ಹಿಂಸಾಚಾರ, ವಾಹನಗಳಿಗೆ ಬೆಂಕಿ ಹಚ್ಚಿದವರು ನಿಜವಾದ ರೈತರಲ್ಲ-ಶಾಸಕ ಬಸವರಾಜ ಶಿವಣ್ಣನವರ

KannadaprabhaNewsNetwork | Published : Mar 13, 2024 2:01 AM

ಸಾರಾಂಶ

ಸೋಮವಾರದ ಅಹಿತಕರ ಘಟನೆಯಲ್ಲಿ ಪಾಲ್ಗೊಂಡವರು ನಿಜವಾದ ರೈತರಲ್ಲ, ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಪ್ಪುಚುಕ್ಕೆ ತಂದವರನ್ನು ಯಾವುದೇ ಕಾರಣಕ್ಕೂ ಸರ್ಕಾರ ಸುಮ್ಮನೆ ಬಿಡುವ ಪ್ರಶ್ನೆಯಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಸಿದರು.

ಬ್ಯಾಡಗಿ: ಸೋಮವಾರದ ಅಹಿತಕರ ಘಟನೆಯಲ್ಲಿ ಪಾಲ್ಗೊಂಡವರು ನಿಜವಾದ ರೈತರಲ್ಲ, ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಪ್ಪುಚುಕ್ಕೆ ತಂದವರನ್ನು ಯಾವುದೇ ಕಾರಣಕ್ಕೂ ಸರ್ಕಾರ ಸುಮ್ಮನೆ ಬಿಡುವ ಪ್ರಶ್ನೆಯಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಸಿದರು.

ಎಪಿಎಂಸಿ ಆವರಣದಲ್ಲಿ ಸೋಮವಾರ ನಡೆದ ಹಿಂಸಾತ್ಮಕ ಕೃತ್ಯಕ್ಕೆ ಸಂಬಂಧಿಸಿದಂತೆ ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಅಧಿಕಾರಿಗಳ ಮತ್ತು ವರ್ತಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾಡಗಿ ಮಾರುಕಟ್ಟೆ ಇಷ್ಟೊಂದು ಎತ್ತರಕ್ಕೆ ಬೆಳೆಯಲು ವರ್ತಕರ, ರೈತರ, ಕೂಲಿ ಕಾರ್ಮಿಕರ ನೂರಾರು ವರ್ಷಗಳ ಶ್ರಮವಿದೆ. ಇದನ್ನು ಅರ್ಥೈಸಿಕೊಳ್ಳಲಾಗದ ಕಿಡಗೇಡಿಗಳು ದರದಲ್ಲಿ ಕುಸಿತವೆಂಬ ನೆಪವನ್ನಿಟ್ಟುಕೊಂಡು ದಾಂಧಲೆ ನಡೆಸಿದ್ದಲ್ಲದೇ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ನಾಶಪಡಿಸಿದ್ದಾರೆ, ಯಾವುದೇ ಕಾರಣಕ್ಕೂ ರೈತರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಶ್ರಮದಿಂದ ಕಟ್ಟಲಾಗಿದೆ: ಮಾರುಕಟ್ಟೆ ಇಷ್ಟೊಂದು ಎತ್ತರಕ್ಕೆ ಕೇವಲ ಹಣದಿಂದ ಬೆಳೆದಿಲ್ಲ, ರೈತರ ಮತ್ತು ಕೂಲಿ ಕಾರ್ಮಿಕರ ಶ್ರಮದ ಪ್ರತಿಫಲವಾಗಿದೆ. ಬ್ಯಾಡಗಿ ಮಾರುಕಟ್ಟೆ ಸ್ಥಗಿತಗೊಂಡರೇ ಇಲ್ಲಿರುವ ವ್ಯಾಪಾರಸ್ಥರು ಇನ್ನೊಂದೆಡೆ ತಮ್ಮ ವಹಿವಾಟು ನಡೆಸುತ್ತಾರೆ. ಆದರೆ ಇದನ್ನೇ ನೆಚ್ಚಿ ಬದುಕನ್ನು ಕಟ್ಟಿಕೊಂಡಿರುವ ಮಹಿಳೆಯರು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನರ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಇಂತಹ ಸಾಮಾನ್ಯ ಪರಿಜ್ಞಾನವೂ ಇಲ್ಲದ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚದೇ ಬಿಡಲು ಸಾಧ್ಯವಿಲ್ಲ ಎಂದರು.ಸುಳ್ಳು ವದಂತಿಗಳನ್ನು ನಂಬಬೇಡಿ: ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ವ್ಯಾಪಾರಸ್ಥರು ಮಾತನಾಡಿಕೊಂಡು ಟೆಂಡರ್ ಹಾಕಿದ್ದಾರೆ ಎಂಬ ಸುಳ್ಳು ವದಂತಿಯೊಂದು ಇಷ್ಟೆಲ್ಲಾ ಅವಾಂತರ ಸೃಷ್ಟಿಗೆ ಕಾರಣವಾಗಿದೆ, ಕಳದೆರಡು ತಿಂಗಳ ಎಲ್ಲಾ ಮಾರುಕಟ್ಟೆಗಳ ದರಗಳ ವಿವರ ಪರಿಶೀಲಿಸಿದಲ್ಲಿ ರೈತರಿಗೆ ನಿಜವಾದ ಸತ್ಯಾಂಶ ತಿಳಿಯಲಿದೆ. ಮಾರುಕಟ್ಟೆ ಹುಟ್ಟಿದಾಗಿನಿಂದ ಇಂತಹ ಘಟನೆ ನಡೆದಿರಲಿಲ್ಲ. ಸದಾಕಾಲವು ಪಾರದರ್ಶಕ ವ್ಯಾಪಾರಕ್ಕೆ ಹಾಗೂ ರೈತರ ಶ್ರೇಯಸ್ಸನ್ನು ಬಯಸುವಂತಹ ಮಾರುಕಟ್ಟೆಗೆ ಕಳಂಕ ತರುವ ನಿಟ್ಟಿನಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆದಿದ್ದು ನನ್ನ ಮನಸ್ಸಿಗೆ ನೋವಾಗಿದೆ ಎಂದರು.ಹಸಿ ಮಾಲು ರವಾನಿಸಲು 8 ದಿನಬೇಕು: ವರ್ತಕ ಎಸ್.ಆರ್. ಪಾಟೀಲ ಮಾತನಾಡಿ, ಪ್ರತಿ ವಾರ ಮಾರುಕಟ್ಟೆಗೆ ಲಕ್ಷಾಂತರ ಚೀ ಲಗಳು ಮಾರಾಟಕ್ಕೆ ಬರುತ್ತಿದ್ದು, ಇದಕ್ಕೆ ಕಾರಣರಾದ ರೈತರಿಗೆ ಧನ್ಯವಾದ ತಿಳಿಸುತ್ತೇನೆ. ಹೆಚ್ಚು ನೀರು ಹಾಕಿಕೊಂಡು ಮಾರಾಟಕ್ಕೆ ತರುವ ಮೆಣಸಿನಕಾಯಿಯನ್ನು ಮತ್ತೆ ಒಣಗಿಸಿ ರವಾನಿಸಲು ಕನಿಷ್ಠ 8 ದಿನಗಳ ಕಾಲಾವಕಾಶದ ಅವಶ್ಯವಿದೆ. ಇದರಿಂದ ಅನಗತ್ಯ ವಿಳಂಬವಾಗಲಿದ್ದು, ಸ್ಥಳಾವಕಾಶದ ಕೊರತೆಯಿಂದ ಇದು ಕಷ್ಟ ಸಾಧ್ಯ. ಹೀಗಾಗಿ ವಾರಕ್ಕೆ ಕೇವಲ ಒಂದು ಬಾರಿ ಮಾತ್ರ ಮಾರುಕಟ್ಟೆ ಜರುಗಿಸುವ ನಿರ್ಧಾರಕ್ಕೆ ಬರಬೇಕಾಯಿತು ಎಂದರು.

ವೇದಿಕೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಹಾವೇರಿ ಉಪವಿಭಾಗಾಧಿಕರಿ ಚನ್ನಪ್ಪ, ಎಪಿಎಂಸಿ ಕಾರ‍್ಯದರ್ಶಿ ಎಚ್.ವೈ.ಸತೀಶ್, ಮಾಜಿ ಕಾರ್ಯದರ್ಶಿ ಎಸ್.ಜಿ. ನ್ಯಾಮಗೌಡ, ವರ್ತಕರ ಸಂಘದ ಗೌರವ ಕಾರ್ಯದರ್ಶಿ ರಾಜು ಮೋರಿಗೇರಿ ಇನ್ನಿತರರಿದ್ದರು.

ವಾರಕ್ಕೆ ಎರಡು ದಿವಸ ಟೆಂಡರ್ ನಡೆಸಿ: ರೈತರ ಹಿತದೃಷ್ಟಿಯಿಂದ ವಾರದಲ್ಲಿ 2 ದಿವಸ ಟೆಂಡರ್ ಮಾಡುವಂತೆ ವರ್ತಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ಇದರಿಂದ ರೈತರು ಜಾಸ್ತಿ ಸಂಖ್ಯೆಯಲ್ಲಿ ಸೇರುವುದನ್ನಾದರೂ ತಪ್ಪಿಸಬಹುದಾಗಿದೆ. ಜಿಲ್ಲೆಯಲ್ಲೇ ಇಂತಹ ಮಾರುಕಟ್ಟೆಗೆ ಕಪ್ಪುಚುಕ್ಕೆ ಇಡುವಂತಹ ಯಾರೇ ಆಗಲಿ ಕ್ಷಮಿಸಲು ಸಾಧ್ಯವಿಲ್ಲ. ಕಾನೂನು ರೀತ್ಯ ಕ್ರಮವಾಗಲಿದೆ ಜಿಲ್ಲಾಧಿಕಾರಿ ರಘುನಂದನಮೂರ್ತಿ ಹೇಳಿದರು.

ದರದಲ್ಲಿ ಕುಸಿತವಾಗಿಲ್ಲ: ಸೋಮವಾರದ ಟೆಂಡರ್‌ನಲ್ಲಿ ಯಾವುದೇ ಕಾರಣಕ್ಕೂ ದರದಲ್ಲಿ ಕುಸಿತವಾಗಿಲ್ಲ, ಮಾರುಕಟ್ಟೆಗೆ ಕೋಟಿ ಚೀಲ ಬರಲಿ ಖರೀದಿಸುವ ಸಾಮರ್ಥ್ಯವಿದೆ. ಪೊಲೀಸ್‌ ಅಧಿಕಾರಿಯನ್ನು ನೆಲಕ್ಕೆ ಕೆಡವಿದ್ದಲ್ಲದೇ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇಂತಹ ಘಟನೆ ರೈತನೆಂಬ ಪವಿತ್ರವಾದ ವೃತ್ತಿಗೆ ಕಳಂಕ ತರಲಿವೆ ಎಂದು ಬ್ಯಾಡಗಿ ವರ್ತಕರ ಸಂಘದ ಉಪಾಧ್ಯಕ್ಷ ಎ.ಆರ್. ನದಾಫ ಹೇಳಿದರು.

Share this article