ಭಕ್ತಿಸಾಗರದಲ್ಲಿ ಮಿಂದೆದ್ದ ಅಂತೂರ ಬೆಂತೂರ ಗ್ರಾಮ!

KannadaprabhaNewsNetwork |  
Published : Jul 06, 2026, 02:30 AM IST
ಭಾನುವಾರ ಬೆಳಗ್ಗೆ ಅಂತೂರು ಬೆಂತೂರು ಗ್ರಾಮದಲ್ಲಿ ಶ್ರೀಗಳು ಶಿವಯೋಗ ಸಮಾಧಿ ಅನುಷ್ಠಾನಪೂರ್ಣಗೊಳಿಸಿದ ನಂತರ ಶ್ರೀಗಳ ಸಹಾಯದಲ್ಲಿ ಹೊರಗೆ ಬಂದರು.  | Kannada Prabha

ಸಾರಾಂಶ

33 ದಿನಗಳ ಅವಧಿಯಲ್ಲಿ ಅಂತೂರ, ಬೆಂತೂರ ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಭಕ್ತರು ಒಂದೊಂದು ದಿನದ ಉಚಿತ ಪ್ರಸಾದ ಸೇವೆಯ ಹೊಣೆಯನ್ನು ಸ್ವಯಂಪ್ರೇರಿತವಾಗಿ ವಹಿಸಿಕೊಂಡರು.

ಶಿವಕುಮಾರ ಕುಷ್ಟಗಿ

ಗದಗ: ತಾಲೂಕಿನ ಅಂತೂರ, ಬೆಂತೂರ ಗ್ರಾಮದ ಬೂದೀಶ್ವರ ಶ್ರೀಮಠದಲ್ಲಿ ನಡೆದ 33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನ ಕೇವಲ ಆಧ್ಯಾತ್ಮಿಕ ಕಾರ್ಯಕ್ರಮವಾಗಿಯೇ ಉಳಿಯದೆ, ಭಕ್ತಿ, ಸೇವೆ ಮತ್ತು ಸಮರ್ಪಣೆಯ ಮಹೋತ್ಸವವಾಗಿ ರೂಪುಗೊಂಡು ಕೇವಲ ಗದಗ ಜಿಲ್ಲೆ ಮಾತ್ರವಲ್ಲ, ಅಕ್ಕಪಕ್ಕದ ರಾಜ್ಯಗಳ ಭಕ್ತರೇ ದಂಡೇ ಗ್ರಾಮಕ್ಕೆ ಆಗಮಿಸಿ, ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು.

ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಶಿವಯೋಗ ಸಮಾಧಿಗೆ ಪ್ರವೇಶಿಸಿದ ದಿನದಿಂದ ಸಮಾಧಿ ಸಂಪನ್ನಗೊಳ್ಳುವ ವರೆಗೆ ಶ್ರೀಮಠದ ಆವರಣದಲ್ಲಿ ಹಗಲು, ರಾತ್ರಿ ಎನ್ನದೆ ನಿರಂತರ 24×7 ಶಿವನಾಮ ಭಜನೆ, ರುದ್ರಪಾರಾಯಣ ಹಾಗೂ ಶಿವಾರಾಧನೆ ನಡೆದವು. ಪ್ರತಿದಿನ ಭಕ್ತರ ಭಜನಾ ಮಂಡಳಿಗಳು, ಶಿವಭಕ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಓಂ ನಮಃ ಶಿವಾಯ ನಾಮ ಸ್ಮರಣೆಯ ಮೂಲಕ ಇಡೀ ಪರಿಸರವನ್ನು ಭಕ್ತಿಮಯಗೊಳಿಸಿದರು.

33 ದಿನಗಳ ಅವಧಿಯಲ್ಲಿ ಅಂತೂರ, ಬೆಂತೂರ ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಭಕ್ತರು ಒಂದೊಂದು ದಿನದ ಉಚಿತ ಪ್ರಸಾದ ಸೇವೆಯ ಹೊಣೆಯನ್ನು ಸ್ವಯಂಪ್ರೇರಿತವಾಗಿ ವಹಿಸಿಕೊಂಡರು. ಪ್ರತಿದಿನ ಸಾವಿರಾರು ಭಕ್ತರಿಗೆ ಯಾವುದೇ ಭೇದ-ಭಾವವಿಲ್ಲದೆ ಪ್ರೀತಿ, ಶ್ರದ್ಧೆ ಮತ್ತು ಸೇವಾಭಾವದಿಂದ ಅನ್ನಪ್ರಸಾದ ವಿತರಿಸಲಾಯಿತು. ಗ್ರಾಮಸ್ಥರ ಸಂಘಟನೆ, ಶಿಸ್ತು ಮತ್ತು ಸೇವಾ ಮನೋಭಾವ ಭಕ್ತರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.

