ತಾರತಮ್ಯವಿಲ್ಲದೆ ಬದುಕುವುದೇ ನಿಜವಾದ ಸಾಹಿತ್ಯ ಧರ್ಮ ಶ್ರೀಧರ ಬಳಗಾರ

KannadaprabhaNewsNetwork |  
Published : Jan 05, 2026, 02:45 AM IST
೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಹಳ್ಳಿಗಳಿಲ್ಲದೆ ಮಕ್ಕಳ ಸಹಜ ಬೆಳವಣಿಗೆ ಅಸಾಧ್ಯ. ಹಾಗೆಯೇ ಮಕ್ಕಳಿಲ್ಲದಿದ್ದರೆ ಹಳ್ಳಿಗಳ ಉಳಿವೂ ಸಾಧ್ಯವಿಲ್ಲ. ಯಂತ್ರ ನಾಗರಿಕತೆಯ ಭರಾಟೆಯಲ್ಲಿ ಕಳೆದುಹೋಗುತ್ತಿರುವ ಈ ಎರಡು ಕೊಂಡಿಗಳನ್ನು ಬೆಸೆಯುವುದೇ ಇಂದಿನ ಸಾಹಿತ್ಯದ ನೈಜ ಆಶಯವಾಗಬೇಕು.

ಸಿದ್ದಾಪುರ:

ಹಳ್ಳಿಗಳಿಲ್ಲದೆ ಮಕ್ಕಳ ಸಹಜ ಬೆಳವಣಿಗೆ ಅಸಾಧ್ಯ. ಹಾಗೆಯೇ ಮಕ್ಕಳಿಲ್ಲದಿದ್ದರೆ ಹಳ್ಳಿಗಳ ಉಳಿವೂ ಸಾಧ್ಯವಿಲ್ಲ. ಯಂತ್ರ ನಾಗರಿಕತೆಯ ಭರಾಟೆಯಲ್ಲಿ ಕಳೆದುಹೋಗುತ್ತಿರುವ ಈ ಎರಡು ಕೊಂಡಿಗಳನ್ನು ಬೆಸೆಯುವುದೇ ಇಂದಿನ ಸಾಹಿತ್ಯದ ನೈಜ ಆಶಯವಾಗಬೇಕು ಎಂದು ಹಿರಿಯ ಸಾಹಿತಿ ಶ್ರೀಧರ ಬಳಗಾರ ಹೇಳಿದರು.

