ಧಾರವಾಡ: ಭವಿಷ್ಯದಲ್ಲಿ ಕರ್ನಾಟಕ ಮಾತ್ರವಲ್ಲದೇ ವಿಶ್ವವೇ ಶಿಕ್ಷಣಕ್ಕೆ ಧಾರವಾಡದತ್ತ ತಿರುಗಿ ನೋಡುವ ಯೋಜನೆ ಹೊಂದಿದ್ದೇನೆ. ಈ ಬಗ್ಗೆ ನೀತಿ ಆಯೋಗದ ಅಧ್ಯಕ್ಷರ ಜೊತೆಗೂ ಚರ್ಚಿಸಿದ್ದೇನೆ. ಹಾರ್ವರ್ಡ್ ವಿವಿ ಸೇರಿದಂತೆ ಜಗತ್ತಿನ ಅತ್ಯಂತ ಗುಣಮಟ್ಟದ ಶಿಕ್ಷಣ ಒದಗಿಸುವ ವಿಶ್ವವಿದ್ಯಾಲಯಗಳನ್ನು ಧಾರವಾಡದಲ್ಲಿ ಸ್ಥಾಪಿಸುವ ಚಿಂತನೆ ಇದೆ ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಕೈಗಾರಿಕೆ, ಪ್ರವಾಸೋದ್ಯಮ, ಗಣಿಗಾರಿಕೆಗೆ ಧಾರವಾಡದಲ್ಲಿ ಹೆಚ್ಚು ವ್ಯಾಪ್ತಿ ಇಲ್ಲ. ಹೀಗಾಗಿ ಧಾರವಾಡ ಜಿಲ್ಲೆ ಶಿಕ್ಷಣದ ಶಕ್ತಿಯಾಗಿ ಬೆಳೆಸುವ ಉದ್ದೇಶವಿದೆ. ಇದಕ್ಕೆ ಪೂರಕವಾಗಿ ವಿಶೇಷ ಶೈಕ್ಷಣಿಕ ವಲಯ (ಎಸ್‌ಇಝಡ್) ರೂಪಿಸಬೇಕಾಗಿದೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳು ದಕ್ಷಿಣದ ಭಾಗದವರ ಕಣ್ಣಿಗೆ ಗೋಚರಿಸುತ್ತಿಲ್ಲ. ಭವಿಷ್ಯದಲ್ಲಿ ಇದಕ್ಕೆ ಅವಕಾಶ ನೀಡಲ್ಲ. ಉತ್ತರದ ಸಮಸ್ಯೆ ಬಗ್ಗೆ ಧ್ವನಿ ಎತ್ತುವೆ. ಮೂಲಭೂತ ಸೌಕರ್ಯ, ಸಾಮಾಜಿಕ ಸಮಸ್ಯೆ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ, ಉದ್ಯೋಗ ಸೃಷ್ಠಿಗಾಗಿ ಸಮಯ ಮೀಸಲಿಡಬೇಕಾಗಿದೆ ಎಂದರು.ವೃತ್ತಿಯಾದ ರಾಜಕಾರಣ!: ರಾಜಕೀಯದಲ್ಲಿ ಸುಸ್ಥಿರತೆ ಇಲ್ಲ. ಮಾಲ್ಯಾಧಾರಿತ ರಾಜಕಾರಣ ಮಾಯವಾಗಿದೆ. ಮೊದಲು ಆಸ್ತಿ ಮಾರಿ ರಾಜಕೀಯ ಮಾಡಿದರೆ, ಇಂದು ರಾಜಕೀಯಕ್ಕೆ ಬಂದು ಆಸ್ತಿ ಮಾಡುವವರು ಹೆಚ್ಚು. ಇಂದು ರಾಜಕಾರಣ ವೃತ್ತಿಯಾಗಿದೆ. ಸಾಮಾಜಿಕ ಕಾಳಜಿ, ಬದ್ಧತೆ ಬೇಕಾಗಿದೆ. ಅದಕ್ಕಾಗಿ ಕಾರ್ಯಾಂಗ ಹಾಗೂ ನ್ಯಾಯಾಂಗದ ರೀತಿಯಲ್ಲಿ ಶಾಸಕಾಂಗಕ್ಕೂ ಅನೇಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಚಿಂತನೆ, ಚರ್ಚೆ ನಡೆಯಬೇಕಿದೆ. ಕಾರ್ಯಾಂಗ ಮಾಡಬೇಕಾದ ಕೆಲಸ, ಜವಾಬ್ದಾರಿ ಶಾಸಕಾಂಗ ಅಥವಾ ಜನಪ್ರತಿನಿಧಿಗಳು ಏತಕ್ಕೆ ಹೊರಬೇಕು. ಅವರ ಕೆಲಸ ಸರಿಯಾಗಿ ಮಾಡಿದರೆ, ಜನಪ್ರತಿನಿಧಿಗಳ ಬಳಿ ಬರುವ ಪ್ರಸಂಗವೇ ಬರೋದಿಲ್ಲ ಎಂದರು.
ಸ್ಥಳೀಯ ಸಮಸ್ಯೆಗಳ ಪ್ರಶ್ನೆಗೆ ಉತ್ತರಿಸಿದ ಅವರು ಕೆಲವೇ ದಿನಗಳಲ್ಲಿ ಧಾರವಾಡದ ಸಿಬಿಟಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಧಾರವಾಡದಲ್ಲಿ ರಿಂಗ್ ರಸ್ತೆ ನಿರ್ಮಾಣ, ಶೀಘ್ರ ಈಜುಗೊಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸುತ್ತೇನೆ ಎಂದರು.
ಸಂಬಳ ಏರಿಸಲು ಆಯೋಗ ರಚಿಸಿ: ಶಾಸಕರು ತಮ್ಮ ಸಂಬಳವನ್ನು ತಾವೇ ಏರಿಕೆ ಮಾಡಿಕೊಳ್ಳುವುದು ತಪ್ಪು. ಇದಕ್ಕೆ ತಮ್ಮ ವಿರೋಧವಿದೆ. ಹಣಕಾಸು ಆಯೋಗ ರಚಿಸಿ ಕಾಲಕ್ಕೆ ತಕ್ಕಂತೆ ಆಯೋಗವು ಶಾಸಕರ, ಜನಪ್ರತಿನಿಧಿಗಳ ಸಂಬಳ ಹೆಚ್ಚಿಸಬೇಕು ಎಂದು ಅರವಿಂದ ಬೆಲ್ಲದ ತಿಳಿಸಿದರು.