೪೧.೬ ಕೋಟಿ ರು. ವೆಚ್ಚದಲ್ಲಿ ಪೋಡಿಗಳ ಅಭಿವೃದ್ಧಿ
ಕತ್ತಲು ತುಂಬಿದ್ದ ಜಿಲ್ಲೆಯ ೩೧ ಹಾಡಿಗಳಿಗೆ ಬೆಳಕು ಬೇಕೆನ್ನುವ ಬಹು ವರ್ಷಗಳ ಬೇಡಿಕೆ ನಿರೀಕ್ಷೆಗೆ ಈಗ ಫಲ ಸಿಕ್ಕಿದೆ. ಜಿಲ್ಲೆಯ ೩೧ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ತರ ಯೋಜನೆಗೆ ಶನಿವಾರ ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಯಳಂದೂರು ತಾಲೂಕಿನ ಪುರಾಣಿ ಪೋಡಿಯಲ್ಲಿ ಗುದ್ದಲಿಪೂಜೆ ನೆರವೇರಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಮಾರಂಭ ಉದ್ಘಾಟಿಸಿದ ಬಳಿಕ ಸಚಿವ ಕೆ.ವೆಂಕಟೇಶ್ ಮಾತನಾಡಿ, ಇಂದು ಸಂತೋಷದ ದಿನ. ಕತ್ತಲಲ್ಲಿದ್ದ ಹಾಡಿಗಳಿಗೆ ಬೆಳಕು ನೀಡುವ ಮಹತ್ವದ ಯೋಜನೆಗೆ ಚಾಲನೆ ನೀಡಿದ ಸಾರ್ಥಕ ಕೆಲಸ ಮಾಡಿದ ತೃಪ್ತಿಯಿದೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳು, ಸಚಿವರು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ವಿಶೇಷವಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ವಿಶೇಷ ಕಾಳಜಿಯಿಂದ ವಿದ್ಯುತ್ ನೀಡುವ ಕೆಲಸಕ್ಕೆ ಚಾಲನೆ ದೊರೆತಿದೆ ಎಂದು ಹೇಳಿದರು.ಒಟ್ಟು ೪೧.೬ ಕೋಟಿ ರು. ವೆಚ್ಚದಲ್ಲಿ ೩೧ ಹಾಡಿಗಳ ೨೪೮೬ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಾರ್ಥಕ ಯೋಜನೆಗೆ ಚಾಲನೆ ನೀಡಿದ್ದೇವೆ. ಹಾಡಿ ಬುಡಕಟ್ಟುಗಳ ಜನತೆಗೆ ಮೂಲಸೌಕರ್ಯ ಒದಗಿಸುವ ಕಾರ್ಯಗಳಿಗೆ ಮುಖ್ಯಮಂತ್ರಿ ಮುಂದಾಗಿದ್ದಾರೆ. ಹಾಡಿ ವ್ಯಾಪ್ತಿಯಲ್ಲಿ ೧೨೮ ಕಿ.ಮೀ.ನಷ್ಟು ರಸ್ತೆಗಳನ್ನು ಅಭಿವೃದ್ದಿಪಡಿಸಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಈಗಿರುವ ರಸ್ತೆಯನ್ನೇ ಅಭಿವೃದ್ದಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಹಾಡಿಗಳಿಗೆ ವಿದ್ಯುತ್ ಒದಗಿಸುವ ಯೋಜನೆಗೆ ಚಾಲನೆ ಸಿಕ್ಕಿರುವ ದಿನ ಸುದಿನವಾಗಿದೆ. ಬಹುದಿನಗಳ ಬೇಡಿಕೆ ಈಡೇರುತ್ತಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಯೋಜನೆ ಅನುಷ್ಠಾನವಾಗಲು ವಿಶೇಷವಾಗಿ ಶ್ರಮಿಸಿದ್ದಾರೆ. ಅಂಡರ್ ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಒದಗಿಸಲಾಗುತ್ತದೆ ಎಂದರು.
ಜಿಲ್ಲೆಯ ಕ್ಯಾತದೇವರಗುಡಿ, ಕನ್ನೇರಕಾಲೋನಿ, ಬೂತಾನಿಪೋಡು, ಮೊಣಕೈ ಪೋಡು, ಬೇಡಗುಳಿ, ಮಾರಿಗುಡಿ ಪೋಡು, ಕಾಡಿಗೆರೆ, ಬಂಡಿಗೆರೆ, ಬಿಸಲಗೆರೆ, ಇಂಡಿಗನತ್ತ, ಮೆಂದಾರೆ, ತುಳಸಿಕೆರೆ, ನೆಲ್ಲಿಕತ್ರಿ, ಕೆರೆದಿಂಬ, ಗೊಂಬೆಗಲ್ಲು, ಅತ್ತಿಖಾನೆ-ಕಡಲಕೊಂಡಿ, ಹೊನ್ನಮೇಟಿ, ಬೆಳ್ಳಾಚಿ, ಕೊಕ್ಕಬಾರೆ, ತೊಕ್ಕೆರೆ, ದೊಡ್ಡಾಣೆ, ಆಲಂಬಾಡಿ, ಆಪಮಕಟ್ಟಿ, ಜಂಬುಪಟ್ಟಿ, ಮಾರಿಕೋಟೆ-ಹೊಗೇನೆಕಲ್, ತೆಕ್ಕಾಣೆ, ಪಡಸಲನತ್ತ, ಮೆದಗಾಣೆ, ಪಾಲಾರ್, ಪುರಾಣಿಪೋಡು, ಕಲ್ಯಾಣಿಪೋಡು ಹಾಡಿಗಳಿಗೆ ಯೋಜನೆ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.