ತಾಲೂಕಿನ ವಾಜಗದ್ದೆಯಲ್ಲಿ ನಡೆದ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಯಾಡಿದರು. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮತ್ತು ಗ್ರಾಮೀಣ ಬದುಕಿನಲ್ಲಾಗುತ್ತಿರುವ ಪಲ್ಲಟಗಳ ಕುರಿತು ಗಂಭೀರ ಚಿಂತನೆ ಮಂಡಿಸುತ್ತ ಇಂದಿನ ಆಧುನಿಕ ಶಿಕ್ಷಣವು ಮಕ್ಕಳನ್ನು ಯಂತ್ರ ನಾಗರಿಕತೆಯತ್ತ ದೂಡುತ್ತಿದೆ. ಮನೆಯಲ್ಲಿ ಮನುಷ್ಯರಿದ್ದರೂ ಮಾನವೀಯತೆ ಮರೆಯಾಗುತ್ತಿದೆ. ಮೊಬೈಲ್, ಟಿವಿಗಳ ಅಬ್ಬರದಲ್ಲಿ ಅಜ್ಜಿ-ಅಜ್ಜಂದಿರ ಕಥೆಗಳು ಮತ್ತು ಮನೆಯೊಳಗಿನ ಸಂಬಂಧಗಳು ಮೂಲೆಗುಂಪಾಗಿವೆ. ಕನ್ನಡ ಸಾಹಿತ್ಯ ಹುಟ್ಟುವುದು ಹಳ್ಳಿಯ ಸೊಗಡಿನಲ್ಲಿ, ಜಾನಪದ ಹಾಡಿನಲ್ಲಿ ಮತ್ತು ರೈತನ ಬೆವರಿನಲ್ಲಿ. ಮಕ್ಕಳಂತೆ ಜಾತಿ-ಮತದ ಹಂಗಿಲ್ಲದೆ, ಪ್ರಕೃತಿಯನ್ನು ಪ್ರೀತಿಸುತ್ತಾ, ತಾರತಮ್ಯವಿಲ್ಲದೆ ಬದುಕುವುದೇ ನಿಜವಾದ ಸಾಹಿತ್ಯ ಧರ್ಮ. ಹಳ್ಳಿಗಳನ್ನು ಮತ್ತು ಮಕ್ಕಳ ಮನೋಧರ್ಮವನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಜಿಪಂ ಸದಸ್ಯ ಎನ್.ವಿ. ಹೆಗಡೆ ಮುತ್ತಿಗೆ ಮಾತನಾಡಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಸತೀಶ ಮಾಬೇಶ್ವರ ಹೆಗಡೆ(ಕುಂಚಕಲೆ), ವಾಸುದೇವ ನಾಯ್ಕ ಕಿಲಾರ(ಯಕ್ಷಗಾನ), ನಾಟಕ- ಕೇಶವ ಹೆಗಡೆ ಕಿಬ್ಬೆ (ನಾಟಕ), ಮಾಲತಿ ಭಟ್ (ಸಾಹಿತ್ಯ) ಜಿ.ಐ. ನಾಯ್ಕ (ಶಿಕ್ಷಣ) ಲಕ್ಷ್ಮಣ ನಾಯ್ಕ ಬೇಡ್ಕಣಿ( ಮೂಡಲಪಾಯ), ಕೃಷ್ಣ ತಿಮ್ಮ ಗೌಡ ಮಾದ್ಲಮನೆ(ನಾಟಿವೈದ್ಯ), ರಂಗನಾಥ ವಿ. ಶೇಟ್(ವ್ಯಂಗ್ಯಚಿತ್ರ), ಕನ್ನೇಶ ಕೋಲಸಿರ್ಸಿ(ಮಾಧ್ಯಮ), ಸಿರಾಜ್ ಅಹ್ಮದ್(ಉದ್ಘೋಷಣೆ), ನಾಗರಾಜ ನಾಯ್ಕಡ(ಕಂದಾಯ), ಬಂಗಾರ್ಯ ನಾಯ್ಕ ಬಿಕ್ಕಳಸೆ(ಸೈನಿಕಸೇವೆ), ವೆಂಕಟಗಿರಿ ಕೃಷ್ಣಯ್ಯ ಹೆಗಡೆ(ಜಾನಪದ), ಪಿ.ವಿ. ಹೆಗಡೆ ಹೊಸಗದ್ದೆ( ಸಂಘಟನೆ), ನಾಗೇಶ ನಾಯ್ಕ ಬೊಮ್ಮಜನಿ(ಕೃಷಿ), ಗಂಗಾ ಅಣ್ಣಪ್ಪ ತರಳಿ(ಹಸೆಚಿತ್ರ) ಅವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪುರಸ್ಕರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ತಮ್ಮಣ್ಣ ಬೀಗಾರ, ಕಸಾಪ ತಾಲೂಕಾಧ್ಯಕ್ಷ ಚಂದ್ರಶೇಖರ್ ನಾಯ್ಕ ಕುಂಬ್ರಿಗದ್ದೆ, ನಾಗರಾಜ ಭಟ್ಟ ಕೆಕ್ಕಾರ, ಸುಧೀರ ಗೌಡರ್, ಕೆ.ಆರ್. ವಿನಾಯಕ, ರಮೇಶ ಹಾರ್ಸಿಮನೆ, ಗಣಪತಿ ಹೆಗಡೆ, ಎಸ್.ಎಂ. ಹೆಗಡೆ ಮುಂತಾದವರಿದ್ದರು.

ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಶಿರಳಗಿ ಸ್ವಾಗತಿಸಿದರು. ಮಂಜುನಾಥ ನಾಯ್ಕ ಮತ್ತು ಸಂತೋಷ ಅಳ್ವೆಕೋಡಿ ನಿರೂಪಿಸಿದರು. ರತ್ನಾಕರ ನಾಯ್ಕ ನಿರ್ಣಯ ಮಂಡಿಸಿದರು. ರಮೇಶ ನಾಯ್ಕ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