ಸರ್ಕಾರ ಮಾಡಿದ್ದ ಬಡಾವಣೆಯನ್ನೇ ವಕ್ಫ್‌ ನುಂಗಿದೆ

KannadaprabhaNewsNetwork | Published : Nov 13, 2024 12:45 AM

ಸಾರಾಂಶ

ದಾವಣಗೆರೆ ಹೃದಯ ಭಾಗದ ಪಿ.ಜೆ. ಬಡಾವಣೆಯ ಸುಮಾರು ₹550 ಕೋಟಿಗೂ ಅಧಿಕ ಮೌಲ್ಯದ 4.13 ಎಕರೆ ಜಾಗವನ್ನು ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಕಬಳಿಸಲು ಮುಂದಾಗಿರುವ ದುರುಳ ಜಮೀರ್ ಅಹಮ್ಮದ್‌ ಅಂಡ್ ಗ್ಯಾಂಗ್‌ಗೆ ಅದೆಷ್ಟು ಅಹಂಕಾರ ಇರಬೇಕು? ಸರ್ಕಾರವೇ ಮಾಡಿದ ಬಡಾವಣೆಯನ್ನೇ ಇಲ್ಲಿ ವಕ್ಫ್ ನುಂಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ದಾವಣಗೆರೆಯಲ್ಲಿ ಆಕ್ರೋಶಗೊಂಡಿದ್ದಾರೆ.

- ದಾವಣಗೆರೆ ಮೇಲೆ ದುರುಳ ಜಮೀರ್‌ ಅಂಡ್ ಗ್ಯಾಂಗ್‌ ಕಣ್ಣು: ಆರ್‌.ಅಶೋಕ್‌ ಗರಂ । ಪಿ.ಜೆ. ಬಡಾವಣೆಗೆ ಭೇಟಿ ವೇಳೆ ಅಹವಾಲು ಸ್ವೀಕಾರ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಹೃದಯ ಭಾಗದ ಪಿ.ಜೆ. ಬಡಾವಣೆಯ ಸುಮಾರು ₹550 ಕೋಟಿಗೂ ಅಧಿಕ ಮೌಲ್ಯದ 4.13 ಎಕರೆ ಜಾಗವನ್ನು ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಕಬಳಿಸಲು ಮುಂದಾಗಿರುವ ದುರುಳ ಜಮೀರ್ ಅಹಮ್ಮದ್‌ ಅಂಡ್ ಗ್ಯಾಂಗ್‌ಗೆ ಅದೆಷ್ಟು ಅಹಂಕಾರ ಇರಬೇಕು? ಸರ್ಕಾರವೇ ಮಾಡಿದ ಬಡಾವಣೆಯನ್ನೇ ಇಲ್ಲಿ ವಕ್ಫ್ ನುಂಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಆಕ್ರೋಶಗೊಂಡರು.

ನಗರದ ಪಿ.ಜೆ. ಬಡಾವಣೆಗೆ ಮಂಗಳವಾರ ಕೇಂದ್ರ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ವಿಪ ಸದಸ್ಯ ಎನ್.ರವಿಕುಮಾರ ಇತರರ ಜೊತೆ ಭೇಟಿ ನೀಡಿದ್ದ ವೇಳೆ ವಕ್ಫ್ ಆಸ್ತಿಯೆಂದು ಕಂಡುಬಂದ ಜಾಗಗಳ ಮಾಲೀಕರು, ನಿವಾಸಿಗಳು, ವ್ಯಾಪಾರಸ್ಥರ ಅಹವಾಲು ಆಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ವಕ್ಫ್‌ ಮಂಡಳಿಯಿಂದ ಆಸ್ತಿ ಕಬಳಿಕೆ ಮುಂದುವರಿದಿದೆ ಆರೋಪಿಸಿದರು.

