ನಾಲೆ ಬಳಿ ಕಾಮಗಾರಿ ಅವೈಜ್ಞಾನಿಕ: ಶಿವಶಂಕರ್

KannadaprabhaNewsNetwork |  
Published : Jul 4, 2025 11:46 PM IST
04 ಎಚ್‍ಆರ್‍ಆರ್ 01ಹರಿಹರದಲ್ಲಿ ಭದ್ರಾ ಬಲದಂಡೆ ನಾಲೆ ಕಾಮಗಾರಿ ವಿರೋಧಿಸಿ ಮಾಜಿ ಶಾಸಕ ಶಿವಶಂಕರ್ ತಹಸೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು. | Kannada Prabha

ಸಾರಾಂಶ

ನೆರೆಯ ಜಿಲ್ಲೆಗಳಿಗೆ ಸರ್ಕಾರ ಕುಡಿಯುವ ನೀರು ಪೂರೈಸಲು ಭದ್ರಾ ಬಲದಂಡೆ ನಾಲೆ ತಳಭಾಗದಲ್ಲಿ ಬೃಹತ್ ಪೈಪ್‍ಗಳನ್ನು ಅಳವಡಿಸಲು ಕಾಮಗಾರಿ ನಡೆಸಿರುವುದು ಅವೈಜ್ಞಾನಿಕ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ ನೆರೆಯ ಜಿಲ್ಲೆಗಳಿಗೆ ಸರ್ಕಾರ ಕುಡಿಯುವ ನೀರು ಪೂರೈಸಲು ಭದ್ರಾ ಬಲದಂಡೆ ನಾಲೆ ತಳಭಾಗದಲ್ಲಿ ಬೃಹತ್ ಪೈಪ್‍ಗಳನ್ನು ಅಳವಡಿಸಲು ಕಾಮಗಾರಿ ನಡೆಸಿರುವುದು ಅವೈಜ್ಞಾನಿಕ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಕಿಡಿಕಾರಿದರು.

ಭದ್ರಾ ಡ್ಯಾಂ ಬಲದಂಡೆ ನಾಲೆ ಬಳಿ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಕರ್ನಾಟಕ ಪ್ರದೇಶ ಜನತಾದಳ ಹಾಗೂ ರೈತ ಸಂಘಗಳ ಕಾರ್ಯಕರ್ತರು ಶುಕ್ರವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಅವರು ಮಾತನಾಡಿದರು.

