ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಬಯಲು ಶೌಚಾಲಯವನ್ನು ನಿರ್ಬಂಧಿಸಲು ಸರ್ಕಾರ ಶಾಲಾ ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ. ಅದರಂತೆಯೇ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಶೌಚಾಲಯ ನರ್ಮಾಣಕ್ಕೆ ಮೂರು ವರ್ಷದ ಹಿಂದೆ ಕಾಮಗಾರಿ ಆರಂಭಿಸಿದ್ದು ಇದುವರೆಗೂ ಪೂರ್ಣಗೊಳಿಸದೆ ನಿರ್ಲಕ್ಷ್ಯವಹಿಸಿರುವ ಕಾರಣ ಮಕ್ಕಳು ಬಯಲು ಶೌಚಾಲಯವನ್ನೇ ಅವಲಂಭಿಸುವಂತಾಗಿದೆ.ತಾಲೂಕಿನ ಗುಲ್ಲಹಳ್ಳಿ ಗ್ರಾಪಂನ ಚಿಗರ‍್ಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ಲದೆ ಮಕ್ಕಳು ನಿತ್ಯ ಬಯಲು ಶೌಚಕ್ಕೆ ಹೋಗುವಂತಾಗಿತ್ತು. ಗ್ರಾಮಸ್ಥರ ಮನವಿಯಂತೆ ಗ್ರಾಪಂ ಖಾತರಿ ಯೋಜನೆಯಡಿ ೩ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಿತು. ಆದರೆ 3 ವರ್ಷ ಕಳೆದರೂ ಪೂರ್ಣಗೊಂಡಿಲ್ಲ.ಗ್ರಾಮೀಣ ಶಾಲೆಗಳ ಸಮಸ್ಯೆ
ಅರ್ಧಂಬರ್ಧ ಕಾಮಗಾರಿ ಮಾಡಿ ಪೂರ್ಣಗೊಳಿಸದೆ ಗುತ್ತಿಗೆದಾರ ಕಡೆಗಣಿಸಿರುವುದರಿಂದ ಶಾಲೆಯ ಹೆಣ್ಣು ಹಾಗೂ ಗಂಡು ಮಕ್ಕಳು ಶೌಚಕ್ಕಾಗಿ ಬಯಲನ್ನೇ ಅವಲಂಭಿಸುವಂತಾಗಿದೆ. ಎಲ್ಲ ಸರ್ಕಾರಿ ಅನುದಾನಿತ ಮತ್ತು ವಸತಿ ಶಾಲೆಗಳಲ್ಲಿ ನಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಾಣ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ, ಆದರೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಇನ್ನೂ ಶೌಚಾಲಯಗಳನ್ನೇ ನಿರ್ಮಿಸಿಲ್ಲ.ಗ್ರಾಪಂ ಸದಸ್ಯರೊಬ್ಬರು ಗುತ್ತಿಗೆ ಪಡೆದು ಶೌಚಾಲಯ ಕಾಮಗಾರಿಯನ್ನು ಆರಂಭಿಸಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆ. ಇದರಿಂದ ಪ್ರತಿ ದಿನ ಶಾಲಾ ಮಕ್ಕಳು ಅದರಲ್ಲೂ ಬಾಲಕಿಯರು ತೊಂದರೆ ಅನುಭವಿಸುವಂತಾಗಿದೆ. ಅರ್ಧಕ್ಕೆ ನಿಂತಿರುವ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಾಲೆಯ ಶಿಕ್ಷಕರು ಗ್ರಾಪಂ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. ಆದರೆ ಶೌಚಾಲಯಕ್ಕೆ ಮಂಜೂರಾಗಿದ್ದ ಅನುದಾನ ಮಾತ್ರ ಸಂಪೂರ್ಣವಾಗಿ ಡ್ರಾ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಬಿಇಒ ಕ್ರಮ ಕೈಗೊಳ್ಳಲಿಕ್ಷೇತ್ರಶಿಕ್ಷಣಾಧಿಕಾರಿಗಳೂ ಸಹ ಈ ಬಗ್ಗೆ ಆಸಕ್ತಿವಹಿಸಿ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದು ಪೂರ್ಣಗೊಳಿಸುವಲ್ಲಿ ಸಹ ವಿಫಲರಾಗಿದ್ದಾರೆ.ಈಗ ಮಳೆಗಾಲ ಬಯಲಿಗೆ ಹೇಗೆ ಶೌಚಕ್ಕೆ ಮಕ್ಕಳು ಹೋಗುವುದು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಕೂಡಲೇ ಶೌಚಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.