ನಗರಸಭೆ 1940ರಲ್ಲೇ ಅಭಿವೃದ್ಧಿಪಡಿಸಿ, ಹಂಚಿಕೆ ಮಾಡಿದ್ದ ಇಲ್ಲಿನ ಪಿ.ಜೆ. ಬಡಾವಣೆಯ ಸುಮಾರು 1.88 ಲಕ್ಷ ಚದರ ಅಡಿಗಿಂತಲೂ ಅಧಿಕ ಜಾಗವನ್ನು ವಕ್ಫ್ ಆಸ್ತಿ ಮಾಡಲು ಹೊರಟಿದ್ದಾರೆ. ಜನತೆ ಇದರ ವಿರುದ್ಧ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಮುಂದೆ ನೋಟಿಸ್ ಕೊಡುವುದಿಲ್ಲವೆಂದು ಹೇಳಿದ್ದಾರೆ. ನೋಟಿಸ್‌ನಿಂದ ಏನೂ ಆಗುವುದಿಲ್ಲ. ಮೊದಲು ಕಾಲಂ 9.11 ತೆಗೆಯಬೇಕು. ಇನ್ನು ನಾವು ಇಲ್ಲಿಗೆ ಬಿಡುವುದೂ ಇಲ್ಲ. ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇವೆ. ದಿನ ಬೆಳಗ್ಗೆ ಎದ್ದರೆ ಸಾಕು, ವಕ್ಫ್ ಮಂಡಳಿ ನೋಟಿಸ್‌, ರೈತರು, ಜನರು, ಮಠ- ಮಂದಿರಗಳ ಆಸ್ತಿ ಇನ್ನು ವಕ್ಫ್ ಆಸ್ತಿ ಅಂತಾ ಬರುತ್ತಲೇ ಇದೆ. ಸಿದ್ದರಾಮಯ್ಯಗೆ ವಿನಂತಿ ಮಾಡುತ್ತೇವೆ. ಇಡೀ ಕರ್ನಾಟಕ ರಾಜ್ಯವನ್ನೇ ಖಬರಸ್ಥಾನ ಅಂತಾ ಬರೆದು ಕೊಟ್ಟುಬಿಡಲಿ ಎಂದು ಕುಟುಕಿದರು.

ಸರ್ಕಾರಿ ಕಾಮಗಾರಿಗಳ ಟೆಂಡರ್‌ನಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಕೊಡುತ್ತಿದ್ದೀರಿ. ಮುಸ್ಲಿಮರೇನು ದಲಿತರಾ?, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡವಾ? ಒಂದು ರೆಕಾರ್ಡ್ ಆಗಿ ಹೋಗಲಿ, ಇಡೀ ಕರ್ನಾಟಕವನ್ನೇ ಬರೆದುಕೊಟ್ಟು ಬಿಡಿ. ರೈತರ ಹೊಲ, ಗದ್ದೆ, ಜನರ ನಿವೇಶನ, ಮನೆ, ಮಠ ಮಂದಿರ, ಅವುಗಳ ಆಸ್ತಿಗಳೂ ವಕ್ಫ್ ಮಂಡಳಿ ಪಾಲಾಗುತ್ತಿದ್ದು, ಕರ್ನಾಟಕವನ್ನು ಸಿದ್ದರಾಮಯ್ಯ ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಮುಸ್ಲಿಂಪರ ಮುಖ್ಯಮಂತ್ರಿ ಅಂತಲೇ ಬ್ರ್ಯಾಂಡ್ ಆಗಿರುವ ಸಿದ್ಧರಾಮಯ್ಯ, ಇಡೀ ರಾಜ್ಯವನ್ನು ವಕ್ಫ್ ಬೋರ್ಡ್‌ಗೆ ದಾನ ಮಾಡಿ ಬಿಡಲಿ. ಮುಸ್ಲಿಮರು ಏನೇ ಕೇಳಿದರೂ ಕೊಡುವ ಸಿದ್ದರಾಮಯ್ಯ ಹಿಂದೂಗಳಿಗೆ ಮಾತ್ರ ನಾಳೆ ಬಾ, ನಾಡಿದ್ದು ಬಾ, ನೋಡೋಣ ಎಂಬ ಬೋರ್ಡ್ ಹಾಕಿಕೊಂಡಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಇರೋವರೆಗೂ ಮುಸ್ಲಿಮರು ಬಳಿದು, ಬಾಚಿಕೊಂಡು ಬಿಡುತ್ತಾರೆ. ನಂತರ ಬಳಿದುಕೊಳ್ಳುವುದಕ್ಕೆ ಮತ್ತೆ ಎಂದಿಗೂ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲವೆಂಬ ಸತ್ಯವೂ ಮುಸ್ಲಿಮರಿಗೆ ತಿಳಿದಿದೆ. ಸಿದ್ದರಾಮಯ್ಯ ಉಪ ಚುನಾವಣೆ ಕಾರಣಕ್ಕಾಗಿ ಜನರ ಕಣ್ಣೊರೆಸಲು ಮುಟೇಷನ್ ಹಿಂಪಡೆಯಲು ಆದೇಶಿಸಿದ್ದಾರೆ. ಉಪ ಚುನಾವಣೆ ನಂತರ ನೋಟೀಸ್ ಕೊಟ್ಟು ಆಸ್ತಿ ಕಬಳಿಸುವುದನ್ನು ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಬಿಜೆಪಿ ವಿಪ ಸದಸ್ಯರಾದ ಎನ್.ರವಿಕುಮಾರ, ಕೆ.ಎಸ್‌.ನವೀನ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಜಿ.ಎಸ್.ಅನಿತಕುಮಾರ, ಅಣಜಿ ಅಣ್ಣೇಶ, ಅನಿಲಕುಮಾರ, ಬಿ.ಎಸ್.ಜಗದೀಶ, ಎಸ್.ಎಂ.ವೀರೇಶ ಹನಗವಾಡಿ, ಎಸ್.ಟಿ.ಯೋಗೇಶ್ವರ, ಶಾಮನೂರು ಪ್ರವೀಣ, ಗ್ಯಾರಹಳ್ಳಿ ಶಿವು, ಶಿವನಗೌಡ ಪಾಟೀಲ, ಸೋಗಿ ಗುರು, ಟಿಂಕರ್ ಮಂಜಣ್ಣ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಇದ್ದರು.

