ದೊಡ್ಡಬಳ್ಳಾಪುರ: ಭಜನೆ ನಮ್ಮ ಜನಪದರಲ್ಲಿ ಹಾಸುಹೊಕ್ಕಾಗಿರುವ ಕಲೆ. ಧಾರ್ಮಿಕ ಆಲೋಚನೆಗಳ ಭಾಗವಾಗಿರುವ ಈ ಕಲೆ ಲೌಕಿಕ ಮತ್ತು ಪಾರಮಾರ್ಥಿಕಗಳ ನಡುವೆ ಬೆಸುಗೆ ಬೆಸೆಯವ ಸಮರ್ಥ ಚಿಂತನೆಗಳ ಭಾಗವಾಗಿದೆ.
ದೈವ ನಾಮಸ್ಮರಣೆಯ ಮೂಲಕ ಚಿತ್ತಶುದ್ಧಿಯ ಸಂಕೇತವಾಗಿ ಮನಃಶಾಂತಿಯ ಪರಮೋಚ್ಛ ಗುರಿ ಹೊಂದಿರುವ ಭಜನೆ ಕಲೆ ಸಾಹಿತ್ಯ, ಸಂಗೀತ, ಧಾರ್ಮಿಕ ಹಾಗೂ ಅಲೌಕಿಕ ಭಾವಗಳ ಸಮ್ಮಿಳಿತ ಮಾದರಿಯಾಗಿದೆ. ಹಿಂದಿನ ಕಾಲದಿಂದಲೂ ನಗರ ಹಾಗೂ ಹಳ್ಳಿಗಾಡಿನ ದೇಗುಲಗಳಲ್ಲಿ ಇಂತದ್ದೊಂದು ಸಂಪ್ರದಾಯ ಬೆಳೆದು ಬಂದಿದೆ. ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹಾಸುಹೊಕ್ಕಾಗಿರುವ ಈ ಕಲೆ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ.89 ವರ್ಷಗಳಿಂದ ಶ್ರಾವಣ ಭಜನೆ:
ತಾಲೂಕಿನ ಮಧುರೆ ಹೋಬಳಿಯಲ್ಲಿ ಕಳೆದ 89 ವರ್ಷಗಳಿಂದ ಶ್ರಾವಣ ಮಾಸದ ಭಜನೆ ನಡೆಯುತ್ತಿದೆ. ಒಂದು ತಿಂಗಳ ಕಾಲ ನಿರಂತರವಾಗಿ ಮಧುರೆ ಹೋಬಳಿಯ ಗ್ರಾಮಗಳಲ್ಲಿ ಇಸ್ತೂರು ಕೋದಂಡರಾಮಸ್ವಾಮಿ ಭಜನಾ ಮಂಡಲಿ ನೇತೃತ್ವದಲ್ಲಿ ನಡೆಯುವ ಭಜನೆ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಭಜನೆ ಕಲೆ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ. ಮಧುರೆ ಹೋಬಳಿಯ ಶ್ರಾವಣ ಮಾಸದ ಭಜನಾ ಕಾರ್ಯಕ್ರಮ 1936ರಲ್ಲಿ ಪ್ರಾರಂಭವಾಗಿದೆ. ಇಸ್ತೂರು ಗ್ರಾಮದ ಬೈರಹನುಮೇಗೌಡರು ಈ ಭಜನಾ ಕಾರ್ಯಕ್ರಮವನ್ನು ಮೊದಲಿಗೆ ಸಂಘಟಿಸಿದವರು. ಪ್ರಸ್ತುತ ಇಸ್ತೂರು ಕೋದಂಡರಾಮಸ್ವಾಮಿ ಭಜನಾ ಸಂಘ ಈ ಕಾರ್ಯವನ್ನು ನಿರ್ವಹಿಸುತ್ತದೆ. ಚನ್ನಾದೇವಿ ಅಗ್ರಹಾರದ ನಂಜೇಗೌಡರು ಅಧ್ಯಕ್ಷರಾಗಿ, ಇಸ್ತೂರು ರಾಮಯ್ಯ ಉಪಾಧ್ಯಕ್ಷರಾಗಿ, ಗಂಡರಗೂಳಿಪುರದ ಹನುಮಂತರಾಯಪ್ಪ ಕಾರ್ಯದರ್ಶಿಯಾಗಿ ಮತ್ತು ಹೊನ್ನಾದೇವಿಪುರ ಗ್ರಾಮದ ಮಹಾದೇವಯ್ಯ ಖಜಾಂಚಿಯಾಗಿ ಕೆಲಸ ಮಾಡುತ್ತಿದ್ದಾರೆ.ನಿರಂತರ ಭಜನೆ ಮಾಸಿಕ ಆರಂಭ:
