ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ಭಗವಾನ್ ಸಾಯಿಬಾಬಾ ಮಂದಿರವನ್ನು ನಿರ್ಮಿಸಿ ಇಲ್ಲಿಯೇ ಸಾಯಿಬಾಬಾ ಅವರ ದರ್ಶನ ಮಾಡಿಸುತ್ತಿರುವ ವೆಂಕಟಸಾಯಿ ಸೇವಾಟ್ರಸ್ಟ್ ನವರ ಕಾರ್ಯ ಮೆಚ್ಚುವಂತಹದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.ಗುರುವಾರ ನಗರದ ಪಾವಗಡ ರಸ್ತೆಯಲ್ಲಿರುವ ಭಗವಾನ್ ಸಾಯಿಬಾಬಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಗುರುಪೌರ್ಣಿಮೆ ಉತ್ಸವದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿ ಟ್ರಸ್ಟ್‌ನವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಚಳ್ಳಕೆರೆಗೆ ಎಲ್ಲಾ ಕಡೆಯಿಂದಲೂ ಭಕ್ತರು ಆಗಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಯಿಬಾಬಾ ಮಂದಿರಕ್ಕೆ ಬರುವ ಸಂಖ್ಯೆ ಹೆಚ್ಚುತ್ತಿದೆ. ಬದುಕಿನಲ್ಲಿ ನೆಮ್ಮದಿಯನ್ನು ಕಾಣಲು ಗುರುವಿನ ಆಶ್ರಯ ಪಡೆಯಬೇಕು ಎಂದು ಹೇಳಿದರು.ಶಾಸಕ ಟಿ.ರಘುಮೂರ್ತಿ ಮಾತನಾಡಿ, ಬಯಲು ಸೀಮೆಯ ಬೆಂಗಾಡಿನಲ್ಲಿ ವೆಂಕಟಸಾಯಿ ಸೇವಾಟ್ರಸ್ಟ್ ಹಾಗೂ ಸಾಯಿಬಾಬಾ ಭಕ್ತರು ಭವ್ಯವಾದ ಮಂದಿರ ನಿರ್ಮಿಸಿ ಭಗವಾನ್ ಸಾಯಿಬಾಬಾ ಅವರ ಕೃಪೆ ಮತ್ತು ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ವಿವಿಧ ಮಠದ ಸ್ವಾಮೀಜಿಯವರು, ಸಮಾಜದ ಹಿರಿಯರು, ಸಚಿವರು, ಶಾಸಕರು ಸೇರಿದಂತೆ ಎಲ್ಲಾ ವರ್ಗದ ಜನ ಗುರುಪೌರ್ಣಿಮೆ ಉತ್ಸವದಲ್ಲಿ ಭಾಗವಹಿಸುವ ಮೂಲಕ ಸಾಯಿಬಾಬಾರವರ ಆಶೀರ್ವಾದವನ್ನು ಪಡೆದಿದ್ಧಾರೆ. ಈ ಭಾಗದ ಎಲ್ಲಾ ಜನರಿಗೆ ಸುಖ, ಶಾಂತಿನೆಮ್ಮದಿ ನೀಡಲಿ ಎಂದು ಭಗವಾನ್ ಸಾಯಿಬಾವಾರವರನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಚಿತ್ರದುರ್ಗದ ಮಾದಾರ ಚನ್ನಯ್ಯ ಪೀಠದ ಮಾದರಚನ್ನಯ್ಯ ಸ್ವಾಮೀಜಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಸಾಯಿಬಾಬಾ ಅವರ ಕೃಪೆ ಮತ್ತು ಆಶೀರ್ವಾದ ಸದಾ ಭಕ್ತರ ಮೇಲಿರಲಿ ನಿಮ್ಮೆಲ್ಲರ ಭಕ್ತಿ, ಶ್ರದ್ಧೆಯಿಂದ ಸಾಯಿಬಾಬಾರವರು ನಿಮಗೆ ಹೆಚ್ಚಿನ ಶಕ್ತಿ ನೀಡಲಿ, ಬದುಕಿನ ಜಂಜಾಟಗಳಿಗೆ ಸಾಯಿಬಾಬಾರವರ ನಾಮಸ್ಮರಣೆ ಸಹಾಯವಾಗುತ್ತದೆ ಎಂದು ನುಡಿದರು.