ಬೆಂಗಳೂರು : ಇತ್ತೀಚೆಗೆ ಆನ್‌ಲೈನ್ ಶಾಪಿಂಗ್ ನೆಪದಲ್ಲಿ ಕನ್ನಡ ಚಲನಚಿತ್ರ ರಂಗದ ಹಿರಿಯ ನಟ, ನಿರ್ದೇಶಕ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಮಾಡಿ ಹಣ ದೋಚಿದ್ದ ಕಿಡಿಗೇಡಿಯೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ವಿಕಾಸ್ ಕುಮಾರ್ ಬಂಧಿತನಾಗಿದ್ದು, ಆರೋಪಿಯಿಂದ 15 ಸಾವಿರ ರು. ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೆಲ ದಿನಗಳ ಹಿಂದೆ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ಅವರ ಮೊಬೈಲ್ ನಂಬರ್ ಹ್ಯಾಕ್ ಮಾಡಿದ್ದ ಆರೋಪಿ, ತಾರಾ ದಂಪತಿ ಹೆಸರಿನಲ್ಲಿ ಅವರ ಸ್ನೇಹಿತರಿಂದ 1.65 ಲಕ್ಷ ರು. ಹಣ ಪಡೆದು ವಂಚಿಸಿದ್ದ. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ದೆಹಲಿಯ ಸೋನಿಯಾ ನಗರದಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ 15 ರಂದು ನಟ ಉಪೇಂದ್ರ ಹಾಗೂ ಅವರ ಪತ್ನಿ, ನಟಿ ಪ್ರಿಯಾಂಕ ಅವರ ವಾಟ್ಸಪ್ ಅನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದರು. ಆನ್‌ಲೈನ್‌ಲ್ಲಿ ಶಾಂಪಿಂಗ್‌ಗೆ ಪ್ರಿಯಾಂಕ ಅವರು ಕೊಟ್ಟಿದ್ದ ಮೊಬೈಲ್ ಸಂಖ್ಯೆಯನ್ನು ಪಡೆದು ಬಳಿಕ ಆರೋಪಿಗಳು ಹ್ಯಾಕ್ ಮಾಡಿದ್ದರು. ತಾರಾ ದಂಪತಿ ಹೆಸರಿನಲ್ಲಿ ಅವರ ಕುಟುಂಬದವರು ಹಾಗೂ ಪರಿಚಯಸ್ಥರಿಗೆ ಕರೆ ಮಾಡಿ ತಮಗೆ ಸಂಕಷ್ಟ ಎದುರಾಗಿ ತುರ್ತಾಗಿ 50 ಸಾವಿರ ರು. ಹಣ ಕೊಡುವಂತೆ ಸಂದೇಶ ಕಳುಹಿಸಿದ್ದರು. ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ಉಪೇಂದ್ರ ಅವರ ಪುತ್ರ ಸೇರಿದಂತೆ ಕೆಲವರು 1.65 ಲಕ್ಷ ರು. ಹಣವನ್ನು ಜಮೆ ಮಾಡಿದ್ದರು. ಕೆಲ ಹೊತ್ತಿನ ಬಳಿಕ ಮೊಬೈಲ್ ವಂಚನೆ ಗೊತ್ತಾಗಿ ಸದಾಶಿವನಗರ ಠಾಣೆಗೆ ತೆರಳಿ ಉಪೇಂದ್ರ ದೂರು ಸಲ್ಲಿಸಿದ್ದರು.
ಈ ಪ್ರಕರಣದ ತನಿಖೆಗಿಳಿದ ಪೊಲೀಸರು, ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆಗಳು ಹಾಗೂ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದರು. ಆಗ ಬಿಹಾರ ಗ್ಯಾಂಗ್‌ನ ಮಾಹಿತಿ ಸಿಕ್ಕಿದೆ. ಕೂಡಲೇ ಚುರುಕಾದ ಸಬ್ ಇನ್ಸ್‌ಪೆಕ್ಟರ್ ಜಮೀರ್ ಅಹಮ್ಮದ್ ನೇತೃತ್ವದ ತಂಡವು, ಆ ಸುಳಿವು ಬೆನ್ನತ್ತಿ ಬಿಹಾರ ರಾಜ್ಯದ ನಳಂದ ಜಿಲ್ಲೆಯ ಧರ್ಮಪುರಿ ಗ್ರಾಮಕ್ಕೆ ತೆರಳಿ ಆರೋಪಿ ವಿಕಾಸ್ ಮನೆ ಬಾಗಿಲು ಬಡಿಯಿತು. ಆದರೆ ಮನೆ ಬಾಗಿಲಿನಲ್ಲಿ ಪೊಲೀಸರನ್ನು ಕಂಡ ತಕ್ಷಣವೇ ಆತ ತಪ್ಪಿಸಿಕೊಂಡಿದ್ದ. ನಂತರ ವಿಕಾಸ್‌ನ ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಕಾರ್ಯಾಚರಣೆ ಮುಂದುವರಿಸಿದರು. ಕೊನೆಗೆ ದೆಹಲಿಯ ಸೋನಿಯಾ ನಗರದಲ್ಲಿ ಆತನ ಇರುವಿಕೆ ಪತ್ತೆಯಾಗಿದೆ. ಈ ಮಾಹಿತಿ ಆಧರಿಸಿ ಪಿಎಸ್‌ಐ ಜಮೀರ್ ತಂಡವು ದಾಳಿ ನಡೆಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾನು ವಂಚಿಸಿದ್ದು ಯಾರಿಗೆ ಎಂದ ಖತರ್ನಾಕ್!
