ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜೀವನವೆಂಬ ಸಾಗರದಲ್ಲಿ ಸಮಸ್ಯೆ ಎಂಬ ಅದೆಷ್ಟೋ ಅಲೆಗಳು ಎದುರಾಗಿ ಬಂದರೂ ದಂಪತಿಗಳಿಬ್ಬರೂ ಎದುರಿಸಿ ನಿಲ್ಲುವುದೇ ಬದುಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವ ಜೀವನಕ್ಕೆ ಕಾಲಿಟ್ಟ ವಧು-ವರರನ್ನು ಹರಸಿ ಆಶೀರ್ವಚನ ನೀಡಿದರು. ಸತಿ-ಪತಿಗಳೆಂದರೆ ಬದುಕಿನ ಬಂಡಿಯ ಎರಡು ಚಕ್ರಗಳಿದ್ದಂತೆ. ಒಂದು ಚಕ್ರ ಉರುಳದಿದ್ದರೂ ಬದುಕು ನಿಂತ ನೀರಾಗಿ ಬಿಡುತ್ತದೆ. ಎರಡೂ ಚಕ್ರಗಳು ಸಮನಾಗಿ ಸಾಗಿದರೆ ಬದುಕಿನ ದಡವನ್ನು ಸುಲಭವಾಗಿ ತಲುಪಬಹುದು ಎಂದು ತಿಳಿಸಿದರು.
ದೇವರು ಕರ್ಮ ಹಾಗೂ ಪೂರ್ವ ಫಲಗಳನ್ನು ಹೊಂದಿಸಿ ಒಂದು ಗಂಡಿಗೆ ಮತ್ತೊಂದು ಹೆಣ್ಣನ್ನು ಕೂಡಿಸುವ ಮೂಲಕ ಸ್ವರ್ಗದಲ್ಲಿಯೇ ಮದುವೆ ನಿಶ್ಚಯ ಮಾಡಿರುತ್ತಾನೆ. ಇಲ್ಲಿ ಗುರು ಹಿರಿಯರ ಆಶೀರ್ವಾದ ಹಾಗೂ ದೇವತೆಗಳ ಸಾಕ್ಷಿಯೊಂದಿಗೆ ನವಜೀವನ ಪ್ರಾರಂಭವಾಗಲಿದೆ ಎಂದರು. ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಕಾರ್ಯಯೋನ್ಮುಖರಾಗಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಿಳೆ ಎಂದಿಗೂ ದುರ್ಬಲಳಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ ಎಂದರು.ಆಧುನಿಕತೆ ಮುಂದುವರಿದಿದ್ದರೂ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಸೇರಿದಂತೆ ವಿವಿಧ ಅನಿಷ್ಟ ಪದ್ಧತಿಗಳು ಜೀವಂತವಾಗಿದ್ದು ಸಮಾಜದಲ್ಲಿ ಪಿಡುಗಾಗಿ ಪರಿಣಮಿಸುತ್ತಿವೆ. ಈ ಎಲ್ಲವನ್ನು ನಿರ್ಮೂಲನಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ಚಿಕ್ಕ ವಯಸ್ಸಿನಲ್ಲಿಯೇ ಅಥವಾ ಪ್ರಬುದ್ಧತೆ ಬೆಳೆಯದೆ ಇರುವ ಯುವಕ ಯುವತಿಯರನ್ನು ಮದುವೆ ಮಾಡುತ್ತಿದ್ದು ಅಂತಹ ದಂಪತಿ ಕೆಲವೇ ದಿನಗಳಲ್ಲಿ ವಿಚ್ಛೇದನಕ್ಕೆ ಮುಂದಾಗುತ್ತಿರುವುದು ಕಂಡುಬರುತ್ತದೆ. ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಕಂಡುಬಂದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಶ್ರೀ ಕ್ಷೇತ್ರದಲ್ಲಿ ಜರುಗಿದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ೨೦ ಜೋಡಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಾನಿಗಳಾದ ಬೆಂಗಳೂರಿನ ಉದ್ಯಮಿ ಪ್ರದೀಪಾ ವೆಂಕಟೇಶ ಪ್ರಸಾದ್ ವಧುವರರಿಗೆ ವಸ್ತ್ರಗಳು, ಮಾಂಗಲ್ಯ, ಹೂವಿನ ಹಾರಗಳು, ಬಾಸಿಂಗ-ಪೇಟ ಹಾಗೂ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ರಾಜಾಪುರ ಗೇಟ್ ಶ್ರೀ ಸಾಯಿ ಸಿದ್ದಾಶ್ರಮದ ಗುರುಮೂರ್ತಿ ಗುರೂಜಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯಕುಮಾರ್, ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ, ದಾನಿಗಳಾದ ಪ್ರದೀಪ ವೆಂಕಟೇಶ ಪ್ರಸಾದ್, ಪ್ರಮುಖರಾದ ಸುರಭಿ ರಘು, ಗುಡಿಗೌಡ ಪ್ರಕಾಶ್, ಪೊಲೀಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.