ಗದಗ: ಗೇಯಗುಣ ಕಾವ್ಯದ ಸೊಗಸು ಹೆಚ್ಚಿಸಿದರೂ ಅದರಿಂದ ಕಾವ್ಯಕ್ಕೆ ವಾಚ್ಯದೋಷ ತಪ್ಪಬಹುದೆಂಬ ವಿಮರ್ಶಕರ ನುಡಿಯನ್ನು ಸುಳ್ಳು ಮಾಡಿ ಗೇಯಗುಣವನ್ನೇ ತಮ್ಮ ಕಾವ್ಯದ ಮುಖ್ಯ ಜೀವಾಳವಾಗಿಸಿ ಕಾವ್ಯಲೋಕದ ಮಾಂತ್ರಿಕ ಎಂದು ಪ್ರಸಿದ್ಧಿ ಪಡೆದ ವರಕವಿ ದ.ರಾ. ಬೇಂದ್ರೆ ಕನ್ನಡ ನಾಡು ಕಂಡ ಶ್ರೇಷ್ಠ ಕವಿ ಎಂದು ಸಾಹಿತಿ ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಹೇಳಿದರು.
ಅವರು ನಗರದಲ್ಲಿ ಕಬ್ಬಿಗರ ಕೂಟ ಏರ್ಪಡಿಸಿದ್ದ ದ.ರಾ. ಬೇಂದ್ರೆ ಅವರ ೧೨೮ನೇ ಜಯಂತಿ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಬೇಂದ್ರೆ ಸಾಹಿತ್ಯ ಕುರಿತು ಮಾತನಾಡಿ, ಕಾವ್ಯ ವಿಮರ್ಶೆ ಹಾಗೂ ನಾಟಕ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಾಧನೆ ಗೈದು ಜ್ಞಾನಪೀಠ ಪ್ರಶಸ್ತಿ ಪಡೆದ ಬೇಂದ್ರೆಯವರು ಮೂಲತಃ ಕವಿಯೆಂದೆ ನಾಡಿನಾದ್ಯಂತ ಪ್ರಸಿದ್ಧಿ ಪಡೆದರು ಎಂದರು.ಅವರ ಕವಿತೆಗಳು ಹಾಡಲಿಕ್ಕಾಗಿಯೇ ಬರೆದರು ನಾದ ಮಾಧುರ್ಯದೊಂದಿಗೆ ಅರ್ಥ ಶ್ರೀಮಂತಿಕೆ ಹಾಗೂ ವೈಚಾರಿಕತೆಗಳಿಂದ ಅವು ಜನಮನವನ್ನು ಸೂರೆಗೊಂಡಿವೆ. ಪ್ರೀತಿ ಪ್ರಣಯ, ವಿರಹ, ನೋವು -ನಲಿವು, ಸುಖ-ದುಃಖ, ಕಷ್ಟ ಕಾರ್ಪಣ್ಯಗಳ ಸರಮಾಲೆಯನ್ನೇ ಕಾವ್ಯದುದ್ದಕ್ಕೂ ಜೀವಂತವಾಗಿ ಬಿಂಬಿಸಿದ ಬೇಂದ್ರೆಯವರು ಬದುಕನ್ನೆ ಹಾಡಾಗಿಸಿ ಹಾಡಿ ನಲಿದ ಭಾವಜೀವಿಯೆಂದು ತಿಳಿಸಿದರು.
ಕಬ್ಬಿಗರ ಕೂಟದ ಅಧ್ಯಕ್ಷ ನ್ಯಾ.ನೋಟರಿ ಮನೋಹರ ಮೇರವಾಡೆ ಮಾತನಾಡಿ, ನಲ್ವತ್ತೈದು ವರ್ಷಗಳ ಹಿಂದೆ ವರಕವಿ ಬೇಂದ್ರೆಯವರನ್ನು ಗದುಗಿಗೆ ಕರೆತಂದು ಅವರಿಂದ ಉಪನ್ಯಾಸ, ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಸಿದ ಸಂದರ್ಭವನ್ನು ವಿವರಿಸಿ ಬೇಂದ್ರೆಯವರು ಕಬ್ಬಿಗರ ಕೂಟದ ಎರಡು ಕೃತಿಗಳಿಗೆ ಅಭಿಪ್ರಾಯ ಬರೆದಿರುವದನ್ನು ಹೆಮ್ಮೆಯಿಂದ ವಿವರಿಸಿದರು.ಪ್ರೊ. ಜಯಶ್ರೀ ಅಂಗಡಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಸ್.ಎಸ್.ಮಲ್ಲಾಪೂರ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಬಿ.ಎಸ್.ಹಿಂಡಿ, ಪ್ರ.ತೋ. ನಾರಾಯಣಪೂರ, ಎಂ.ಎಫ್.ಡೋಣಿ, ರತ್ನಕ್ಕ ಪಾಟೀಲ, ಜಿ.ಎಸ್.ಹೊಂಬಳ ವಕೀಲರು ಹಾಗೂ ಯು.ಎಸ್.ಹೊಂಬಳ ಪಾಲ್ಗೊಂಡಿದ್ದರು.ಆನಂತರ ನಡೆದ ಕವಿಗೋಷ್ಠಿಯಲ್ಲಿ ವಿ.ಎಂ.ಪವಾಡಿಗೌಡರ, ಅನಸೂಯಾ ಮಿಟ್ಟಿ, ಮಂಜುಳಾ ವೆಂಕಟೇಶಯ್ಯ, ಬಿ.ಎಸ್. ಹಿಂಡಿ, ಆರ್.ಕೆ.ಹುಬ್ಬಳ್ಳಿ, ಜುಲೇಕಾಬೇಗಂ ಸಂಶಿ, ಬಸವರಾಜ ವಾರಿ, ಆರ್.ಡಿ.ನಾಡಿಗೇರ, ಜಗನ್ನಾಥ ಟಿಕಂದಾರ, ನಜೀರ ಸಂಶಿ ಮುಂತಾದವರು ಕವನಗಳನ್ನು ಸಾದರ ಪಡಿಸಿದರು. ಜುಲೇಕಾ ಬೇಗಂ ಸಂಶಿ ಸ್ವಾಗತಗೀತೆ ಹಾಡಿದರು. ಮಂಜುಳಾ ವೆಂಕಟೇಶಯ್ಯ ಸ್ವಾಗತಿಸಿದರು. ನಜೀರ ಸಂಶಿ ವಂದಿಸಿದರು. ಅನಸೂಯಾ ಮಿಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.