- - -

ಬಾಕ್ಸ್‌

* ಸಿದ್ದು ಬುದ್ಧಿ, ಡಿಎನ್ಎನಲ್ಲೇ ಟಿಪ್ಪು ಸುಲ್ತಾನ್: ಆರ್.ಅಶೋಕ

- ಪಹಣಿಯಲ್ಲಿ ವಕ್ಫ್ ಹೆಸರು ತೆಗೆದು ಹಾಕಲು ಸರ್ಕಾರಕ್ಕೆ ತಾಕೀತು ಕನ್ನಡಪ್ರಭ ವಾರ್ತೆ ದಾವಣಗೆರೆ

ಮೈಸೂರು ಅರಸರ ಹೆಸರಿನಲ್ಲಿ ದಾವಣಗೆರೆ ನಗರಸಭೆ 1940ರಲ್ಲಿ ಫ್ರಿನ್ಸ್ ಜಯರಾಜೇಂದ್ರ ಒಡೆಯರ್ ಬಡಾವಣೆ ನಿರ್ಮಿಸಿ, ಜನರಿಗೆ ನಿವೇಶನಗಳ ಹಂಚಿಕೆ ಮಾಡಿತ್ತು. ಈಗ ಅದೇ ಬಡಾವಣೆಯ ಜಾಗದ ಮೇಲೆ ಜಮೀರ್ ಅಹಮ್ಮದ್ ಮತ್ತು ಗ್ಯಾಂಗ್‌ನ ಕಣ್ಣುಬಿದ್ದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.

ನಗರದ ಪಿ.ಜೆ. ಬಡಾವಣೆಗೆ ಭೇಟಿ ನೀಡಿದ್ದ ವೇಳೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1940ರಲ್ಲೇ ನಗರಸಭೆ ಬಡ, ಮಧ್ಯಮ ವರ್ಗದ ಜನರಿಗೆ ಹಂಚಿದ್ದ ನಿವೇಶನಗಲ್ಲಿ ಈಗ ಮನೆಯಾಗಿವೆ. ಪಿ.ಜೆ. ಬಡಾವಣೆ ಇಲ್ಲಿನ ಪ್ರತಿಷ್ಟಿತ ಬಡಾವಣೆಯಾಗಿದೆ ಎಂದರು.