ಹಲವು ವರ್ಷಗಳಿಂದ ಸೈಬರ್ ವಂಚನೆ ಮೂಲಕ ಹಲವು ಜನರಿಗೆ ವಂಚಿಸಿದ್ದೇನೆ. ಕೋಲ್ಕತಾ, ಮುಂಬೈ ಹಾಗೂ ದೆಹಲಿ ಹೀಗೆ ಯಾವ ಪೊಲೀಸರಿಗೆ ನನ್ನ ಸುಳಿವು ಸಿಗಲಿಲ್ಲ. ಆದರೆ ನೀವು ಹೇಗೆ ಪತ್ತೆ ಹಚ್ಚಿದ್ದೀರಿ. ಇಷ್ಟು ಪ್ರಯಾಸಪಟ್ಟು ನನ್ನನ್ನು ಬಂಧಿಸಿದ್ದರಲ್ಲ. ಹಾಗಾದರೆ ಯಾರಿಗೆ ನಾನು ವಂಚಿಸಿದ್ದು ಎಂದು ವಿಚಾರಣೆ ವೇಳೆ ಪೊಲೀಸರಿಗೆ ಆರೋಪಿ ವಿಕಾಸ್ ಪ್ರಶ್ನಿಸಿದ್ದಾನೆ.
ಆಗ ಉಪೇಂದ್ರ ಅವರ ಪೋಟೋವನ್ನು ತೋರಿಸಿ ಇವರಿಗೆ ನೀನು ವಂಚಿಸಿದ್ದು ಎಂದು ಪೊಲೀಸರು ಹೇಳಿದ್ದಾರೆ. ಆ ಪೋಟೋ ನೋಡಿ ಹೀರೋ ಇದ್ದಂಗೆ ಇದ್ದಾರಲ್ಲ ಎಂದಿದ್ದಾನೆ. ಅವರು ಹೀರೋನೇ ಕಣೋ ಎಂದು ಉತ್ತರಿಸಿದ್ದಾರೆ. ಕೊನೆಗೆ ಸರ್ ಇನ್ಯಾವತ್ತು ಬೆಂಗಳೂರಿನವರ ತಂಟೆಗೆ ಬರೋದಿಲ್ಲ ಎಂದು ವಿಕಾಸ್ ತಣ್ಣಗೆ ನುಡಿದಿದ್ದಾನೆ ಎನ್ನಲಾಗಿದೆ.
ಪೊಲೀಸರಿಗೆ ಉಪೇಂದ್ರ ಅಭಿನಂದನೆ
ವಂಚನೆ ಪ್ರಕರಣದಲ್ಲಿ ಆರೋಪಿ ಬಂಧನ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಉಪೇಂದ್ರ ಅವರು ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ ಆಯುಕ್ತ ವಂಶಿಕೃಷ್ಣ, ಡಿಸಿಪಿ ಅಕ್ಷಯ್.ಎಂ.ಹಾಕೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಸೈಬರ್ ಕೃತ್ಯ ನಡೆದ ಗೋಲ್ಡನ್ ಆವರ್‌ನಲ್ಲೇ ಪೊಲೀಸರಿಗೆ ಉಪೇಂದ್ರ ಅವರು ಮಾಹಿತಿ ನೀಡಿದ್ದರಿಂದ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಹೀಗಾಗಿ ಸೈಬರ್ ವಂಚನೆಗೊಳಗಾದವರು ದೂರು ಕೊಡಲು ವಿಳಂಬ ಮಾಡಬಾರದು.
-ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