ಕುಷ್ಟಗಿ: ತಾಲೂಕಿನ ಕೇಸೂರು ಗ್ರಾಪಂ ವ್ಯಾಪ್ತಿಯ ಗುಡಿ ಕಲಕೇರಿ ಹಾಗೂ ನಡುವಲಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹುಚ್ಚುಮಂಗನ ಕಾಟ ಹೆಚ್ಚಾಗಿದ್ದು, ಸೆರೆ ಹಿಡಿಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇತ್ತೀಚಿಗೆ ನಡೆದ ಕೇಸೂರು ಗ್ರಾಪಂ ಗ್ರಾಮಸಭೆಯಲ್ಲೂ ಹುಚ್ಚು ಮಂಗನ ಹಾವಳಿಯ ಕುರಿತು ಪ್ರಸ್ತಾಪವಾಗಿದೆ. ಆದರೆ ಈ ವರೆಗೂ ಯಾವುದೇ ಕ್ರಮ ಆಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೋತಿಯು ಆಡು, ಎತ್ತು, ಕುರಿಗಳ ಮೇಲೆ ದಾಳಿ ಮಾಡುತ್ತಿದ್ದು, ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಗ್ರಾಪಂ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಹಾಗೂ ದೂರವಾಣಿ ಮೂಲಕ ಹಲವು ಸಲ ವಿವರಿಸಿ, ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ.ನಮ್ಮ ಗ್ರಾಮದಲ್ಲಿ ಹುಚ್ಚುಮಂಗನ ಹಾವಳಿ ಮೀತಿಮೀರಿದ್ದು, ಈಗಾಗಲೆ ಏಳೆಂಟು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಮಹಿಳೆಯರು ಹಾಗೂ ಮಕ್ಕಳು ಹೊರಗಡೆ ತಿರುಗಾಡುವುದು ಕಷ್ಟಕರವಾಗಿದೆ. ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಜಮೀನಿಗೆ ಹೋಗಲು ಭಯವಾಗುತ್ತಿದೆ. ಆದಷ್ಟು ಬೇಗ ಈ ಮಂಗ ಸೆರೆಹಿಡಿಯಬೇಕು. ಈ ಕುರಿತು ಶಾಸಕರ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಗುಡಿಕಲಕೇರಿ ಗ್ರಾಪಂ ಸದಸ್ಯ ಗುರುನಗೌಡ ಪಾಟೀಲ ಹೇಳಿದರು.ಹುಚ್ಚು ಮಂಗನ ಹಾವಳಿಯ ಕುರಿತು ಗಮನಕ್ಕಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಶುಲ್ಕ ಭರಿಸುವುದಾಗಿ ಹೇಳಿದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಕೋತಿ ಹಿಡಿಯುವ ಖಾಸಗಿ ವ್ಯಕ್ತಿಗಳಿಗೆ ಹಿಡಿಯಲು ಹೇಳಲಾಗಿದೆ, ಎರಡು ದಿನಗಳಲ್ಲಿ ಬರುತ್ತೇವೆ ಎಂದು ಹೇಳಿದ್ದಾರೆ. ಕ್ರಮಕ್ಕೆ ಮುಂದಾಗುತ್ತೇವೆ ಎಂದು ಕೇಸೂರು ಪಿಡಿಒ ಗಂಗಯ್ಯ ವಸ್ತ್ರದ ಹೇಳಿದರು.ಒಂದೇ ಮಂಗ ಇರುವ ಕಾರಣ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕುಷ್ಟಗಿ ಅರಣ್ಯ ಇಲಾಖೆ ಅಧಿಕಾರಿ ರವಿಕುಮಾರ ಹೇಳಿದರು.