ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ಪೇಟೆಯಲ್ಲಿ ಚಿತ್ರವಿಚಿತ್ರ ಉಡುಪುಗಳನ್ನು ಧರಿಸಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥೆ ಲಲಿತಾ (೫೦) ಎಂಬಾಕೆಯನ್ನು ಆಕೆಯ ಆಕ್ರಮಣಕಾರಿ ಪ್ರತಿರೋಧದ ನಡುವೆಯೇ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಯಿತು. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ವಹಿಸಿದ ಮಾನವೀಯ ಕಾಳಜಿಯಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯಿತು. ಮಹಿಳಾ ಪೊಲೀಸರ ಸಹಕಾರದೊಂದಿಗೆ ಆಕೆಯನ್ನು ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದಾಗ ತನ್ನಲ್ಲಿ ಇಟ್ಟುಕೊಂಡಿದ್ದ ಚಾಕುವನ್ನು ಬಳಸಿ ಪೊಲೀಸರಿಗೆ ತಿವಿಯಲು ಮುಂದಾದಾಗ ಮಹಿಳಾ ಸಿಬ್ಬಂದಿ ಯಶೋದಾ ಅವರ ಕೈಗೆ ಗಾಯವಾಯಿತು. ಇನ್ನೋರ್ವ ಮಹಿಳಾ ಪೊಲೀಸರ ಕುತ್ತಿಗೆಗೆ ಇರಿಯಲು ಯತ್ನಿಸಿದ್ದು, ಕೂದಲೆಳೆ ಅಂತರದಲ್ಲಿ ಪಾರಾದರು. ಈ ಮಧ್ಯೆ ಆಕೆಯನ್ನು ಹಿಡಿಯಲು ಯತ್ನಿಸಿದ ಆಸ್ಪತ್ರೆ ಸಿಬ್ಬಂದಿಗೆ ಕಚ್ಚಿ ಗಾಯಗೊಳಿಸಿದ ಲಲಿತಾಳನ್ನು ಬಳಿಕ ಬಲವಂತದಿಂದ ಕೈ ಕಾಲು ಕಟ್ಟಿ ಪ್ರಜ್ಞಾಶೂನ್ಯತೆಗೆ ಒಳಪಡಿಸಿ ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ೧೦೮ ಅಂಬುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು.ಪಂಚಾಯಿತಿ ಕಚೇರಿಗೆ ನುಗ್ಗಿದ್ದಳು: ಕೈಗೆ ಸಿಕ್ಕಿದ ದಾಖಲೆಗಳನ್ನು ಮನಸೋಯಿಚ್ಛೆ ಹಿಡಿದುಕೊಂಡೋಗಿ ಎಲ್ಲೆಲ್ಲೋ ಎಸೆಯುವ ಮೂಲಕ ಸರ್ಕಾರಿ ಕಚೇರಿ ಸಿಬ್ಬಂದಿ ಪಾಲಿಗೆ ಕಂಟಕಳಾಗಿದ್ದ ಲಲಿತಾ ಹತ್ತು ದಿನಗಳ ಹಿಂದೆ ಪಂಚಾಯಿತಿ ಕಚೇರಿಗೆ ನುಗ್ಗಿ ವಸ್ತುಗಳನೆಲ್ಲಾ ಹಾಳುಗೆಡವಿ ದಾಂದಲೆ ನಡೆಸಿದಾಗ ಪಿಡಿಒ ಆಕೆಯತ್ತ ಬೆಲ್ಟ್ ಬೀಸಿ ಬೆದರಿಸಿ ಹೊರಗಟ್ಟಿದ್ದರು. ಅಲ್ಲಿಂದ ಆಕ ಸಮೀಪದಲ್ಲೇ ಇದ್ದ ಪೊಲೀಸ್ ಠಾಣೆಗೆ ಧಾವಿಸಿದ್ದಳು. ಆಕೆಯ ಆಕ್ರಂದನವನ್ನು ಕಂಡ ಕೆಲ ಮಂದಿ ಮಾನಸಿಕ ಅಸ್ವಸ್ಥೆ ಮೇಲೆ ಪಿಡಿಒ ಹಲ್ಲೆ ನಡೆಸಿದ್ದಾರೆಂದು ಪುಕಾರು ಎಬ್ಬಿಸಿ ಪಿಡಿಒ ವಿರುದ್ಧವೇ ದೂರು ಸಲ್ಲಿಸಬೇಕೆಂಬ ಒತ್ತಡವೂ ಬಂದಿತ್ತು. ಈ ಮಧ್ಯೆ ಆಕೆಯ ಮನೋರೋಗವನ್ನು ಗುಣಮುಖಗೊಳಿಸುವ ನಿಟ್ಟಿನಲ್ಲಿ ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳನ್ನು ಸಂಪರ್ಕಿಸಿ ಶುಕ್ರವಾರದಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವ್ಯವಸ್ಥೆ ಕಲ್ಪಿಸಿದರು. ಈ ವೇಳೆ ಆಕೆಯೊಂದಿಗೆ ಬೇರಾವ ಇಲಾಖೆಯ ಮಂದಿಯೂ ಆಸ್ಪತ್ರೆಗೆ ಹೋಗಲು ಮುಂದಾಗದೇ ಇದ್ದಾಗ ತಾವೇ ಆಕೆಯೊಂದಿಗೆ ಆಂಬುಲೆನ್ಸ್‌ನಲ್ಲಿ ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾಲಕ್ಷ್ಮೀ ಪ್ರಭು ಅವರ ಈ ಮಾನವೀಯ ಸ್ಪಂದನೆ ಸಾರ್ವಜನಿಕ ಶ್ಲಾಘನೆಗೆ ಒಳಗಾಗಿದೆ.