ಅದರಲ್ಲೂ ಸಮಾಧಿ ಸಂಪನ್ನಗೊಂಡ ಭಾನುವಾರ ಶ್ರೀಮಠಕ್ಕೆ ಭಕ್ತಸಾಗರವೇ ಹರಿದುಬಂದಿತ್ತು. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ ಸಾವಿರಾರು ಭಕ್ತರಿಗೆ ಯಾವುದೇ ಕೊರತೆಯಾಗದಂತೆ ಅಚ್ಚುಕಟ್ಟಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಡುಗೆ ತಯಾರಿಕೆಯಿಂದ ಹಿಡಿದು ಊಟ ಬಡಿಸುವವರೆಗೆ ನೂರಾರು ಸ್ವಯಂಸೇವಕರು ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಯಾರೂ ಊಟವಿಲ್ಲದೆ ಹಿಂದಿರುಗದಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಭಾನುವಾರ ಮಾಜಿ ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಜಿಲ್ಲೆಯ ಅನೇಕ ಹಿರಿಯ ರಾಜಕೀಯ ನಾಯಕರು, ಜಿಪಂ, ತಾಪಂ, ಗ್ರಾಪಂ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಅದರಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀಗಳ ಅಭೂತಪೂರ್ವ ಶಿವಯೋಗ ಸಮಾಧಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಭಕ್ತಿ, ಸೇವೆ ಮತ್ತು ಸಂಘಟನೆಯ ಸುಂದರ ಸಂಗಮಕ್ಕೆ ಸಾಕ್ಷಿಯಾದ ಅಂತೂರ, ಬೆಂತೂರ ಗ್ರಾಮದ ಈ 33 ದಿನಗಳ ಶಿವಾರಾಧನೆ ಹಾಗೂ ಉಚಿತ ಪ್ರಸಾದ ಸೇವೆ, ಧಾರ್ಮಿಕ ಆಚರಣೆಗಳ ಜತೆಗೆ ಮಾನವೀಯ ಮೌಲ್ಯಗಳಿಗೂ ಮಾದರಿಯಾಗಿದೆ ಎಂದು ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಶಿಯಲ್ ಮೀಡಿಯಾ ಟ್ರೆಂಡಿಂಗ್

ಅಂತೂರು ಬೆಂತೂರು ಶ್ರೀಗಳ 33 ದಿನಗಳ ನಿರಂತರ ಶಿವಯೋಗ ಸಮಾಧಿ ಅನುಷ್ಠಾನದ ಪ್ರತಿಯೊಂದು ದಿನದ ಕಾರ್ಯಕ್ರಮವನ್ನು ಸಾವಿರಾರು ಸಂಖ್ಯೆಯ ಭಕ್ತರು ತಮ್ಮ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ಗಳ ಮೂಲಕ ಅಪ್‌ಡೇಟ್‌ ಮಾಡುತ್ತಿದ್ದ ಹಿನ್ನೆಲೆ ದಿನೇ ದಿನೇ ಭಕ್ತರ ಸಂಖ್ಯೆಯೂ ಹೆಚ್ಚುತ್ತಲೇ ಹೋಯಿತು. ವಿಜ್ಞಾನಕ್ಕೆ ಸವಾಲು ಎನ್ನುವಂತೆ ಸಾಧನೆ ಮಾಡಿರುವ ಶ್ರೀಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ಮೆಚ್ಚುಗೆ ಮತ್ತು ಭಕ್ತಿಭಾವವನ್ನು ಸಲ್ಲಿಸಿದರು. ಶ್ರೀಗಳ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಗದಗ: ತಾಲೂಕಿನ ಅಂತೂರು, ಬೆಂತೂರು ಗ್ರಾಮದಲ್ಲಿ ಲೋಕ ಕಲ್ಯಾಣಕ್ಕಾಗಿ 33 ದಿನಗಳ ಕಾಲ ಶಿವಯೋಗ ಸಮಾಧಿ ಯೋಗ ಕೈಗೊಂಡ ಅಂತೂರ ಬೆಂತೂರ ಗ್ರಾಮದ ಡಾ. ರಾಚೋಟೇಶ್ವರ ಆರೋಗ್ಯದಲ್ಲಿ ಭಾನುವಾರ ಸಂಜೆ ಏರುಪೇರು ಕಂಡುಬಂದ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.ಭಾನುವಾರ ಬೆಳಗ್ಗೆ ಶಿವಯೋಗ ಸಮಾಧಿಯಿಂದ ಹೊರಬಂದಾಗ ಬಳಲಿದಂತೆ ಕಂಡುಬಂದರೂ ಶ್ರೀಗಳ ಆರೋಗ್ಯ ಸ್ಥಿರವಾಗಿತ್ತು. ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಯೂ ತಪಾಸಣೆ ನಡೆಸಿ, ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ಖಚಿತಪಡಿಸಿದ್ದರು. ಆದರೆ ಕೆಲ ಗಂಟೆಗಳ ನಂತರ ಉಸಿರಾಟದಲ್ಲಿ ಸಮಸ್ಯೆ ಕಂಡುಬಂದಾಗ ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.ಶ್ರೀಗಳು ದೀರ್ಘ ಅವಧಿ ವರೆಗೆ ನೀರು, ಆಹಾರ ಸೇವಿಸದ ಕಾರಣ ನಿರ್ಜಲೀಕರಣಗೊಂಡಿದ್ದಾರೆ. ಸಹಜವಾಗಿ ರಕ್ತದೊತ್ತಡದಲ್ಲಿ ವ್ಯತ್ಯಾಸವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶ್ರೀಗಳ ಆರೋಗ್ಯ ಸುಧಾರಿಸುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಮುಂದಿನ 24 ಗಂಟೆಗಳ ಕಾಲ ನಿಗಾ ವಹಿಸಲಾಗುತ್ತದೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪರಾಧ ಮುಕ್ತ ನಾಳೆಗೆ ಮುನ್ನುಡಿ ಬರೆದ ಕೈದಿಗಳ ಸೃಜನಶೀಲತೆ
ಕೈಗಾರಿಕಾ ಸಂಘಗಳು ನೋಂದಣಿ ಮಾಡಿಕೊಳ್ಳಲಿ: ಸಾಜಿದ್ ಮುಲ್ಲಾ