ರಾಣಿಬೆನ್ನೂರು: ಮೈಕ್ರೋ ಫೈನಾನ್ಸ್‌ಗಳು ಆರ್‌ಬಿಐ ನಿಯಮಾಳಿಗಳನ್ನು ಮೀರಿ ಬಡ್ಡಿ ಆಕರಿಸುವುದು ಹಾಗೂ ಸಾಲ ವಸೂಲಾತಿಗಾಗಿ ಗೂಂಡಾಗಳನ್ನು ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ನಗರದ ನಗರಸಭೆ ಸಭಾಭವನದಲ್ಲಿ ಸೋಮವಾರ ಕರೆಯಲಾಗಿದ್ದ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಇದಲ್ಲದೆ ತಮ್ಮ ಪಿಕೆಕೆ (ಪಕ್ಷಾತೀತ ಕಾಯಕದ ಕನಸು) ಇನಿಷಿಯೇಟಿವ್ಸ್ ವತಿಯಿಂದ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಸಹಾಯವಾಣಿ ತೆರೆಯಾಗುವುದು. ಯಾರಿಗಾದರೂ ಅಂತಹ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ ಸಂಖ್ಯೆ 7483646820 ಕರೆ ಮಾಡಿದಲ್ಲಿ ತಕ್ಷಣ ಅವರಿಗೆ ಅಗತ್ಯ ನೆರವು ಕಲ್ಪಿಸಲಾಗುವುದು ಎಂದರು.
ತಾಲೂಕಿನ ಚಂದಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ಮೂರು ಜನರು ಗ್ರಾಮ ತೊರೆದಿದ್ದಾರೆ. ಆದ್ದರಿಂದ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಸಂಯಮದಿಂದ ಸಾಲ ವಸೂಲಿ ಮಾಡಬೇಕು ಎಂದರು.ತಹಸೀಲ್ದಾರ್ ಆರ್.ಎಚ್. ಬಾಗವಾನ ಮಾತನಾಡಿ, ಅಧಿಕಾರಿಗಳು ಮೃದುವಾಗಿ ವರ್ತಿಸುವುದನ್ನು ಮೈಕ್ರೋ ಫೈನಾನ್ಸ್‌ನವರು ದುರ್ಬಳಕೆ ಮಾಡಿಕೊಳ್ಳುವುದು ಸಲ್ಲದು. ಸಾಲ ವಸೂಲಾತಿ ವೇಳೆ ಕಿರುಕುಳ ನೀಡುವಂತಿಲ್ಲ. ಒಂದು ವೇಳೆ ಕಿರುಕುಳ ನೀಡಿದ ಪ್ರಸಂಗ ಗಮನಕ್ಕೆ ಬಂದಲ್ಲಿ ಅಂತಹವರ ಲೈಸೆನ್ಸ್ ರದ್ದು ಪಡಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಸಿಪಿಐಗಳಾದ ಡಾ. ಶಂಕರ, ಎಂ.ಡಿ., ಸಿದ್ದೇಶ, ಡಾ. ಪ್ರವೀಣ ಹಾಗೂ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.