ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.ಫೆಬ್ರವರಿ 8, 9ರಂದು ರಾಜನಹಳ್ಳಿಯಲ್ಲಿ ನಡೆಯುವ ಬೃಹತ್ ಜಾಗ್ರತಾ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳನ್ನು ಆಹ್ವಾನಿಸುವ ಸಲುವಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಈ ಸಲುವಾಗಿ ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ನಗರದ ಬಾಪೂಜಿನಗರದಲ್ಲಿರುವ ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ಕಚೇರಿಗೆ ಶ್ರೀಗಳು ಭೇಟಿ ನೀಡಿದ್ದರು.
ಈ ಸಂದರ್ಭ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಸಂಘದ ಚಟುವಟಿಕೆಗಳು ನೆನೆಗುದಿಗೆ ಬಿದ್ದಿದ್ದು, ಕಳೆದ ಆರು ತಿಂಗಳಿಂದ ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಟಿ. ಬಳೆಗಾರ್ ರವರು ಜಿಲ್ಲಾಧ್ಯಕ್ಷರಾದ ನಂತರ ಅವರ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ ಜನರಿಗೆ ಉತ್ತಮ ಸಂದೇಶ ಸಾರುವ ಪ್ರಯತ್ನ ಮಾಡಿರುವುದು ಸಂತಸವುಂಟು ಮಾಡಿದೆ ಎಂದರು.ಕೆಲ ವರ್ಷಗಳ ಹಿಂದೆ ನಾನು ಇಲ್ಲಿಗೆ ಬಂದಾಗ ಇಲ್ಲಿನ ವಾತಾವರಣ ತುಂಬಾ ಕಲುಷಿತವಾಗಿತ್ತು. ನಾಯಿ ನರಿಗಳು ವಾಸಸುತ್ತಿದ್ದವು. ಇದನ್ನು ಮನಗಂಡು ಜಿಲ್ಲೆಯ ಪ್ರಮುಖರು ಸೇರಿ ಬಳೆಗಾರರಂತಹ ಸಮಾಜಮುಖಿ ಚಿಂತಕರನ್ನು ಅಧ್ಯಕ್ಷರನ್ನಾಗಿ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಿ. ಅವರ ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯಗಲು ನಡೆಯಲಿ. ಸಮಾಜದ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಪಿ.ಜಿಯೊಂದನ್ನು ನಿರ್ಮಿಸುವ ಕನಸು ಹೊತ್ತಿರುವ ಬಳೆಗಾರರವರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇಲ್ಲಿ ನಡೆಯುವ ಎಲ್ಲಾ ಕಾರ್ಯಗಳಿಗೂ ಎಲ್ಲ ರೀತಿಯ ನೆರವು ದೊರಕಿಸುವ ಪ್ರಯತ್ನ ಮಾಡುತ್ತೇನೆ. ಸಹೃದಯಿ ಜನರು ಉತ್ತಮ ಸಹಕಾರ ನೀಡುವ ಮೂಲಕ ಶಿವಮೊಗ್ಗ ಜಿಲ್ಲೆಯ ನಾಯಕ ಸಂಘವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವ ಪ್ರಯತ್ನ ಮಾಡಿ ಎಂದರು.ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಎಚ್. ಟಿ. ಬಳೆಗಾರ್ ಮಾತನಾಡಿ, ಪರಮಪೂಜ್ಯರು ವಾಲ್ಮೀಕಿ ಹಾಸ್ಟೆಲ್ ಹಾಗೂ ಸಂಘದ ಕಟ್ಟಡಕ್ಕೆ ಭೇಟಿ ನೀಡಿರುವುದು ಸಂತಸವನ್ನುಂಟು ಮಾಡಿದೆ. ಈಗಾಗಲೇ ಅನೇಕ ದಾನಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹವಾಗಿದೆ. ಇನ್ನಷ್ಟು ಸಂಗ್ರಹವಾಗಲಿದೆ. ಇಲ್ಲಿ ನಡೆಯುವ ಎಲ್ಲಾ ಕಾರ್ಯಕ್ಕೆ ಶ್ರೀಗಳ ಆಶೀರ್ವಾದ ಜನರ ಸಹಕಾರವಿದ್ದರೆ, ಉತ್ತಮ ಸಂಘಟನೆ ಮಾಡಲು ಪೂರಕ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ಗುರುಪೀಠದ ಟ್ರಸ್ಟಿ ಡಿ.ಬಿ. ಹಳ್ಳಿ ಬಸವರಾಜ್, ಮಹರ್ಷಿ ವಾಲ್ಮೀಕಿ ಸಹಕಾರಿ ಸಂಘದ ಅಧ್ಯಕ್ಷರಾದ ಮಂಜಪ್ಪ ಜಂಬರಗಟ್ಟಿ, ಉಪಾಧ್ಯಕ್ಷರಾದ ಕೆ.ಎಸ್. ಹುಚ್ರಾಯಪ್ಪ ಜಿಲ್ಲಾ ನಾಯಕ ಸಂಘದ ಕಾರ್ಯದರ್ಶಿ ಮೋಹನ್ ಕುಮಾರ್, ಖಜಾಂಚಿ ಗಿರೀಶ್ ಕುಮಾರ್ ಸದಸ್ಯರಾದ ಮೇಘರಾಜ್ ಸಮಾಜದ ಮುಖಂಡರಾದ ಡಾ. ಅಪ್ಪಣ್ಣ ಗಸ್ತಿ, ರಾಮಪ್ಪ ವಿದ್ಯಾನಗರ ಯುವ ಮುಖಂಡರಾದ ಹರೀಶ್ ಕುಮಾರ್ ಮೋಹನ್ ಕುಮಾರ್, ಮಹೇಶ್ ಎಲಿಗಾರ್, ಸತ್ಯನಾರಾಯಣ, ಎಚ್.ಡಿ. ಮಾದೇವಪ್ಪ, ಡಾಕ್ಟರ್ ಹನುಮಂತಪ್ಪ , ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು. ಶ್ರೀಗಳನ್ನು ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಹಾಗೂ ವಾಲ್ಮೀಕಿ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.