ಇನ್ನೂ ಆರದ ದಾವಣಗೆರೆ ಮುಸ್ಲಿಂ ಕಿಚ್ಚು

KannadaprabhaNewsNetwork |  
Published : Apr 18, 2026, 01:15 AM IST
DK Shivakumar

ಸಾರಾಂಶ

ಅಬ್ದುಲ್‌ ಜಬ್ಬಾರ್ ಮತ್ತು ನಜೀರ್‌ ಅಹ್ಮದ್‌ ಅವರ ವಿರುದ್ಧದ ಕ್ರಮದ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ‘ಇಲ್ಲಿ ಯಾವುದೇ ವೈಯಕ್ತಿಕ ವಿಚಾರಗಳಿಲ್ಲ. ಪಕ್ಷಕ್ಕೆ ತನ್ನದೇ ಆದ ರೀತಿ-ರಿವಾಜುಗಳಿವೆ. ಎಂದು ಹೇಳಿದರು

  ಬೆಂಗಳೂರು :  ಅಬ್ದುಲ್‌ ಜಬ್ಬಾರ್ ಮತ್ತು ನಜೀರ್‌ ಅಹ್ಮದ್‌ ಅವರ ವಿರುದ್ಧದ ಕ್ರಮದ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಶುಕ್ರವಾರ ಈ ಸಂಬಂಧ ಸಚಿವ ಸತೀಶ್‌ ಜಾರಕಿಹೊಳಿ ಅವರು ತಮ್ಮೊಂದಿಗೆ ಚರ್ಚಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್‌, ‘ಇಲ್ಲಿ ಯಾವುದೇ ವೈಯಕ್ತಿಕ ವಿಚಾರಗಳಿಲ್ಲ. ಪಕ್ಷಕ್ಕೆ ತನ್ನದೇ ಆದ ರೀತಿ-ರಿವಾಜುಗಳಿವೆ. ಶಾಸಕರ ವಿಚಾರವಾಗಿ ದೆಹಲಿ ನಾಯಕರು ಏನೂ ಹೇಳದೆ, ಸೂಚನೆ ಕೊಡದೆ ನಾವು ಏನೂ ಮಾಡಲಾಗುವುದಿಲ್ಲ. ಕೆಲವನ್ನು ಮಾರ್ಗದರ್ಶನದ ಅನುಸಾರ ಮಾಡಬೇಕಾಗುತ್ತದೆ. ಕೆಲವರು ನನ್ನ ಮೇಲೆ ದೂರಬಹುದು. ಅದರ ಬಗ್ಗೆ ನಾನು ಚಿಂತಿಸುವುದಿಲ್ಲ. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ಅಲ್ಪಸಂಖ್ಯಾತ ಸಮುದಾಯವನ್ನು ತುಳಿಯಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಪಕ್ಷ ಇರುವುದೇ ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ರೈತರು ಸೇರಿ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಲು. ಆ ಕೆಲಸ ಮಾಡುತ್ತಿದ್ದೇವೆ ಎಂದು ಆರೋಪವನ್ನು ತಳ್ಳಿಹಾಕಿದರು.ಕಾಂಗ್ರೆಸ್ಸಲ್ಲಿ ನನ್ನ ಗುಂಪು, ಸಿದ್ದು ಗುಂಪು ಅಂತ ಇಲ್ಲ:

