ಮೂಲ್ಕಿ: ವಿವಾಹವು ಎರಡು ಕುಟುಂಬಗಳ ಸಮ್ಮಿಲನವಾಗಿದ್ದು, ಯುವ ಜನಾಂಗ ಇತ್ತೀಚಿನ ದಿನಗಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮರೆಯುತ್ತಿದ್ದು, ಧಾರ್ಮಿಕ ಭಾವನೆಗಳು ದೂರವಾಗುತ್ತಿದೆಯೆಂದು ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಎಂ.ಅತುಲ್ ಕುಡ್ವ ಹೇಳಿದರು. ಮೂಲ್ಕಿಯ ಗೌಡ ಸಾರಸ್ವತ ಬ್ರಾಹ್ಮಣ ಸಭಾ ಆಶ್ರಯದಲ್ಲಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಜರಗಿದ ದ್ವಿತೀಯ ಬಾರಿಯ ವಧು-ವರರ ಅನ್ವೇಷಣೆ-ವೈವಾಹಿಕ ಸಮಾವೇಶ ಸಂಬಂಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಗೌಡ ಸಾರಸ್ವತ ಬ್ರಾಹ್ಮಣ ಸಭಾದ ಅಧ್ಯಕ್ಷ ಎಂ. ಸತ್ಯೇಂದ್ರ ಶೆಣೈ ವಹಿಸಿದ್ದು, ವಿಶ್ವ ಸಾರಸ್ವತ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ, ಡಾ. ಮಾಧವ ಕಾಮತ್ ಆರ್ಬೆಟ್ ದಿಕ್ಕೂಚಿ ಭಾಷಣ ಮಾಡಿದರು. ಮಣಿಪಾಲ ಮಾಹೆಯ ಹಿರಿಯ ಪ್ರಾಧ್ಯಾಪಕ ಯು. ರವೀಂದ್ರ ಶೆಣೈ, ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕೆ. ನರಸಿಂಹ ಪೈ, ಜ್ಯೋತಿಷಿ ಎಚ್ ಶಿವರಾಯ ಭಟ್ ಪಾವಂಜೆ, ವ್ಯಾಸ ಮಹರ್ಷಿ ಶಾಲಾ ಮುಖ್ಯೋಪಾಧ್ಯಾಯಿನಿ ಕಾಮಾಕ್ಷಿ ಆರ್. ನಾಯಕ್, ಗೌಡ ಸಾರಸ್ವತ ಬ್ರಾಹ್ಮಣ ಸಭಾದ ಕಾರ್ಯದರ್ಶಿ ವಿನೋದ್ ಶೆಣೈ ,ಕೋಶಾಧಿಕಾರಿ ಪ್ರವೀಣ್ ಕಾಮತ್, ವಿಶ್ವನಾಥ ಶೆಣೈ ಮತ್ತಿತರರು ಉಪಸ್ಥಿತರಿದ್ದರು.ವಿನೋದ್ ಶೆಣೈ ಸ್ವಾಗತಿಸಿದರು, ರಕ್ಷಾ ಶೆಣೈ ನಿರೂಪಿಸಿದರು. ಬಳಿಕ ವಧು-ವರರ ಅನ್ವೇಷಣೆ-ವೈವಾಹಿಕ ಸಮಾವೇಶ ನಡೆಯಿತು.