ಭದ್ರಾ ನಾಲೆಯಿಂದ ಜಿಲ್ಲೆಯ ವಿವಿಧ ತಾಲೂಕು ಸೇರಿದಂತೆ ಹರಪನಹಳ್ಳಿಯ ರೈತರ ಜಮೀನುಗಳಿಗೆ ನೀರು ಪೂರೈಸಲು ಪ್ರಾರಂಭ ಆದಾಗಿನಿಂದ ಇದುವರೆಗೆ ಅಚ್ಚುಕಟ್ಟಿನ ಕೊನೆಯ ಹರಿಹರ ತಾಲೂಕಿನ ರೈತರಿಗೆ ಪೂರ್ಣ ಪ್ರಮಾಣದ ನೀರು ಸಿಗದೇ ಬೆಳೆ ನಷ್ಟ ಉಂಟಾಗುತ್ತಿದೆ. ಇಂಥ ಸಂದರ್ಭದಲ್ಲಿ ನಾಲೆ ಸೀಳಿ ಕಾಮಗಾರಿ ನಡೆಸಿ, ಬೇರೆ ಜಿಲ್ಲೆಗಳಿಗೆ ನೀರು ಪೂರೈಸಿದಲ್ಲಿ ಜಿಲ್ಲೆಯ ಅನೇಕ ರೈತರ ಜಮೀನುಗಳಿಗೆ ನೀರು ಸಿಗದೇ ಬಯಲುಸೀಮೆ ಆಗುವುದು. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಸರ್ಕಾರ ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಜಾಕ್‍ವೆಲ್ ನಿರ್ಮಿಸಿ ಪಂಪ್ ಮೂಲಕ ಕುಡಿಯುವ ನೀರನ್ನು ಇತರೆ ಜಿಲ್ಲೆಗಳಿಗೆ ಪೂರೈಸಲಿ. ಅದನ್ನು ಬಿಟ್ಟು, ನಾಲೆಯನ್ನು ಸೀಳಿ ರೈತರ ಜಮೀನುಗಳಿಗೆ ನೀರು ಸಿಗದಂತೆ ಮಾಡ ಹೊರಟಲ್ಲಿ ನಿರಂತರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗಾಂಧಿ ವೃತ್ತಕ್ಕೆ ಆಗಮಿಸಿದ ತಹಸೀಲ್ದಾರ್ ಗುರು ಬಸವರಾಜ್ ಮನವಿ ಸ್ವೀಕರಿಸಿದರು. ಇದಕ್ಕೂ ಮೊದಲು ಫಕ್ಕೀರ ಸ್ವಾಮಿ ಮಠದಿಂದ ಹೊರಟ ಮೆರವಣಿಗೆ ಶಿವಮೊಗ್ಗ ರಸ್ತೆ, ರಾಣಿ ಕಿತ್ತೂರು ಚನ್ನಮ್ಮ ವೃತ್ತ, ಮುಖ್ಯ ರಸ್ತೆ ಮೂಲಕ ಮಹತ್ಮಾಗಾಂಧಿ ವೃತ್ತಕ್ಕೆ ಬಂದು ತಲುಪಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ನಗರಸಭಾ ಸದಸ್ಯರಾದ ದುರುಗೋಜಿ ಮೋಹನ್, ಪಿ.ಎನ್. ವಿರೂಪಾಕ್ಷಿ, ಜಿ. ನಂಜಣ್ಣ, ನೆಲ್ಲಿ ಬಸಣ್ಣ, ಅಂಗಡಿ ಬಸಟೆಪ್ಪ, ಕೆ.ಬಿ. ರೇವಣಸಿದ್ದಪ್ಪ, ಪಿ. ಶಿವಮೂರ್ತಿ ಎಸ್.ಎಂ. ಅನಿಲ್, ಬಿ.ಎಂ. ಮಲ್ಲೇಶ್, ಬಿ. ಬಸವರಾಜ, ಎಂ.ಎಸ್. ಕಾಳಪ್ಪ, ಶಿಲ್ಪಾಚಾರಿ, ಮಹೇಶ್ ಮಲ್ಕಪ್ಪನವರ, ಪಿ. ಹನುಮಂತಪ್ಪ, ಬಿ.ಎಸ್. ರಂಗಪ್ಪ, ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೆ.ವಿ. ರುದ್ರಮುನಿ. ತಾಲೂಕು ಉಪಾಧ್ಯಕ್ಷ ನಂದೀಶ, ಕೆ. ಶೇಖರಪ್ಪ, ಶಂಬಣ್ಣ, ಎನ್.ಎಂ. ಚಂದ್ರಶೇಖರ್, ಎಂ. ಸಿದ್ದಪ್ಪ, ಗಂಗಣ್ಣ, ಧರ್ಮರಾಜ್, ಎ.ಬಿ. ಯಶವಂತ ಹಾಗೂ ಇತರರು ಭಾಗವಹಿಸಿದ್ದರು.

- - -

-04ಎಚ್‍ಆರ್‍ಆರ್01:

ಭದ್ರಾ ಡ್ಯಾಂ ಬಳಿ ಬಲದಂಡೆ ನಾಲೆ ಕಾಮಗಾರಿ ವಿರೋಧಿಸಿ ಹರಿಹರದಲ್ಲಿ ಮಾಜಿ ಶಾಸಕ ಶಿವಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

PREV