಾಡುಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.

ಕುಮಾರಣ್ಣ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ್ದರೂ ಕೂಡ ಒಂದು ದಿನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನಿಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಸ್ವತಂತ್ರವಾಗಿ ನಡೆಯಬೇಕಿದ್ದ ಸಂಸ್ಥೆಗಳನ್ನು ನಿಮ್ಮ ಹತೋಟಿಗೆ ತೆಗೆದುಕೊಂಡು ಆಡಳಿತ ನಡೆಸುತಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕುಮಾರಣ್ಣನ ಹಳೆಯ ಸ್ನೇಹಿತರು, ಉಸ್ತುವಾರಿ ಮಂತ್ರಿಗಳು ಕುಮಾರಣ್ಣನನ್ನು ಮುಖ್ಯಮಂತ್ರಿ ಮಾಡಲು ಇವರೊಬ್ಬರೇ ಕಾರಣಕರ್ತರಂತೆ. ಕುಮಾರಣ್ಣ ಸಿಎಂ ಆದಾಗ ನೀವೆಲ್ಲ ಖಾವಿ ಧರಿಸಿದ್ರಾ. ಏನೂ ಅಪೇಕ್ಷೆ ಪಟ್ಟಿಲ್ವಾ. ನಿಮಗೆ ಪಕ್ಷ ಮಂತ್ರಿ ಗಿರಿ ಕೊಟ್ಟಿಲ್ವಾ ನೀವೂ ಮಾತ್ರ ನಿಮ್ಮ ಶಕ್ತಿಯನ್ನು ಕುಮಾರಣ್ಣನಿಗೆ ಧಾರೆ ಎರೆದಿದ್ದೀರಾ ಎಂದು ಪ್ರಶ್ನಿಸಿದರು.

ಕನಕಪುರದಲ್ಲಿ ಮುಂದೆ ತೋರಿಸ್ತೀವಿ:

ರಾಮನಗರದಲ್ಲಿ ರೇಷನ್‌ ಕಾರ್ಡ್ ಕೊಡ್ತೀನಿ ಎಂದು ಉಪಮುಖ್ಯಮಂತ್ರಿಗಳ ಸಹೋದರ ಡೇರಿ ಚುನಾವಣೆ ನಡೆಸಿದರು. ಸೋಲುತ್ತವೆ ಅನ್ನೋ ಭಯಕ್ಕೆ 17 ಸಹಕಾರ ಸಂಘಗಳನ್ನು ಸೂಪರ್ ಸೀಡ್ ಮಾಡಿದರು. ಮಾಗಡಿ ರಾಮನಗರದಲ್ಲೂ ಅದೇ ರೀತಿ ಮಾಡಿದರು ಎಂದು ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಕನಕಪುರದಲ್ಲಿ ಯಾರು ಗಂಡಸರೇ ಇಲ್ವಾ. ಹಾಗಾಗಿ ಇವರೇ ಅವಿರೋಧವಾಗಿ ಆಯ್ಕೆಯಾದ್ರಾ ಅಥವಾ ಅಭ್ಯರ್ಥಿಯನ್ನು ಹಾಕಿರಲಿಲ್ವಾ?. ಕನಕಪುರದಲ್ಲಿ ಮುಂದೆ ತೋರಿಸ್ತೀವಿ. 1985ರಲ್ಲಿ ಕನಕಪುರದ ಸಾತನೂರಿನಲ್ಲಿ ದೇವೇಗೌಡರನ್ನು ಗೆಲ್ಲಿಸಿದ್ದ ಉದಾಹರಣೆಯನ್ನು ಮರೀಬೇಡಿ ಎಂದು ಡಿಕೆ ಬ್ರದರ್ಸ್‌ಗೆ ಟಾಂಗ್ ಕೊಟ್ಟರು.

ಕನಕಪುರದಲ್ಲಿ ಪಂಚರತ್ನ ಯಾತ್ರೆ ನಡೆದಾಗ ಅಲ್ಲಿಗೆ ಹೋಗುವುದಕ್ಕೆ ಸಂಜೆ 7 ಗಂಟೆ ಆಗಿತ್ತು. ನನ್ನ ಜೀವನದಲ್ಲಿ ಅಂತಹ ಪ್ರೀತಿಯನ್ನು ನಾನು ನೋಡಿಲ್ಲ. ಅಲ್ಲಿ ಕುಮಾರಣ್ಣ ಬಂದಿದ್ದಾನೆ ಅಂತ ಹೋಗ್ತಿಯ ಎಂದು ಬಂದಿದ್ದವರಿಗೆಲ್ಲ ಭಯದ ವಾತಾವರಣ ಸೃಷ್ಟಿಸಿದ್ರಿ. ನಿಮ್ಮ ಧಮ್ಕಿಗೆ ಭಯಕ್ಕೆ ಹೆದರುವ ಮಗ ಯಾರು ಇಲ್ಲ ಎಂದು ವಾಗ್ದಾಳಿ ನಡೆಸಿದರು.

ನಾನು ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ನನ್ನ ಮೂರು ಚುನಾವಣೆಯ ಸೋಲಿನ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಮುಂದೆ ನಾನು ಚುನಾವಣೆಗೆ ಎಲ್ಲಿ ಸ್ಪರ್ಧೆ ಮಾಡಬೇಕೆಂದು ಯೋಚನೆ ಮಾಡಿಲ್ಲ. ಪಕ್ಷವನ್ನು ಕಟ್ಟಿದಂತಹ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ಕೊಡಿಸಬೇಕೆಂದೇ ನನ್ನ ಗುರಿಯಾಗಿದೆ ಎಂದರು.

ಹೋರಾಟದಿಂದ ಬೆಳೆದು ಬಂದಿರುವ ಜೆಡಿಎಸ್ ಪಕ್ಷ ಎಲ್ಲೂ ಕಳೆದು ಹೋಗಿಲ್ಲ. ಕಾರ್ಯಕರ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದೆ. 2028ಕ್ಕೆ ಕುಮಾರಣ್ಣ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡುವ ಮೂಲಕ ಜೆಡಿಎಸ್ ಪಕ್ಷದ ಬದ್ಧತೆಯನ್ನು ಎಲ್ಲರಿಗೂ ತೋರಿಸೋಣ ಎಂದು ತಿಳಿಸಿದರು.