ವ್ಯಕ್ತಿತ್ವ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಪಂಚ

KannadaprabhaNewsNetwork |  
Published : Jan 15, 2025, 12:48 AM IST
ಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ 105ನೇ ಜನ್ಮದಿನಾಚರಣೆಯ | Kannada Prabha

ಸಾರಾಂಶ

ಪಾಪು ನೇರ ನುಡಿಯ ಸ್ವತಂತ್ರ ವಿಚಾರಧಾರೆಯ ವ್ಯಕ್ತಿ. 60ರ ದಶಕದಲ್ಲಿ ಅವರ ಜತೆ ಅವಿನಾಭಾವ ಸಂಬಂಧ ಹೊಂದಿದ್ದೆವು. ಕರ್ನಾಟಕದ ಗಟ್ಟಿ ಧ್ವನಿಯಾದ ಪುಟ್ಟಪ್ಪನವರು ಕನ್ನಡದ ಕಟ್ಟಾಳುಗಳಾಗಿದ್ದರು.

ಧಾರವಾಡ:

ಡಾ. ಪಾಟೀಲ ಪುಟ್ಟಪ್ಪನವರು ಪ್ರಾರಂಭಿಸಿದ ‘ಪ್ರಪಂಚ’ ಪತ್ರಿಕೆ ಓದುಗರ ಜ್ಞಾನ ಹಾಗೂ ವ್ಯಕ್ತಿತ್ವ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶಿವಶಂಕರ ಹಿರೇಮಠ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ 105ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಪು ನೇರ ನುಡಿಯ ಸ್ವತಂತ್ರ ವಿಚಾರಧಾರೆಯ ವ್ಯಕ್ತಿ. 60ರ ದಶಕದಲ್ಲಿ ಅವರ ಜತೆ ಅವಿನಾಭಾವ ಸಂಬಂಧ ಹೊಂದಿದ್ದೆವು. ಕರ್ನಾಟಕದ ಗಟ್ಟಿ ಧ್ವನಿಯಾದ ಪುಟ್ಟಪ್ಪನವರು ಕನ್ನಡದ ಕಟ್ಟಾಳುಗಳಾಗಿದ್ದರು ಎಂದರು.

ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಪಾಪು ಅವರ ಪತ್ರಿಕೆ ಪ್ರಪಂಚದಲ್ಲಿ ಏನಿಲ್ಲಾ ಎನ್ನುವುದಕ್ಕಿಂತ ಎಲ್ಲವನ್ನು ಒಳಗೊಂಡಿತ್ತು. ಅವರೊಬ್ಬ ನೇರ, ನಿಷ್ಠುರ ಕನ್ನಡದ ಅಭಿಮಾನಿ. ಸತ್ಯದ ಪ್ರತಿಪಾದಕರಾದ ಅವರು ಜೀವನದುದ್ದಕ್ಕೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಹೋರಾಡಿದರು. ಕನ್ನಡ ಮಾತನಾಡುವ ಪ್ರದೇಶಗಳು ಕರ್ನಾಟಕವನ್ನು ಬಿಟ್ಟು ಹೋಗಿದ್ದನ್ನು ಕಂಠಪಾಠ ಮಾಡಿದಂತೆ ತಮ್ಮ ಕಳಕಳಿ ವ್ಯಕ್ತಪಡಿಸುತ್ತಿದ್ದರು. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪುಟ್ಟಪ್ಪನವರ ಹೆಸರಿನಿಂದ ಮುಖ್ಯ ಮಾರ್ಗಗಳಿಲ್ಲದಿರುವುದು ವಿಷಾದನೀಯ ಎಂದರು.

ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಪ್ರಪಂಚ ಪತ್ರಿಕೆಯಲ್ಲಿ ಮುದ್ರಣವಾಗುತ್ತಿದ್ದ ಅನುಭವದಲ್ಲಿ ಅಮೃತತ್ವವಿದೆ ಎಂಬ ಅಂಕಣ ಓದುಗರಿಗೆ ಬದುಕಿನ ಪಾಠ ಕಲಿಸಿ, ಅಮೃತ ಸವಿ ನೀಡಿದ ಅಂಕಣವಾಗಿತ್ತು. ಎಲ್ಲರನ್ನೂ ಪ್ರೀತಿಸುವುದು ಅವರ ದೊಡ್ಡಗುಣವಾಗಿತ್ತು ಎಂದು ಸ್ಮರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ವಿ.ಎಸ್. ಮಾಳಿ ಮತ್ತು ಡಾ. ಬಾಳಣ್ಣಾ ಶೀಗೀಹಳ್ಳಿ ಅವರು ಪುಟ್ಟಪ್ಪನವರ ಕುರಿತು ಬರೆದ ಲೇಖನಗಳನ್ನು ವಾಚಿಸಿ, ಕವಿವ ಸಂಘ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪಾಟೀಲ ಪುಟ್ಟಪ್ಪನವರ ಹೆಸರಿನ ಟ್ರಸ್ಟ್ ರಚನೆಗೆ ಒತ್ತಾಯಿಸುತ್ತಿದ್ದರೂ ಸರ್ಕಾರ ಅದಕ್ಕೆ ಸ್ಪಂದಿಸದಿರುವುದು ವಿಷಾದನೀಯ. ನಾಡು,ನುಡಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅಂಥವರ ಹೆಸರಿನಲ್ಲಿ ಟ್ರಸ್ಟ್ ರಚನೆಯಾಗಬೇಕು. ಹಂಪಿ ವಿಶ್ವವಿದ್ಯಾಲಯಕ್ಕೆ ಪಾಟೀಲ ಪುಟ್ಟಪ್ಪ ಕನ್ನಡ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಬೇಕೆಂದು ಸಂಘ ಆಗ್ರಹಿಸುತ್ತದೆ ಎಂದರು.

ರಾ.ಹ. ದೇಶಪಾಂಡೆ ಹಾಗೂ ಡಾ. ಪಾಟೀಲ ಪುಟ್ಟಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಸತೀಶ ತುರಮರಿ, ವೀರಣ್ಣ ಒಡ್ಡೀನ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ ಹಾಗೂ ನಿಂಗಣ್ಣ ಕುಂಟಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!