ಬಸವರಾಜ ಮಠದ
ನಗರದ ಜನಸಂಖ್ಯೆ ಒಂದು ದಾಟಿದೆ. ಅಲ್ಲದೆ ಅಪಾರ ಸಂಖ್ಯೆಯ ಜನರು ತಾಲೂಕಿನ ಬೇರೆ ಬೇರೆ ಊರುಗಳಿಂದ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಷ್ಟೊಂದು ಜನಸಂಖ್ಯೆಗೆ ನಗರದಲ್ಲಿರುವುದು ಕೇವಲ ಮೂರು ಮೂತ್ರಾಲಯ ಮಾತ್ರ. ನಗರಸಭೆ ಎದುರು, ಕಾಯಿಪಲ್ಲೆ ಮಾರುಕಟ್ಟೆ, ನಂಬರ್ 10 ಸರಕಾರಿ ಶಾಲೆಯ ಬಳಿ ಮೂತ್ರಾಲಯ ಇವೆ. ಪುರುಷರ ಮೂತ್ರಾಲಯ ಮಾತ್ರ ಇವೆ. ಇವುಗಳೂ ಸಹ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಒಳಗೆ ಕಾಲಿಡದಂತಹ ಪರಿಸ್ಥಿತಿ ಇದೆ. ಹಾಗಾಗಿ ಮೂತ್ರ ಮಾಡಲು ಬರುವ ಜನರು ಈ ದುರವಸ್ಥೆ ನೋಡಿ ಮೂತ್ರಾಲಯ ಪಕ್ಕದ ಗೋಡೆಗೆ ಮೂತ್ರ ಮಾಡಿ ಹೋಗುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಮೂತ್ರಾಲಯಗಳ ಸೌಲಭ್ಯ ಇಲ್ಲದ್ದರಿಂದ ಸಾರ್ವಜನಿಕರು ಸಿಕ್ಕ ಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಗೊರಬಾಳ ನಾಕಾ ಬಳಿ ಜನದಟ್ಟನೆ ಇರುತ್ತದೆ. ಹಳ್ಳಿಗಳಿಂದ ಬರುವ ಪ್ರಯಾಣಿಕರೆಲ್ಲ ಇಲ್ಲಿಯೇ ಇಳಿದುಕೊಳ್ಳುತ್ತಾರೆ. ಬಸ್‌ನಿಂದ ಇಳಿದವರೇ ಮೂತ್ರಾಲಯ ಹುಡುಕುತ್ತಾರೆ. ಆದರೆ ಎಲ್ಲಿಯೂ ಕಾಣದಿದ್ದಾಗ ರಸ್ತೆಬದಿಗೆ ನಿಂತು ಮೂತ್ರ ವಿಸರ್ಜನೆ ಮಾಡುವುದು ಅನುವಾರ್ಯವಾಗಿದೆ. ಇನ್ನು ಮುಖ್ಯ ಬಜಾರ್‌ನಲ್ಲಿಯೂ ಮೂತ್ರಾಲಯ ಇಲ್ಲ. ಇಲ್ಲಿಯೂ ಜನರು ಸಂದಿಗೊಂದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ.ಮೂಗು ಮುಚ್ಚಿಕೊಂಡೇ ಹೋಗಬೇಕು:ಇಳಕಲ್ಲ ನಗರದಲ್ಲಿ ಇರುವ ಮೂರು ಮೂತ್ರಾಲಯಗಳ ನಿರ್ವಹಣೆಯನ್ನು ನಗರಸಭೆ ಮಾಡುತ್ತಿಲ್ಲ. ನಿರ್ಮಾಣ ಮಾಡಿದಾಗಿನಿಂದ ಈವರೆಗೆ ಒಮ್ಮೆಯೂ ಸ್ವಚ್ಛತೆ ಕಂಡಿಲ್ಲ ಎನ್ನುತ್ತಾರೆ ಸಾರ್ವಜನಿಕರು. ನಗರಸಭೆ ಎದುರುಗಡೆಯೇ ಇರುವ ಮೂತ್ರಾಲಯವೂ ಗಬ್ಬೆದ್ದು ನಾರುತ್ತಿದೆ. ತನ್ನ ಎದುರಿಗಿರುವ ಮೂತ್ರಾಲಯವನ್ನೇ ಸ್ವಚ್ಛ ಮಾಡದ ನಗರಸಭೆಯವರು ಇನ್ನು ನಗರದ ವಿವಿಧೆಡೆ ಇರುವ ಮೂತ್ರಾಲಯದ ಕಡೆಗೆ ಕಣ್ಣೆತ್ತಿ ನೋಡುವರೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಮಹಿಳೆಯರ ಪರದಾಟ ಕೇಳೋರಿಲ್ಲ:ಇನ್ನು ಮಹಿಳೆಯರ ಪರಿಸ್ಥಿತಿಯಂತೂ ಕೇಳುವುದೇ ಬೇಡ. ನಗರದಲ್ಲಿ ಮಹಿಳೆಯರಿಗಾಗಿ ಒಂದೇ ಒಂದು ಶೌಚಾಲಯ ಅಥವಾ ಮೂತ್ರಾಲುಗಳಿಲ್ಲ. ತಾಲೂಕು ಕೇಂದ್ರವಾದ ಇಳಕಲ್ಲ ನಗರಕ್ಕೆ ವಿವಿಧ ಕೆಲಸಗಳಿಗಾಗಿ, ವ್ಯಾಪಾರ ವಹಿವಾಟು ನಡೆಸಲು ಪುರುಷರಷ್ಟೇ ಮಹಿಳೆಯರು ನಗರಕ್ಕೆ ಬರುತ್ತಾರೆ. ಉಚಿತ್ರ ಪ್ರಯಾಣ ಆರಂಭದ ಬಳಿಕವಂತೂ ಪುರುಷರ ದುಪ್ಪಟ್ಟು ಪ್ರಯಾಣಿಕರು ನಗರಕ್ಕೆ ಬರುತ್ತಿದ್ದಾರೆ. ಪರಸ್ಥಳದಿಂದ ಬಂದ ಮಹಳೆಯರು ಮೂತ್ರ ಮಾಡಲು ಮೂತ್ರಾಲಯ ಹುಡಕಿ ಕಡೆಗೆ ಸಂದಿ ಗೊಂದಿಗಳಲ್ಲಿ ಹೋಗುವ ಪರಿಸ್ಥಿತಿ ಬಂದಿದೆ. ಶೌಚಾಲಯವೂ ಇಲ್ಲದಿರುವುದರಿಂದ ನೈಸರ್ಗಿಕ ಕರೆ ತೀರಿಸಲು ಹೆಣಗಾಡುವಂತಾಗಿದೆ.
ನಗರದಲ್ಲಿ ಮೂತ್ರಾಲಯದ ಕೊರತೆಯ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಸಾರ್ವಜನಿಕರಿಂದಲೂ ಅನೇಕನ ಮನವಿಗಳು ಬಂದಿವೆ. ಈ ವರ್ಷದ ಬಜೆಟ್ ನಲ್ಲಿ ಇದಕ್ಕಾಗಿ ಅನುದಾನ ಮೀಸಲಿಟ್ಟು ಮೂತ್ರಾಲಯಗಳ ಸಂಖ್ಯೆ ಹೆಚ್ಚಿಸಲಾಗುವುದು. ಈಗಿರುವ ಮೂತ್ರಾಲಯಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.
ಇಳಕಲ್ಲ ನಗರದ ಪ್ರಮುಖ ಕೇಂದ್ರವಾದ ಕಂಠಿ ವೃತ್ತದಲ್ಲಿ ಮೂತ್ರಾಲಯ ಸಮಸ್ಯೆ ಬಹಳಷ್ಟಿದೆ. ಹೊರಗಡೆಯಿಂದ ಬರುವ ಸಾರ್ವಜನಿಕರು, ಮಹಿಳೆಯರು ಮೂತ್ರ ಮಾಡಲು ಪರದಾಡುತ್ತಿದ್ದಾರೆ. ನಗರಸಭೆ ಹಣಕೊಟ್ಟು ಬಳಕೆ ಮಾಡುವ ಶೌಚಾಲಯದ ವ್ಯವಸ್ಥೆಯನ್ನಾದರೂ ಮಾಡಬೇಕು.