ಶಿರಹಟ್ಟಿ: ಮಳೆ, ಬಿಸಲು, ಚಳಿ ಲೆಕ್ಕಿಸದೇ ಕುಟುಂಬದ ಬಗ್ಗೆ ಚಿಂತಸದೇ ದೇಶ ರಕ್ಷಿಸುವ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಸಿಆರ್‌ಪಿಎಫ್ ಯೋಧ ಮಂಜುನಾಥ ಹೇಳಿದರು.
೧೯೯೧ರಲ್ಲಿ ಸಿಆರ್‌ಪಿಎಫ್‌ನಲ್ಲಿ ಸೇವೆಗೆ ಸೇರಿಕೊಂಡು ಸತತ ೧೨ ವರ್ಷಗಳ ಕಾಲ ನಾಗಾಲ್ಯಾಂಡ್, ಮಣಿಪುರ, ಛತ್ತೀಸಗಡ, ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ೨೦೦೨ರಲ್ಲಿ ಓರಿಸ್ಸಾ ರಾಜ್ಯದ ರಾಯಘಡ ಜಿಲ್ಲೆಯ ಗಥಾಲಪದರ ಗ್ರಾಮದ ಬಳಿ ಶಂಕಿತ ನಕ್ಸಲೀಯರ ನೆಲಬಾಂಬ್ ಸ್ಪೋಟದಿಂದ ವೀರಗತಿ (ವೀರ ಮರಣ) ಹೊಂದಿದ ಪಟ್ಟಣದ ಮಹ್ಮದಶಬ್ಬೀರ ಗೂಡುಸಾಬ್ ಅಂಗಡಿ ಅವರಿಗೆ ಅವರ ನಿವಾಸದಲ್ಲಿ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.ಭಾರತೀಯ ಸೇನೆಗೆ ಸೇರಬೇಕಾದರೆ ಪುಣ್ಯ ಮಾಡಿರಬೇಕು. ಅಂತಹ ಪುಣ್ಯ ವೀರ ಮರಣ ಹೊಂದಿದ ಮಹ್ಮದ ಶಬ್ಬೀರ ಸೇನೆಯಲ್ಲಿ ಸುದೀರ್ಘ ೧೨ ವರ್ಷಗಳ ಕಾಲ ಭಾರತಾಂಭೆ ಸೇವೆಗೈದು ವೀರ ಮರಣ ಹೊಂದಿದ್ದರಿಂದ ಸಿಆರ್‌ಪಿಎಫ್ ಮತ್ತು ಡಿಐಜಿ ಬೆಂಗಳೂರ ಸೂಚನೆಯಂತೆ ಅವರ ಮನೆಗೆ ಬಂದು ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ ಎಂದರು.
ವೀರ ಮರಣ ಹೊಂದಿದ ಮಹ್ಮದಶಬ್ಬೀರ ಸ್ನೇಹಿತ ಅನಿಲ ಮಾನೆ ಭಾವಚಿತ್ರಕ್ಕೆ ಪುಪ್ಷಾರ್ಚನೆ ಮಾಡಿ ಮಾತನಾಡಿ, ಶಿರಹಟ್ಟಿ ಪಟ್ಟಣದಲ್ಲಿ ವೀರಮರಣ ಹೊಂದಿದ ಮಹ್ಮದ ಶಬ್ಬೀರ ಅವರ ಪುತ್ಥಳಿ ಸ್ಥಾಪನೆಗೆ ಪಪಂ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿಗಳ ಗಮನಕ್ಕೆ ತರುವ ಜತೆಗೆ ಲಿಖಿತ ಮನವಿ ನೀಡಿ ಆಗ್ರಹಿಸಲಾಗಿದೆ. ಅದು ೨೨ ವರ್ಷ ಕಳೆದರೂ ಕೆಲಸ ಆಗಿಲ್ಲ. ತುರ್ತಾಗಿ ಪುತ್ಥಳಿ ಸ್ಥಾಪನೆ ಆಗಬೇಕು ಎಂದು ಒತ್ತಾಯಿಸಿದರು.ಪಪಂ ಸದಸ್ಯ ಹೊನ್ನಪ್ಪ ಶಿರಹಟ್ಟಿ ಸ್ನೇಹಿತರಾದ ಪ್ರವೀಣ ಜೈನ್, ಭೂಪಾಲ್ ಆಲೂರ, ಶಿವು ಚಕ್ರಸಾಲಿ, ಮಂಜುನಾಥ ಹೂಗಾರ, ಅಪ್ಪಣ್ಣ ಪಾಟೀಲ, ಫಕ್ಕೀರೇಶ ಕಲ್ಯಾಣಿ, ಖುದಾನ ಲಕ್ಷ್ಮೇಶ್ವರ, ಎ.ಎಚ್. ಖಾಜಿ, ಮಹದೇವಪ್ಪ ಸ್ವಾಮಿ, ಸತಾರ ಅಣ್ಣಿಗೇರಿ, ಫಕ್ಕೀರೇಶ ರಾಮಗೇರಿ, ಪ್ರಕಾಶ ಮೇಟಿ, ರಿಯಾಜ ಢಾಲಾಯತ, ಜಮೀರ ಮನಿಯಾರ ಸೇರಿದಂತೆ ಅನೇಕರು ಶ್ರದ್ಧಾಂಜಲಿ ಸಭೆಯಲ್ಲಿ ಇದ್ದರು.