ವಚನದರ್ಶನದಿಂದ ಬಸವತತ್ವದ ಹಾದಿ ತಪ್ಪಿಸುವ ಕೆಲಸ

KannadaprabhaNewsNetwork |  
Published : Apr 20, 2025, 01:48 AM IST
ಉದ್ಘಾಟನೆ | Kannada Prabha

ಸಾರಾಂಶ

ವಚನ ಸಾಹಿತ್ಯ, ವಚನ ಸಂಸ್ಕೃತಿ ಹೊಗಳುತ್ತ ಓದುಗರ ದಿಕ್ಕು ತಪ್ಪಿಸುವ ಕಾರ್ಯ ಕುಹಕಿಗಳಿಂದ ನಡೆದಿದೆ. ಶರಣರು ಹೊಸದನ್ನು ಏನೂ ಹೇಳಿಲ್ಲ. ಅವರು ಹೇಳಿದ್ದೆಲ್ಲವೂ ಈ ಮೊದಲೆ ವೇದ, ಉಪನಿಷತ್ತು ಭಗವದ್ಗೀತೆಗಳಲ್ಲಿತ್ತು ಎಂದು ಹೇಳಿ ವೈಚಾರಿಕತೆ, ವೈಜ್ಞಾನಿಕತೆಗಳನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚಿ ವಚನ ದರ್ಶನ ಕೃತಿ ಪ್ರಕಟಿಸಲಾಗಿದೆ.

ಧಾರವಾಡ: ವರ್ಣಭೇದ, ವರ್ಗಭೇದ ಮತ್ತು ಲಿಂಗಭೇದಗಳನ್ನು ನಿರಂತರ ಮುಂದುವರೆಸಿಕೊಂಡು ಹೋಗುವ ದುರ್ವಿಚಾರ ಹೊಂದಿರುವ ಸನಾತನಿಗಳು, ವಚನಗಳ ಆಶಯವನ್ನು ಉದ್ದೇಶ ಪೂರ್ವಕವಾಗಿ ತಿರುಚಿ ವಚನ ದರ್ಶನ ಗ್ರಂಥ ಪ್ರಕಟಿಸುವ ಮೂಲಕ ಬಸವತತ್ವದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಗದಗ ತೋಂಟದಾರ್ಯ ಮಠದ ಡಾ. ಶ್ರೀ ತೋಂಟದ ಸಿದ್ಧರಾಮ ಶ್ರೀಗಳು ಎಚ್ಚರಿಸಿದರು.

ಲಿಂಗಾಯತ ಭವನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಕರ್ನಾಟಕ ಲಿಂಗಾಯತ ಒಳಪಂಗಡಗಳ ಏಕತಾ ಸಮಿತಿ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ "ವಚನ ದರ್ಶನ " ಮಿಥ್ಯ/ಸತ್ಯ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವಚನ ಸಾಹಿತ್ಯ, ವಚನ ಸಂಸ್ಕೃತಿ ಹೊಗಳುತ್ತ ಓದುಗರ ದಿಕ್ಕು ತಪ್ಪಿಸುವ ಕಾರ್ಯ ಕುಹಕಿಗಳಿಂದ ನಡೆದಿದೆ. ಶರಣರು ಹೊಸದನ್ನು ಏನೂ ಹೇಳಿಲ್ಲ. ಅವರು ಹೇಳಿದ್ದೆಲ್ಲವೂ ಈ ಮೊದಲೆ ವೇದ, ಉಪನಿಷತ್ತು ಭಗವದ್ಗೀತೆಗಳಲ್ಲಿತ್ತು ಎಂದು ಹೇಳಿ ವೈಚಾರಿಕತೆ, ವೈಜ್ಞಾನಿಕತೆಗಳನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚಿ ವಚನ ದರ್ಶನ ಕೃತಿ ಪ್ರಕಟಿಸಲಾಗಿದೆ. ಮತ್ತೆ ಜನರನ್ನು ಮೌಢ್ಯಗಳತ್ತ ಸಾಗುವಂತೆ ಮಾಡುವುದು ಇದರ ಉದ್ದೇಶ. ಹೀಗಾಗಿ ವಚನ ದರ್ಶನ ಗ್ರಂಥದಲ್ಲಿ ಏನಿದೆ ಮಿತ್ಯ ಸತ್ಯ ಎನ್ನುವುದನ್ನು ತಿಳಿಸಿಕೊಡಲು ನಮ್ಮ ಗ್ರಂಥ ಹೊರಬಂದಿದೆ ಎಂದರು.

