ಕನ್ನಡಪ್ರಭ ವಾರ್ತೆ ಮದ್ದೂರು
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಬಿಡದಿಯ ಕೇತಗಾನಹಳ್ಳಿಯಲ್ಲಿ ಕಾನೂನು ಬಾಹಿರವಾಗಿ ಭೂ ಒತ್ತುವರಿ ಮಾಡಿಕೊಂಡಿರುವುದು ಸತ್ಯ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ಹೇಳಿದರು.ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದನಾಯಕನಹಳ್ಳಿ, ಕೆ.ಹಾಗಲಹಳ್ಳಿ, ಕಬ್ಬಾರೆ, ಎಲೆದೊಡ್ಡಿ, ಅರುವನಹಳ್ಳಿ ಹಾಗೂ ರಾಜೇಗೌಡನದೊಡ್ಡಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಕಾನೂನು ಬಾಹಿರ ಭೂ ಒತ್ತುವರಿ ಪ್ರಕರಣವನ್ನು ಹೈಕೋರ್ಟ್ ಆದೇಶದಂತೆ ತೆರವುಗೊಳಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಒತ್ತುವರಿ ಮಾಡಿಕೊಂಡಿರುವ ಭೂಮಿ ತಮ್ಮದೆಂದು ಕೇಂದ್ರ ಸಚಿವ ಕುಮಾರಸ್ವಾಮಿ ಬಳಿ ಒಂದು ವೇಳೆ ದಾಖಲೆ ಇದ್ದರೆ ಸಾಬೀತುಪಡಿಸಲಿ ಸವಾಲು ಹಾಕಿದರು.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೇತಗಾನಹಳ್ಳಿಯಲ್ಲಿ ಭೂ ಒತ್ತುವರಿಮಾಡಿಕೊಂಡಿದ್ದ ಬಗ್ಗೆ ಈ ಹಿಂದೆ ದೂರು ದಾಖಲಾಗಿತ್ತು. ಆದರೂ ಸಹ ಅವರು ನನ್ನ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಈ ಪ್ರಕರಣದಲ್ಲಿ ಕುಮಾರಸ್ವಾಮಿ ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತಿಗೆ ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದರು.ಬೆಂಗಳೂರಿನ ನಡೆದ ಕಾರ್ಯಕ್ರಮ ವೊಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯದವರು ಛತ್ರಿಗಳು ಎಂಬ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಛತ್ರಿಗಳು ಅಂದರೆ ಮಂಡ್ಯ ಜನ ಬಹಳ ಪ್ರಭುದ್ಧರು. ಯಾವ ಸಂದರ್ಭದಲ್ಲಾದರೂ ಯಾರನ್ನು ಬೇಕಾದರೂ ಸೋಲಿಸಿ ಬುದ್ಧಿ ಕಲಿಸುವ ನಿರ್ಧಾರ ತೆಗೆದುಕೊಳ್ಳುವ ಬುದ್ಧಿವಂತರೆಂದು ಹೊಗಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಮನ್ಮುಲ್ ನಿರ್ದೇಶಕ ಹರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ರಾಜೇಗೌಡನ ದೊಡ್ಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪಾಜಿ, ಶಿವು, ಕಬ್ಬಾರೆ ರಘು, ಆರ್. ಸಿ. ಮಹೇಶ ಹಾಗೂ ಗ್ರಾಮದ ಮುಖಂಡರುಗಳು ಇದ್ದರು.