ಶಾರದಾಶ್ರಮದ ಮಾತಾ ತ್ಯಾಗಮಯಿ ಮಾತನಾಡಿ, ಭಗವಂತನ ಅನುಗ್ರಹ, ಗುರುವಿನ ಆಶೀರ್ವಾದದಿಂದ ನಮ್ಮೆಲ್ಲರ ಬದುಕು ಪಾವನವಾಗುವುದರಲ್ಲಿ ಸಂಶಯವಿಲ್ಲ. ಗುರುಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಒಬ್ಬ ವ್ಯಕ್ತಿ ಸಮಾಜದಲ್ಲಿ ಸನ್ಮಾರ್ಗದಲ್ಲಿ ನಡೆಯಬೇಕಾದರೆ ಗುರುವಿನ ಆಶೀರ್ವಾದ ಮತ್ತು ಅನುಗ್ರಹ ಇರಬೇಕು. ವಿಶೇಷವಾಗಿ ಭಗವಾನ್ ಸಾಯಿಬಾಬಾಮಂದಿರ ಈ ಭಾಗದ ಸಾವಿರಾರು ಸಾಯಿಭಕ್ತರ ಭಕ್ತಿ, ಶ್ರದ್ಧಾ ಕೇಂದ್ರವಾಗಿ ಹೊರಹೊಮ್ಮಿದೆ. ಸಾಯಿಬಾಬಾ ಸನ್ನಿಧಿಯಲ್ಲಿ ಕುಳಿತು ಪ್ರಾರ್ಥಿಸಿದರೆ ನಮ್ಮೆಲ್ಲರ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ನಿಜವಾಗಿದೆ. ನಾವೆಲ್ಲರು ಗುರುವಿನ ಆಶೀರ್ವಾದದಿಂದ ಮುನ್ನಡೆಯೋಣವೆಂದರು.
ವೆಂಕಟಸಾಯಿ ಸೇವಾಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ಮಾತನಾಡಿ, ಭಗವಾನ್ ಸಾಯಿಬಾಬಾ ಮಂದಿರದಲ್ಲಿ 12ನೇ ವರ್ಷದ ಗುರುಪೌರ್ಣಿಮೆಯನ್ನು ಆಚರಿಸಲು ಎಲ್ಲಾ ರೀತಿಯ ಸಹಕಾರವನ್ನು ಸಾಯಿಭಕ್ತರು ನೀಡಿದ್ದಾರೆ. ವಿಶೇಷವಾಗಿ ಸಾಯಿಬಾಬಾಮಂದಿರ ಯಾವುದೇ ಧಾರ್ಮಿಕ ಮತ್ತು ಅಭಿವೃದ್ಧಿಪರ ಚಿಂತನೆಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸದಾಕಾಲ ಸಕರಾತ್ಮಕವಾಗಿ ಸ್ಪಂದಿಸುತ್ತಾ ಬಂದಿದ್ದಾರೆ. ಎಂತಹ ಸಂದರ್ಭದಲ್ಲೂ ಮಂದಿರಕ್ಕೆ ಸಂಬಂಧಪಟ್ಟ ಯಾವುದೇ ವಿಚಾರವನ್ನು ನಿರ್ಲಕ್ಷಿಸದೆ ತುಂಬು ಹೃದಯದಿಂದ ಸಹಕಾರ ನೀಡಿದ್ದಾರೆ ಎಂದು ಶಾಸಕರ ಕಾರ್ಯವೈಖರಿಯನ್ನು ಪ್ರಶಂಸಿಸಿದರು.ವೆಂಕಟಸೇವಾ ಟ್ರಸ್ಟ್ ಉಪಾಧ್ಯಕ್ಷ ಬಿ.ಸಿ.ವೆಂಕಟೇಶ್‌ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಆರ್.ರವಿಕುಮಾರ್, ಕಾರ್ಯದರ್ಶಿ ಬಿ.ಸಿ.ಸತೀಶ್, ಹೂವಿನಜಗದೀಶ್, ಕೆ.ನಾಗೇಶ್, ಬಿ.ವಿ.ಚಿದಾನಂದಮೂರ್ತಿ, ಕೆ.ಎಂ.ಜಗದೀಶ್, ಅರುಣಾಜಗದೀಶ್, ರಾಘವೇಂದ್ರನಾಯಕ, ನಗರಸಭೆ ಅಧ್ಯಕ್ಷೆ ಶಿಲ್ಪಿಮುರುಳಿ, ಉಪಾಧ್ಯಕ್ಷೆ ಕವಿತಾಬೋರಯ್ಯ, ಮುಖಂಡ ಟಿ.ಪ್ರಭುದೇವ್, ಮುರುಳಿ ಮುಂತಾದವರು ಉಪಸ್ಥಿತರಿದ್ದರು.
ಪೋಟೋ೧೦ಸಿಎಲ್‌ಕೆ೧ ಚಳ್ಳಕೆರೆ ಸಾಯಿಬಾಬಾ ಮಂದಿರಕ್ಕೆ ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಭೇಟಿ ನೀಡಿ ದೇವರ ದರ್ಶನ ಪಡೆದರು.