ಮೂರಸಾವಿರಮಠದ ಶ್ರೀ ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ವಚನಗಳು ಪವಿತ್ರವಾದವು ಅದರ ದರ್ಶನ ಮಾಡಬೇಕು ನಿಜ. ಆದರೆ, ವಚನ ದರ್ಶನ ಪುಸ್ತಕದಲ್ಲಿ ಅಪವಿತ್ರವಿದೆ. ಇತ್ತೀಚಿಗೆ ಕೆಲವು ದುಷ್ಟ ವಿಚಾರವಾದಿಗಳು ಹೊರತಂದ ವಚನ ದರ್ಶನ ಪುಸ್ತಕ ಬಿಡುಗಡೆ ಹಿಂದೆ ದುರುದ್ದೇಶವಿದೆ. ಈ ಹಿನ್ನಲೆಯಲ್ಲಿ ಮಠಾಧೀಶರು ಅದನ್ನು ವಿರೋಧಿಸಿದ್ದೇವೆ. ವಚನ ದರ್ಶನ ಪುಸ್ತಕ ಹೊರಬಂದ ಹಿನ್ನಲೆಯಲ್ಲಿ ಎಲ್ಲ ಮಠಾಧೀಶರು, ಬಸವ ಸಂಘಟನೆಗಳು, ಲಿಂಗಾಯತ ಸಮಸ್ತ ಸಮಾಜದವರಿಂದ ವಿರೋಧ ವ್ಯಕ್ತವಾಗಿದೆ. ಆ ಪುಸ್ತಕದಲ್ಲಿನ ಸುಳ್ಳುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲು ವಚನ ದರ್ಶನ ಮಿಥ್ಯ ಸತ್ಯ ಗ್ರಂಥ ಲೋಕಾರ್ಪಣೆಗೊಂಡಿದೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಮಾತನಾಡಿ, ಲಿಂಗಾಯತ ವಿರೋಧಿ ಹಿನ್ನೆಲೆಯುಳ್ಳ ಸ್ವಾಮೀಜಿಯೊಬ್ಬರ ಸಂಪಾದಕತ್ವದಲ್ಲಿ ಸಿದ್ಧವಾಗಿದೆ. ವಿವಾದಾತ್ಮಕ ವಿಕೃತಿಯ ಲೇಖಕರ ವಚನ ದರ್ಶನ ಜನರ ದಿಕ್ಕು ತಪ್ಪಿಸುವ ಯೋಜನೆ. ಈ ಹಿನ್ನಲೆಯಲ್ಲಿ ವಚನ ದರ್ಶನ ಪುಸ್ತಕ ಮುಟ್ಟುಗೋಲು ಹಾಕಬೇಕು. ಮರು ಮುದ್ರಣ ಮಾಡದಂತೆ ಆದೇಶವಾಗಬೇಕು. ಇದನ್ನು ಒತ್ತಾಯಿಸಿ ಮಠಾಧೀಶರು, ಬಸವ ಸಂಘಟನೆಗಳು, ಲಿಂಗಾಯತ ಸಮಾಜದ ವತಿಯಿಂದ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಿದ್ದೇವೆ ಎಂದರು.

ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಅಖಿಲ ಕರ್ನಾಟಕ ಲಿಂಗಾಯತ ಒಳ ಪಂಗಡಗಳ ಏಕತಾ ಸಮಿತಿ ರಾಜ್ಯಾಧ್ಯಕ್ಷ ಜಿ.ವಿ. ಕೊಂಗವಾಡ, ಸಾಹಿತಿಗಳಾದ ಡಾ. ಎನ್.ಜಿ. ಮಹಾದೇವಪ್ಪ, ಡಾ. ಸಿ.ಎಂ. ಕುಂದಗೋಳ, ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರದೀಪಗೌಡ ಪಾಟೀಲ, ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಬಸವಂತ ತೋಟದ, ಶಿವಶರಣ ಕಲಬಶೆಟ್ಟರ, ಸವಿತಾ ನಡಕಟ್ಟಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?