ಈಗ ಅದೇ ಪಿ.ಜೆ. ಬಡಾವಣೆಯ 4.13 ಎಕರೆ ಜಾಗ ವಕ್ಫ್‌ಗೆ ಸೇರಿದ್ದೆಂಬ ಆತಂಕಕಾರಿ ಸಂಗತಿ ಹೊರಬಿದ್ದಿದೆ. ಸುಮಾರು 1.88 ಲಕ್ಷ ಚದರಡಿ ವಿಸ್ತೀರ್ಣದ ಈ ಜಾಗದ ಇಂದಿನ ಮಾರುಕಟ್ಟೆ ದರ ಕನಿಷ್ಠ ₹565 ಕೋಟಿ. ಇಂತಹ ಬಹುಕೋಟಿ ಮೌಲ್ಯದ ಜಾಗವನ್ನು ವಕ್ಫ್ ಬೋರ್ಡ್ ಖಬರಸ್ಥಾನ ಅಂತಾ ಮಾಡಿದ್ದು, ಇಲ್ಲಿನ ಜನ ಆತಂಕಕ್ಕೀಡಾಗಿದ್ದಾರೆ ಎಂದರು.

ಈಗಾಗಲೇ ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕುಗಳಲ್ಲೂ ರೈತರಿಗೆ ವಕ್ಫ್‌ನಿಂದ ದೊಡ್ಡಮಟ್ಟದಲ್ಲಿ ಮೋಸ ಆಗುತ್ತಿದೆ. ಕೂಡಲೇ ಪಹಣಿಯಲ್ಲಿರುವ ಹೆಸರುಗಳನ್ನು ತೆಗೆದುಹಾಕಲು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿ, ಅದನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸಬೇಕು. ಇಲ್ಲವಾದರೆ ಆ ಜನರ ಶಾಪವು ಸಿಎಂ ಸಿದ್ದರಾಮಯ್ಯಗೆ ತಟ್ಟುತ್ತದೆ ಎಂದು ಅವರು ಎಚ್ಚರಿಸಿದರು.

ಸಿದ್ದರಾಮಯ್ಯ ಬುದ್ಧಿ ಮತ್ತು ಡಿಎನ್‌ಎನಲ್ಲೇ ಬರೀ ಟಿಪ್ಪು ಸುಲ್ತಾನ್ ಇದೆ. ಮುಡಾ ಹಗರಣ ಬಯಲಿಗೆ ಬಂದ ನಂತರ ಸಿದ್ದರಾಮಯ್ಯಗೆ ಹೆದರಿಕೆ, ಭಯ ಜಾಸ್ತಿ ಆಗಿದೆ. ಇನ್ನು ಇ.ಡಿ. ಪ್ರವೇಶವಾದ ನಂತರವಂತೂ ಭಯ, ಹೆದರಿಕೆ ಹೆಚ್ಚಾಗಿದೆ. ಅದಕ್ಕಾಗಿಯೇ ಈಗ ಅವರು ನಾಮ, ಬೊಟ್ಟು ಇಟ್ಟುಕೊಳ್ಳುವುದು, ದೇವರ ಮೊರೆ ಹೋಗುವುದು ಹೆಚ್ಚಾಗಿದೆ ಎಂದು ಆರ್.ಅಶೋಕ ವ್ಯಂಗ್ಯವಾಡಿದರು.

- - -

-12ಕೆಡಿವಿಜಿ3, 4:

ವಕ್ಫ್ ಆಸ್ತಿ ಅಂತೆ. ಅದ್ಹೆಂಗ್ರಿ ನಮ್ಮ ಅಪ್ಪ, ಹಿರಿಯರು ಮಾಡಿದ ಆಸ್ತಿ ಬಿಟ್ಟು ಕೊಡೋಕಾಗತ್ತೆ ಅಂತಾ ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ದಾವಣಗೆರೆ ಪಿ.ಜೆ. ಬಡಾವಣೆಗೆ ಮಂಗಳವಾರ ಭೇಟಿ ನೀಡಿದ್ದ ವಿಪಕ್ಷ ನಾಯಕ ಆರ್.ಅಶೋಕ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಬಳಿ ಹೇಳುತ್ತಿರುವುದು.

-12ಕೆಡಿವಿಜಿ4, 5:

ದಾವಣಗೆರೆ ಪಿ.ಜೆ. ಬಡಾವಣೆಯ 4.13 ಎಕರೆ ವಕ್ಫ್ ಆಸ್ತಿ ಅಂತಾ ದಾಖಲಾದ ಪ್ರದೇಶಕ್ಕೆ ಮಂಗಳವಾರ ವಿಪಕ್ಷ ನಾಯಕ ಆರ್.ಅಶೋಕ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಇತರರು ಭೇಟಿ ನೀಡಿ, ಸ್ಥಳೀಯರ ಅಳಲು, ಅಹವಾಲು ಆಲಿಸಿದರು.

Share this article