ಈ ಬಾರಿ ಶ್ರಾವಣ ಮಾಸದ ಮೊದಲ ದಿನ ಇಸ್ತೂರು ಗ್ರಾಮದಲ್ಲಿ ಭಜನೆ ಪ್ರಾರಂಭವಾಗಿದೆ. ಶ್ರಾವಣ ಮಾಸದ ಕೊನೆಯ ದಿನ ಮಲ್ಲೋಹಳ್ಳಿ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ. ಭಜನೆ ಕಾರ್ಯಕ್ರಮದ ಸಮಾರೋಪ ಗೊಲ್ಲಹಳ್ಳಿ ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ನಡೆಯುತ್ತದೆ. ಮಧುರೆ ಹೋಬಳಿಯ ಇಸ್ತೂರು, ಇಸ್ತೂರು ಕಾಲೋನಿ, ಗಂಡರಗೊಳಿಪುರ, ಶ್ಯಾಕಲದೇವನಪುರ, ಗಾಡಿಗರಪಾಳ್ಯ, ಸಿಂಪಾಡಿಪುರ, ಮಲ್ಲೋಹಳ್ಳಿ, ಚನ್ನಾದೇವಿ ಅಗ್ರಹಾರ, ಕನಸವಾಡಿ, ಮಲ್ಲೋಹಳ್ಳಿ, ಮುಪ್ಪಡಿಘಟ್ಟ, ಮದಗೊಂಡನ ಹಳ್ಳಿ, ಚಲ್ಲಹಳ್ಳಿ, ಮಾರಸಂದ್ರ, ಬಂಡಯ್ಯನ ಪಾಳ್ಯ, ತಿಮ್ಮಸಂದ್ರ, ತಿಮ್ಮಸಂದ್ರ ಕಾಲೋನಿ, ಪುಟ್ಟೇನಹಳ್ಳಿ, ಕಮ್ಮಸಂದ್ರ ಗ್ರಾಮಗಳಲ್ಲಿ ಶ್ರಾವಣ ಮಾಸದ ನಿರಂತರ ಭಜನಾ ಕಾರ್ಯಕ್ರಮ ನಡೆಯುತ್ತದೆ.ಮನೆಮನೆಗೂ ಭಜನಾ ತಂಡ ಭೇಟಿ:
ಶ್ರಾವಣ ಮಾಸದ ಭಜನಾ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ, ತಬಲ, ತಾಳ ಮುಂತಾದ ವಾದ್ಯಗಳೊಂದಿಗೆ ಕಲಾವಿದರು ಪುರಂದರದಾಸ, ಕನಕದಾಸ, ತತ್ತ್ವ ಪದಕಾರರು, ಶಿಶುನಾಳ ಷರೀಫ್, ಜನಪದರು ಮುಂತಾದವರು ರಚಿಸಿರುವ ಸಾಹಿತ್ಯವನ್ನು ಹಾಡುತ್ತಾರೆ. ಇವರು ಹೆಚ್ಚಿನವರು ಪೌರಾಣಿಕ ನಾಟಕಗಳಲ್ಲಿ ಕಲಾವಿದರಾಗಿ ಅಭಿನಯಿಸಿದವರು. ಹರಿಕಥಾ ವಿದ್ವಾಂಸರು, ವಿವಿಧ ಗ್ರಾಮಗಳಲ್ಲಿರುವ ಭಜನಾ ಮಂಡಲಿಯ ಸದಸ್ಯರುಗಳು ಶ್ರಾವಣ ಮಾಸದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಗ್ರಾಮ ಪ್ರತಿಮನೆಗಳಿಗೂ ಭಜನಾ ತಂಡ ಹೋಗಿ ಸ್ವಲ್ಪ ಸಮಯ ಭಜನೆ ಮತ್ತು ಪೂಜಾ ಕಾರ್ಯಕ್ರಮ ನಡೆಸಿಕೊಡುತ್ತಾರೆ.ಕೋಟ್................
ಭಜನೆ ಕಲೆ ನಮ್ಮ ಪುರಾತನರು ನಮಗೆ ಬಿಟ್ಟು ಹೋದ ಕಲಾ ಪ್ರಕಾರ. ನಾವು ಇದನ್ನು ಯಶಸ್ವಿಯಾಗಿ ಉಳಿಸಿಕೊಂಡು ಬಂದಿದ್ದು, ನಮ್ಮ ಮುಂದಿನ ಪೀಳಿಗೆಗೂ ಪರಿಚಯಿಸುತ್ತೇನೆ. ಭಜನಾ ಕಲೆ ನಮ್ಮ ಬದುಕಿನ ಭಾಗವಾಗಿದೆ.-ರಾಮಯ್ಯ ಇಸ್ತೂರು, ಭಜನೆ ಕಲಾವಿದರು
ಕೋಟ್...............ಮಧುರೆ ಹೋಬಳಿಯ ಭಜನಾ ಕಲೆ ತನ್ನದೇ ಆದ ಪರಂಪರೆ ಹೊಂದಿದೆ. ಶ್ರಾವಣ ಮಾಸವಿಡೀ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ, ಮನೆಮನೆಗೂ ಭಜನೆಯ ದೈವಿಕ ಭಾವನೆಯನ್ನು ಪರಿಚಯಿಸುತ್ತಿದ್ದೇವೆ.
-ನಂಜೇಗೌಡ, ಅಧ್ಯಕ್ಷರು, ಭಜನಾ ಸಂಘ4ಕೆಡಿಬಿಪಿ1-
ದೊಡ್ಡಬಳ್ಳಾಪುರ ತಾಲೂಕಿನ ಇಸ್ತೂರಿನ ಕೋದಂಡರಾಮಸ್ವಾಮಿ ಭಜನಾ ಸಂಘದ ಶ್ರಾವಣ ಭಜನೆ ಸಂಭ್ರಮ.