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಇದ್ದೇವೆ. ಪ್ರತಿದಿನ ಜತೆಯಲ್ಲೇ ಕೂರುತ್ತೇವೆ, ಚರ್ಚಿಸುತ್ತೇವೆ. ನಮ್ಮಲ್ಲಿ ಗುಂಪು ಎಂಬುದಿಲ್ಲ. ಎಲ್ಲರೂ ನಮ್ಮ ಶಾಸಕರೇ. ಮಾಧ್ಯಮಗಳು ನಮ್ಮನ್ನು ಇಬ್ಭಾಗ ಮಾಡುತ್ತಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮತ್ತು ಸಿದ್ದರಾಮಯ್ಯ ಅವರ ಗುಂಪು ಎಂಬುದು ಎಲ್ಲಿದೆ? ನೀವೇ ಗುಂಪು ಸೃಷ್ಟಿ ಮಾಡುತ್ತಿದ್ದೀರಿ. ದೆಹಲಿಗೆ ಹೋದ ಶಾಸಕರು ಸಿದ್ದರಾಮಯ್ಯ ಅವರ ಗುಂಪು ಹೋಗಿದೆ ಎಂದು ಹೇಳಿದ್ದೀರಿ. ಅವರೇನು ಸಿದ್ದರಾಮಯ್ಯ ಗುಂಪು ಎಂದು ಬೋರ್ಡ್ ಹಾಕಿಕೊಂಡಿದ್ದಾರೆಯೇ ಅಥವಾ ನನ್ನ ಗುಂಪು ಎಂದು ನಾನು ಬೋರ್ಡ್‌ ಹಾಕಿಕೊಂಡಿದ್ದೇರೆಯೇ? ಎಲ್ಲ 139 ಶಾಸಕರು ನನ್ನ ಮತ್ತು ಸಿದ್ದರಾಮಯ್ಯ ಅವರ ಶಾಸಕರೇ. ಯಾವ ಗುಂಪೂ ಇಲ್ಲ, ಬೋರ್ಡೂ ಇಲ್ಲ. ನಿಮಗೆ ಹೇಗೆ ಬೇಕೋ ಹಾಗೆ ಬರೆಯುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿ ಭೇಟಿ ಹಾಗೂ ಸಚಿವ ಸಂಪುಟ ಪುನಾರಚನೆ ಕುರಿತು ಮಾತನಾಡಿ, ಈಗ ಆ ವಿಚಾರದ ಚರ್ಚೆಯಿಲ್ಲ. ಮೊದಲು ಚುನಾವಣೆಗಳನ್ನು ಮುಗಿಸೋಣ. ಚುನಾವಣೆಯೇ ನಮ್ಮ ಮೊದಲ ಆದ್ಯತೆ. ದೆಹಲಿಯಲ್ಲಿ ಕಾರ್ಯಕ್ರಮ ನಿಮಿತ್ತ ನಾನು ಹಾಗೂ ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿದ್ದೇವೆ. ವಿವಿಧ ದೇಶಗಳ ರಾಯಭಾರಿಗಳು, ಉದ್ಯಮಿಗಳು ಸೇರಿ ಅನೇಕರು ಬರುತ್ತಾರೆ. ಐಟಿ-ಬಿಟಿ ಸಚಿವರು ಅದನ್ನು ಆಯೋಜಿಸಿದ್ದಾರೆ ಎಂದು ವಿವರಿಸಿದರು. 

ಜಬ್ಬಾರ್‌ ಸಸ್ಪೆಂಡ್‌ ಪುನರ್‌ ಪರಿಶೀಲಿಸಿ:

ದಾವಣಗೆರೆ ದಕ್ಷಿಣ ಉಪಚುನಾವಣೆ ನಂತರ ಪಕ್ಷದೊಳಗೆ ನಡೆದ ವಿದ್ಯಮಾನಗಳ ಕುರಿತು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಶುಕ್ರವಾರ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿಯಾಗಿ ಚರ್ಚೆ ನಡೆಸಿದರು.

ಕುಮಾರಕೃಪಾದಲ್ಲಿನ ಉಪಮುಖ್ಯಮಂತ್ರಿ ಅವರ ಸರ್ಕಾರಿ ನಿವಾಸದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾದ ಸತೀಶ್‌ ಜಾರಕಿಹೊಳಿ, ದಾವಣಗೆರೆ ದಕ್ಷಿಣ ಉಪಚುನಾವಣೆ ನಂತರ ಅಲ್ಪಸಂಖ್ಯಾತ ನಾಯಕರ ಮೇಲಿನ ಕ್ರಮಗಳ ಕುರಿತು ಚರ್ಚಿಸಿದರು. ಈ ವೇಳೆ ಅಬ್ದುಲ್‌ ಜಬ್ಬಾರ್‌ ಮತ್ತು ನಸೀರ್‌ ಅಹ್ಮದ್‌ ಮೇಲಿನ ಕ್ರಮದಿಂದಾಗಿ ಪಕ್ಷವು ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಅಲ್ಲದೆ, ಅಬ್ದುಲ್‌ ಜಬ್ಬಾರ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವ ಕ್ರಮವನ್ನು ಪರಿಶೀಲಿಸಿ, ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. 

