ನರಗುಂದ: ಯುವಸಮುದಾಯ ಪುಸ್ತಕದಂಗಡಿಯ ಕಡೆಗೆ ಮುಖ ಮಾಡಬೇಕು. ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಬಗೆಯ ಅತ್ಯದ್ಭುತ ಗ್ರಂಥಗಳಿವೆ. ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ನವೀನ ತಂತ್ರಜ್ಞಾನದ ಆಗಮನದಿಂದಾಗಿ ಇಂದು ಎಲ್ಲರಲ್ಲಿಯೂ ಓದುವ ಹವ್ಯಾಸ ಕಡಿಮೆಯಾಗಿ ಜ್ಞಾನದ ಕೊರತೆ ಕಾಡುತ್ತಿದೆ, ಮೊಬೈಲ್ ಹಾಗೂ ಲ್ಯಾಪಟಾಪ್‌ಗಳು ಪುಸ್ತಕಗಳನ್ನು ನುಂಗುತ್ತಿವೆ ಎಂದು ಶಾಂತಲಿಂಗ ಶ್ರೀಗಳು ಹೇಳಿದರು.
ಶ್ರೀನಗರದ ಪಹಲ್ಗಾಮ್‌ದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ ಇಬ್ಬರು ಕನ್ನಡಿಗರು ಸೇರಿ 26 ಜನರನ್ನು ದುರುದ್ದೇಶದಿಂದ ಪ್ರತ್ಯೇಕವಾದಿ ಉಗ್ರಗಾಮಿಗಳು ಹತ್ಯೆ ಮಾಡಿರುವುದು ಹೇಯ ಕೃತ್ಯವಾಗಿದೆ. ಉಗ್ರಗಾಮಿಗಳ ದುಷ್ಟ ಸಂಚಿಗೆ ಬಲಿಯಾದ ಕುಟುಂಬಸ್ಥರಿಗೆ ಈ ಮೂಲಕ ಸಾಂತ್ವನ ತಿಳಿಸುತ್ತೇನೆ, ಉಗ್ರಗಾಮಿಗಳ ಹೇಯ ಕೃತ್ಯಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಆದಷ್ಟು ಬೇಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರೊ. ಆರ್. ಕೆ. ಐನಾಪುರ ಮಾತನಾಡಿ, ಪುಸ್ತಕಕ್ಕಿಂತ ಉತ್ತಮವಾದ ಗೆಳೆಯ ಬೇರೊಬ್ಬರಿಲ್ಲ, ಅದು ಒಂಟಿತನವನ್ನು ದೂರ ಮಾಡುವುದರ ಜೊತೆಗೆ ದುಶ್ಚಟಗಳ ನಿರ್ಮೂಲನೆಗೆ ಪ್ರಬಲವಾದ ಅಸ್ತ್ರವಾಗಿದೆ. ಒಂದು ಪುಸ್ತಕ ನೂರು ಗೆಳೆಯರಿಗೆ ಸಮ ಹೀಗಾಗಿ ಪ್ರತಿಯೊಬ್ಬರು ಕನ್ನಡ ಪುಸ್ತಕವನ್ನು ಓದುವ ಮೂಲಕ ಉತ್ತಮ ಜ್ಞಾನವಂತರಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರೊ. ಆರ್. ಬಿ .ಚಿನಿವಾಲರ, ವೀರಯ್ಯ ಸಾಲಿಮಠ, ಮಹಾಂತೇಶ ಹಿರೇಮಠ, ಮಂಜುನಾಥ ಹಿರೇಮಠ ಸೇರಿದಂತೆ ಮುಂತಾದವರು ಇದ್ದರು.
ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಂತಲಿಂಗ ಶ್ರೀಗಳು ಮಾತನಾಡಿದರು.