ಕನ್ನಡಪ್ರಭ ವಾರ್ತೆ ಮಡಿಕೇರಿ
ಶ್ರೀಮಂಗಲ ಎರ್ಮಾಡು ಆರ್ಚ್ ಸಮೀಪದಲ್ಲಿರುವ ಕೊಟ್ರಂಗಡ ಸುಬ್ರಮಣಿ ಎಂಬವರ ಕಾಫಿ ತೋಟದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಬೀಡು ಬಿಟ್ಟಿದ್ದ ಕಾಡಾನೆಗಳ ದಂಡು ಸಾಕಷ್ಟು ದಾಂದಲೆ ನಡೆಸಿದ್ದವು. ಬಳಿಕ ರಾತ್ರಿ ವೇಳೆ ಪಕ್ಕದ ಬಾಚೆಟಿರ ದೀಪಕ್ ಎಂಬುವವರ ತೋಟಕ್ಕೆ ನುಸುಳಿವೆ. ಬುಧವಾರ ಬೆಳಗ್ಗೆ ನೋಡುವಾಗ ಕಾಡಾನೆಗಳು ಕೆರೆಯ ನೀರಿನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿವೆ. ಇವುಗಳ ಪೈಕಿ ನಾಲ್ಕೈದು ಕಾಡಾನೆಗಳು ಹೇಗೋ ಕೆರೆಯಿಂದ ಮೇಲೆಬಂದಿವೆ. ಇನ್ನುಳಿದವು ಹೊರಬರಲು ಪರದಾಡುತ್ತಿದ್ದವು.
ಅರಣ್ಯ ಇಲಾಖೆಯ ವತಿಯಿಂದ ಕೆರೆಯ ಒಂದು ಬದಿಯ ದಂಡೆಯನ್ನು ಜೆಡಿಬಿ ಮೂಲಕ ತೆಗೆದು ಕಾಡಾನೆಗಳು ತೆರಳಲು ಅವಕಾಶ ಮಾಡಿಕೊಡಲಾಯಿತು. ಈ ಮೂಲಕ ಕಾಫಿ ತೋಟದ ಕೆರೆಯಲ್ಲಿ ಸಿಲುಕಿದ್ದ ನಾಲ್ಕು ಕಾಡಾನೆಗಳು ಸುರಕ್ಷಿತವಾಗಿ ದಡ ಸೇರಿವೆ.ಹೆದ್ದಾರಿಯಲ್ಲಿ ಮುಂಜಾನೆ ಕಾಡಾನೆ ವಾಕಿಂಗ್!:
ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಧಾವಿಸಿದ ಒಂಟಿ ಸಲಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ಆತಂಕಕ್ಕೆ ಒಳಪಡಿಸಿತು. ಜನರ ಮುನ್ನೆಚ್ಚರಿಕೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.ಸ್ಥಳೀಯರ ಸಹಾಯದಿಂದ ಆನೆ ರಸ್ತೆಯಿಂದ ಕಾಫಿ ತೋಟದ ಒಳಗೆ ತೆರಳಿತು.