ಕನ್ನಡಪ್ರಭ ವಾರ್ತೆ ಹೊಸಪೇಟೆ
ಕೆಲ ದುಷ್ಟ ಶಕ್ತಿಗಳು ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿವೆ. ನಾವು ಒಂದಾಗದಂತೆ ಕೆಲಸ ಮಾಡುತ್ತಿವೆ. ನಮ್ಮವರೇ ನಮ್ಮನ್ನು ಒಗ್ಗಟ್ಟಾಗಲು ಬಿಡುತ್ತಿಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ಆರೋಪಿಸಿದರು.ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಸಮಾಜದ ಮುಖಂಡರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಒಳಪಂಗಡಗಳನ್ನು ಒಂದಾಗಿಸಲು ವೀರಶೈವ ಲಿಂಗಾಯತ ಮಹಾಸಂಗಮ ಸಭೆಯನ್ನು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಪ್ರಮುಖ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು ಸೇರಿ ಮಾ.16ರಂದು ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸುತ್ತೇವೆ ಎಂದರು.
ನಮ್ಮ ಸಮಾಜವನ್ನು ಒಡೆಯುವುದೇ ಕೆಲವರಿಗೆ ಕೆಲಸವಾಗಿದೆ. ನಮ್ಮವರನ್ನು ಐದು ವರ್ಷಗಳ ಮುಖ್ಯಮಂತ್ರಿಯಾಗಲು ಬಿಡಲಿಲ್ಲ. ಆದರೆ, ಈಗ ನಾವೆಲ್ಲ ಜಾಗೃತರಾಗಿದ್ದೇವೆ. ಒಗ್ಗೂಡಿ ಹೋರಾಡುತ್ತೇವೆ. ಈ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿದ್ದು, ಈ ಸರ್ಕಾರ ಜಾತಿ ಜನಗಣತಿಗೆ ಮನೆ ಬಾಗಿಲಿಗೆ ಹೋಗದೆ 2 ಕೋಟಿ ಇರುವ ಜನಸಂಖ್ಯೆಯನ್ನು ಒಳಪಂಗಡ ಬರೆದು ಕೇವಲ 65 ಲಕ್ಷ ಎಂದು ತೋರಿಸಿದೆ. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ನಮೂದಿಸಬೇಕು. ಸಮಾಜ ದಾವಣಗೆರೆಯಲ್ಲಿ ಸಂಗಮದ ದೊಡ್ಡ ಸಮಾವೇಶ ಮಾಡಲು ತೀರ್ಮಾನಿದ್ದು, ಇಡೀ ರಾಜ್ಯ ಪ್ರವಾಸ ಕೈಗೊಂಡು ಮೇ 15ರೊಳಗೆ ಹಮ್ಮಿಕೊಳ್ಳಲಾಗುವುದು ಎಂದರು.ವಿಜಯೇಂದ್ರ ನಾಯಕತ್ವ:
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಂಕಷ್ಟ ತರುವ ಹುನ್ನಾರ ನಡೆಸಿದ್ದು, ಯಡಿಯೂರಪ್ಪನವರಿಗೆ ತೊಂದರೆ ಕೊಟ್ಟಂತೆ ಮಾಡುತ್ತಿದ್ದಾರೆ. ವಿಜಯೇಂದ್ರ ನಾಯಕತ್ವ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದರು.ಯತ್ನಾಳ ನಮ್ಮ ಸಮುದಾಯದ ನಾಯಕರು. ಅವರ ಮೂಲಕ ಕೆಲವರು ಮಾತಾಡಿಸುತ್ತಿದ್ದಾರೆ. ಮುಂದೆ ಅವರೇ ಬಲಿಪಶುವಾಗುತ್ತಾರೆ. ನಾನೂ ತಪ್ಪು ಮಾಡಿದ್ದೆ. ಆತ್ಮಾವಲೋಕನ ಮಾಡಿಕೊಂಡು ಮುಂದೆ ಹೋಗಬೇಕು. ನಮಗೆ ಸಮಾಜವೇ ಮುಖ್ಯವಾಗಬೇಕು. ಷಡ್ಯಂತ್ರದ ವಿರುದ್ಧ ಹೋರಾಡಬೇಕು. ನನ್ನನ್ನು ಯಡಿಯೂರಪ್ಪ ವಿರುದ್ಧ ಚಾಕು ರೀತಿ ಬಳಸಿಕೊಂಡು ಪಿತೂರಿ ನಡೆಸಿದರು. ನಾನು ವಾಪಾಸ್ ಬಂದೆ. ನನ್ನನ್ನು ಎತ್ತಿಕಟ್ಟಿ ಬಲಿಪಶು ಮಾಡಿದಂತೆ ಯತ್ನಾಳ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ. ಒಂದಾಗಿ ಸಮುದಾಯಕ್ಕಾಗಿ ಹೋರಾಡಬೇಕು. ಯತ್ನಾಳ ತನ್ನ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ವಿಜಯೇಂದ್ರರನ್ನು ಇಳಿಸಲು ಆಗಲ್ಲ ಎಂದರು.
ಬೇಡ ಜಂಗಮ ಸಮುದಾಯದ ಸರ್ಟಿಫಿಕೇಟ್ ತೆಗೆದುಕೊಂಡಿದ್ದರೆ, ನೇಣು ಹಾಕಿಕೊಳ್ಳುತ್ತೇನೆ. ಇದನ್ನು ಈಗಾಗಲೇ ಅಧಿವೇಶನದಲ್ಲಿಯೇ ಹೇಳಿದ್ದೇನೆ. ಮಾ.16ರಂದು ದಾಖಲೆ ಬಿಡುಗಡೆ ಮಾಡುತ್ತೇನೆ. ಹಿಂದೂ ಲಿಂಗಾಯತ ಅಂತ ಬರೆಸಿದ್ದೇನೆ. ಸಮುದಾಯದ ಬಡವರಿಗೆ ಮೀಸಲಾತಿ ಸಿಗಬೇಕು. ನಮ್ಮಂತವರಿಗಲ್ಲ ಎಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಮಲ್ಲಿಕಾರ್ಜುನ ಮಾಡಾಳ, ಚನ್ನಬಸವನಗೌಡ ಪಾಟೀಲ್ ಮತ್ತಿತರರಿದ್ದರು.