ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಶಿಖರ ಏರಬೇಕಾದರೆ ಮೊದಲ ಹೆಜ್ಜೆ ಅತ್ಯಗತ್ಯ. ಹಾಗೆಯೇ ಉದ್ಯೋಗದ ವಿಷಯದಲ್ಲೂ ಯುವಕರು ಹಿಂಜರಿಯದೆ ಮೊದಲು ಸಿಕ್ಕ ಅವಕಾಶವನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದರು.
ಮೇಳದಲ್ಲಿ ಉದ್ಯೋಗ ಸಿಕ್ಕ ಆರಂಭದಲ್ಲಿ ಸಂಬಳ ಕಡಿಮೆ ಇರಬಹುದು ಅಥವಾ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರಬಹುದು. ಆದರೆ ಯುವಕರು ಹೊಂದಿಕೊಳ್ಳಬೇಕು. ಖಾಸಗಿ ಕಂಪನಿಗಳಲ್ಲಿ ಶಿಸ್ತು ಮತ್ತು ಪರಿಶ್ರಮ ಬಹಳ ಮುಖ್ಯ. ಅಲ್ಲಿ ಸರ್ಕಾರಿ ಕೆಲಸದಂತೆ ಸೋಮಾರಿತನಕ್ಕೆ ಅವಕಾಶವಿರುವುದಿಲ್ಲ ಎಂದು ಎಚ್ಚರಿಸಿದರು.ಶಾಸಕನಾಗಿ 2015-16ರಲ್ಲಿ ಚಳ್ಳಕೆರೆ ನಗರದಲ್ಲಿ ನಾವು ನಡೆಸಿದ ಉದ್ಯೋಗ ಮೇಳದಲ್ಲಿ ಸುಮಾರು 150 ಕಂಪನಿಗಳು ಭಾಗವಹಿಸಿದ್ದವು ಮತ್ತು 13,000 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದರು. ಸುಮಾರು 8,000 ದಿಂದ 9,000 ಜನರಿಗೆ ಉದ್ಯೋಗ ಲಭಿಸಿತ್ತು ಎಂದು ಶಾಸಕ ಟಿ. ರಘುಮೂರ್ತಿ ಇದೇ ಸಂದರ್ಭದಲ್ಲಿ ಸ್ಮರಿಸಿದರು.
*ಅಭ್ಯರ್ಥಿಗಳಿಂದ ಉತ್ತಮ ಸ್ಪಂದನೆ: ಜಿಲ್ಲಾ ಮಟ್ಟದ ಉದ್ಯೋಗ ಮೇಳ-2026ಕ್ಕೆ ಉತ್ತಮ ಸ್ಪಂದನೆ ದೊರೆಯಿತು. ಉದ್ಯೋಗ ಮೇಳದಲ್ಲಿ ಒಟ್ಟು 6,248 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಸ್ನಾತಕೋತ್ತರ ಪದವಿ 580, ಎಂ.ಟೆಕ್. 16, ಇಂಜಿನಿಯರಿಂಗ್ 388, ಪದವಿ 2,939, ಐ.ಟಿ.ಐ 411, ಡಿಪೆÇ್ಲಮಾ 199, ನಸಿರ್ಂಗ್ 86, ಪಿಯುಸಿ 899 ಎಸ್.ಎಸ್.ಎಲ್.ಸಿ ಪೂರೈಹಿಸಿದ 730 ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ನೊಂದಣಿಯಾದವರಲ್ಲಿ 3,110 ಪುರುಷ ಹಾಗೂ 3100 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 1739 ಪರಿಶಿಷ್ಟ ಜಾತಿ, 1042 ಪರಿಶಿಷ್ಟ ಪಂಗಡ, 2326 ಹಿಂದುಳಿದ ವರ್ಗ, 129 ಅಲ್ಪ ಸಂಖ್ಯಾತ, 977 ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಭಾಗವಹಿಸಿದ್ದರು.
ಟೆಕ್, ಫಾರ್ಮಾ, ಹಾರ್ಡವೇರ್, ಬ್ಯಾಂಕಿಂಗ್, ಇನ್ಸೂರೆನಸ್, ಮಾರ್ಕೆಟಿಂಗ್ ಸೇರಿದಂತೆ 86 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. ಸೂಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಂಡವು. ಇದರೊಂದಿಗೆ 35 ವರ್ಷ ಮೇಲ್ಪಟ್ಟವರಿಗೂ ಕಂಪನಿಗಳು ಉದ್ಯೋಗ ಅವಕಾಶದ ಬಾಗಿಲು ತೆರೆದವು.ಕಳೆದ ವರ್ಷ ಇಲ್ಲಿಯೇ ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಯಾಗಿ ಪಾಲ್ಗೊಂಡಿದ್ದ ಹೊಳಲ್ಕೆರೆಯ ಶರತ್ ಆಗ ಎಸ್‍ಬಿಐ ಲೈಫ್ ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು, ಶರತ್ ಈ ಬಾರಿಯ ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲು ಸಂದರ್ಶಕರಾಗಿ ಪಾಲ್ಗೊಂಡಿದ್ದಾರೆ. ಸದ್ಯ ಅವರು ಮಾಸಿಕ ರೂ.80,000 ವೇತನದ ಪಡೆಯುತ್ತಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ ಉಪನಿರ್ದೇಶಕ ಮಂಜುನಾಥ್, ಉದ್ಯೋಗಾಧಿಕಾರಿ ರವೀಂದ್ರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ ಸೇರಿದಂತೆ ಮತ್ತಿತರರು ಇದ್ದರು.