ಜಬ್ಬಾರ್‌ ಉತ್ತರ ಬರಬೇಕಿದೆ:

ಅದಕ್ಕೆ ಡಿ.ಕೆ.ಶಿವಕುಮಾರ್‌ ಅವರು, ಈ ಕುರಿತು ವರಿಷ್ಠರೊಂದಿಗೆ ಮಾತುಕತೆ ನಡೆಸುತ್ತೇನೆ. ಅಲ್ಲದೆ ಅಬ್ದುಲ್‌ ಜಬ್ಬಾರ್‌ ಅವರೂ ಉತ್ತರಿಸಬೇಕಿದ್ದು, ಅದು ಬಂದ ನಂತರ ಮುಂದೆ ಏನು ಮಾಡಬಹುದು ಎಂದು ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.ಸತೀಶ್‌ ಜಾರಕಿಹೊಳಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಡಿ.ಕೆ.ಶಿವಕುಮಾರ್‌, ಅವರು ಪಕ್ಷದ ನಾಯಕರು. 2028ಕ್ಕೆ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಶೇ.1000ರಷ್ಟು ಅಧಿಕಾರಕ್ಕೆ ಮರಳುವ ವಿಶ್ವಾಸವಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣದ ಕುರಿತು ಸತೀಶ್‌ ಜಾರಕಿಹೊಳಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ನೆಲಮಂಗಲದಿಂದ ಗೊರಗುಂಟೆಪಾಳ್ಯವರೆಗೆ ಹೆಚ್ಚು ವಾಹನ ಸಂಚಾರ ದಟ್ಟಣೆಯಿದೆ. ಈ ಕುರಿತು ಚರ್ಚೆ ಮಾಡಿದೆವು ಎಂದು ಹೇಳಿದರು.

ಅಬ್ದುಲ್‌ ಜಬ್ಬಾರ್‌ ಅಮಾನತು ಹಿಂಪಡೆಯಬೇಕು: 

ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ, ಅಬ್ದುಲ್‌ ಜಬ್ಬಾರ್‌ ಅಮಾನತಿನ ಕುರಿತು ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅಮಾನತು ಹಿಂಪಡೆಯಬೇಕು ಎಂದು ಮಾತನಾಡಿದ್ದೇನೆ. ಅಧ್ಯಕ್ಷರ ಬಳಿಯೂ ಕೆಲ ವರದಿಗಳಿವೆ. ದಲಿತರು, ಅಲ್ಪಸಂಖ್ಯಾತರು ನಮ್ಮ ಮತದಾರರು. ಅಬ್ದುಲ್‌ ಜಬ್ಬಾರ್‌ ಉತ್ತರಿಸಲಿ, ಹೈಕಮಾಂಡ್‌ ಅದನ್ನು ಒಪ್ಪಿದ ನಂತರ ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ. ಕೆಲವೊಮ್ಮೆ ನಿರ್ಧಾರಗಳು ಆಗುತ್ತವೆ. ಅದನ್ನು ಸರಿಪಡಿಸಬೇಕು. ಅದನ್ನು ಮಾಡುವುದಕ್ಕಾಗಿಯೇ ಬಂದಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಖಾಲಿ ನಿವೇಶನ‌ದ ಕಸ ಸ್ವಚ್ಛಮಾಡದಿದ್ದರೆ 1 ಲಕ್ಷ ದಂಡ
ನಿನ್ನೆ 17 ಕಿ.ಮೀ ಫುಟ್ಪಾತ್ ಒತ್ತುವರಿ ತೆರವು