ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಚೆಲುವ ಚಾಮರಾಜನಗರ ಅಭಿಯಾನದಡಿಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಭರಚುಕ್ಕಿ ಜಲಪಾತೋತ್ಸವ- 2024ಕ್ಕೆ ಅದ್ಧೂರಿ ಚಾಲನೆ ದೊರೆಯಿತು. ವೇದಿಕೆಯಲ್ಲಿ ಡೊಳ್ಳು ಬಾರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಮುಸ್ಸಂಜೆಯಲ್ಲಿ ಕಾನನದ ನಡುವೆ ಹಾಲ್ನೊರೆಯಂತೆ ಭೋರ್ಗರೆದು ಧಮ್ಮಿಕ್ಕುತ್ತಿದ್ದ ಜಲಧಾರೆಗೆ ಅಳವಡಿಸಿದ್ದ ರಂಗುರಂಗಿನ ದೀಪಾಲಂಕಾರಕ್ಕೆ ಪ್ರವಾಸಿಗರ ಸಮ್ಮುಖದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಸ್.ತಂಗಡಗಿ ವಿದ್ಯುತ್ ಸ್ಪರ್ಶಕ್ಕೆ ಚಾಲನೆ ನೀಡಿದ್ದರು. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಎಂ.ಆರ್.ಮಂಜುನಾಥ್, ಉಗ್ರಾಣ ನಿಗಮ ಅಧ್ಯಕ್ಷ, ಕಾಡಾ ಅಧ್ಯಕ್ಷ ಮರಿಸ್ವಾಮಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.ಕನ್ನಡ ನಾಡು, ನುಡಿ, ದೇಶ ಪ್ರೇಮದ ಗೀತೆಗಳ ಇಮ್ಮೇಳದಲ್ಲಿ 101 ಅಡಿಯಿಂದ ಧುಮ್ಮಿಕ್ಕುವ ನೀರಿಗೆ ಸ್ಪರ್ಶಿಸಿದ ದೀಪಾಲಂಕಾರ ಕಾವೇರಿ ವೈಭವಕ್ಕೆ ರಂಗು ತಂದಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು, ಜಾನಪದ ಕಲಾವಿದರು ಶ್ರೀ ಮಂಟೇಸ್ವಾಮಿ, ಶ್ರೀ ಮಲೆಮಹದೇಶ್ವರ, ಶರಣರು ಹಾಗೂ ಸಿನಿಮಾ ಗೀತೆಗಳನ್ನು ಹಾಡಿ ಕಳೆ ತಂದರು. ಸಂಗೀತಪ್ರಿಯರು ಗಾಯಕರಾದ ಕಂಬದ ರಂಗಯ್ಯ, ಅನನ್ಯ ಭಟ್ ಹಾಡಿಗೆ ತಲೆದೂಗಿದರು.