ವೈಭವದ ಬೆಂಗಳೂರು ಕರಗ ಸಂಪನ್ನ

KannadaprabhaNewsNetwork |  
Published : Apr 03, 2026, 03:30 AM IST
karaga

ಸಾರಾಂಶ

ಸಿಲಿಕಾನ್ ಸಿಟಿಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾದ ಬೆಂಗಳೂರು ಕರಗ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿ ಸಂಪನ್ನಗೊಂಡಿತು. ಭಕ್ತಿ ಮತ್ತು ಪರಂಪರೆಯ 15 ದಿನಗಳ ಆಚರಣೆಯ ಪ್ರಮುಖ ಘಟ್ಟ ಬುಧವಾರ ತಡರಾತ್ರಿ ಜರುಗಿತು.

  ಬೆಂಗಳೂರು : ಸಿಲಿಕಾನ್ ಸಿಟಿಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾದ ಬೆಂಗಳೂರು ಕರಗ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿ ಸಂಪನ್ನಗೊಂಡಿತು.

ಭಕ್ತಿ ಮತ್ತು ಪರಂಪರೆಯ 15 ದಿನಗಳ ಆಚರಣೆಯ ಪ್ರಮುಖ ಘಟ್ಟ ಬುಧವಾರ ತಡರಾತ್ರಿ ಜರುಗಿತು. ಮಧ್ಯರಾತ್ರಿ ನಂತರ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇಗುಲದಿಂದ ಹೊರಟ ದ್ರೌಪದಿದೇವಿ ಸ್ವರೂಪಿ ಕರಗ ನಗರದ ಕೇಂದ್ರ ಭಾಗದಲ್ಲಿ ಸುಮಾರು 23 ಕಿ.ಮೀ ಸಂಚರಿಸಿತು.

ಕರಗ ಸಾಗಿದ ಮಾರ್ಗದಲ್ಲಿ ಭಕ್ತರು, ರಸ್ತೆ ಬದಿಗಳಲ್ಲಿ, ಕಟ್ಟಡಗಳ ಮೇಲೆ ನಿಂತು ದರ್ಶನ ಪಡೆದರು. ನಗರದ ಒಟ್ಟು 26 ಪೇಟೆಗಳಲ್ಲಿ ಸಂಚರಿಸಿ, ಅಣ್ಣಮ್ಮ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಭಕ್ತರಿಗೆ ದರ್ಶನ ನೀಡಿ ಅಂತಿಮವಾಗಿ ದೇವಾಲಯದ ಶಕ್ತಿ ಪೀಠದಲ್ಲಿ ದ್ರೌಪದಮ್ಮನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ಉತ್ಸವ ಸಂಪನ್ನಗೊಂಡಿತು.

ನಡುರಾತ್ರಿಯ ಭವ್ಯ ಮೆರವಣಿಗೆ: ಪ್ರತಿ ವರ್ಷದಂತೆ ದೇಗುಲದಲ್ಲಿ ಪೂಜೆಯ ಬಳಿಕ ಅರ್ಚಕ ಜ್ಞಾನೇಂದ್ರ ಅವರು ಗರ್ಭಗುಡಿಯ ಪ್ರದಕ್ಷಿಣೆ ಮುಗಿಸಿ, ಶಿರದ ಮೇಲೆ ಕರಗ ಹೊತ್ತು ದೇವಾಲಯದಿಂದ ಹೊರಬಂದರು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರ ‘ಗೋವಿಂದ, ಗೋವಿಂದ’ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಮೆರವಣಿಗೆಯ ಹಾದಿಯುದ್ದಕ್ಕೂ ವಿಘ್ನೇಶ್ವರ ಮತ್ತು ಗ್ರಾಮದೇವತೆ ಮುತ್ಯಾಲಮ್ಮ ದೇವಿಯ ಆಶೀರ್ವಾದ ಪಡೆದು ಕರಗವು ಸಾಗಿತು. ಮಾರ್ಗದ ಉದ್ದಕ್ಕೂ ವಿವಿಧ ದೇವಾಲಯಗಳು, ದರ್ಗಾ ಮೂಲಕ ಸಾಗಿತು.

ಮಸ್ತಾನ್ ಸಾಬ್ ದರ್ಗಾ ಭೇಟಿ: 

ಕರಗ ಮಹೋತ್ಸವದ ಪ್ರಮುಖ ಆಕರ್ಷಣೆ ಎಂದರೆ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮಸ್ತಾನ್ ಸಾಬ್ ದರ್ಗಾ ಭೇಟಿ ನೀಡಿತು.

ಈ ವೇಳೆ ಮಾತನಾಡಿದ ದರ್ಗಾದ ಮುಜಾವರ್ ಪರ್ವೀಜ್ ಅಹ್ಮದ್, ಇದು ತಲತಲಾಂತರಗಳಿಂದ ನಡೆದು ಬಂದ ಸಂಪ್ರದಾಯ. ಧರ್ಮರಾಯಸ್ವಾಮಿ ಮತ್ತು ಮಸ್ತಾನ್ ಸಾಬ್ ಅವರ ನಡುವಿನ ಪ್ರೀತಿ ಶಾಶ್ವತವಾಗಿರುತ್ತದೆ. ಕರಗವು ಇಲ್ಲಿ ಮೂರು ಸುತ್ತು ಹಾಕಿ ಸಂಪ್ರದಾಯದಂತೆ ಮಂತ್ರಘೋಷಗಳೊಂದಿಗೆ ಆಚರಣೆ ನಡೆಸುತ್ತದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನಮಗೆ ಅತ್ಯಂತ ಸಂತೋಷದ ವಿಷಯ ಎಂದರು.

ವೀರಕುಮಾರರ ಅಲಗು ಸೇವೆ: 

ಧರ್ಮರಾಯಸ್ವಾಮಿ ದೇವಸ್ಥಾನದ ಮುಂದೆ ವೀರಕುಮಾರರು ನಡೆಸಿದ ಅಲಗು ಸೇವೆ ಮೆರವಣಿಗೆಗೆ ರೌದ್ರಕಳೆಯನ್ನು ನೀಡಿತ್ತು. ಕೈಯಲ್ಲಿ ಕತ್ತಿ ಹಿಡಿದು ‘ದಿಕ್-ದೀ’ ಎನ್ನುತ್ತಾ ಎದೆಯ ಮೇಲೆ ಹೊಡೆದುಕೊಳ್ಳುವ ದೃಶ್ಯ ಭಕ್ತರಲ್ಲಿ ರೋಮಾಂಚನ ಮೂಡಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೀಟ್ ರದ್ದಾಗಿದ್ದಕ್ಕೆ ಜೀವ ಕಳಕೊಂಡ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್ !
ಹೆಣ ಹುಡುಕಿಕೊಂಡು ಹೋದ ಖಾಕಿಗೆ ಸಿಕ್ಕಿದ್ದು ಸತ್ತ ಹೆಗ್ಗಣ!